ಮನದ ಮಾತು

Friday, June 30, 2006

 

ವಿಜಯ ಕರ್ನಾಟಕ - ಟೈಮ್ಸ್ ಆಫ್ ಇಂಡಿಯ ಬೇಜವಾಬ್ದಾರಿಇದು ನ್ಯಾಯವೇ!?? ಕನ್ನಡಿಗರ ಬಗ್ಗೆ ಇಷ್ಟೋಂದು ನಿರ್ಲಕ್ಷ್ಯ, ಅಸಡ್ಡೆ, ಬೇಜವಾಬ್ದಾರಿ ಯಾಕೆ? ಕನ್ನಡಿಗರ ದೌರ್ಭಾಗ್ಯಕ್ಕೆ ಕೊನೆಯೇ ಇಲ್ಲವೆ?
ಸಮಸ್ತ ಕನ್ನಡಿಗರ ಹೆಮ್ಮೆಯೆಂದೇ ಹೆಸರಾಗಿದ್ದ 'ವಿಜಯ ಕರ್ನಾಟಕ' ದಿನಪತ್ರಿಕೆಯು 'ಟೈಮ್ಸ್ ಆಫ್ ಇಂಡಿಯ' ತೆಕ್ಕೆಗೆ ಬಿದ್ದ ಹೊಸ್ತಿಲಲ್ಲೇ ಈ 'ಅಚಾತುರ್ಯ'ವೇ?
ಬರೆಯುವುದಿನ್ನೇನೂ ಉಳಿದಿಲ್ಲ. "ಇದು ನ್ಯಾಯವೇ!??" ಎಂಬ ನಮ್ಮ ಪ್ರಶ್ನೆಗೆ ಉತ್ತರಿಸುವವರಾರು?

~ ಮನ


Wednesday, June 28, 2006

 

ವಿಂಡೋಸ್ ೨೦೦೦ ಕಂಪ್ಯೂಟರಿನಲ್ಲಿ ಯೂನಿಕೋಡ್ ಕನ್ನಡ


ಮುನ್ನುಡಿ:


ಸುಮಾರು ಒಂದೂವರೆ ವರ್ಷಗಳಿಂದ ಕನ್ನಡ ಯೂನಿಕೋಡ್ ಅಕ್ಷರಗಳು ನನ್ನ ವಿಂಡೋಸ್ ೨೦೦೦ ಕಂಪ್ಯೂಟರಿನಲ್ಲಿ ಸರಿಯಾಗಿ ಕಾಣಿಸುತ್ತಿರಲಿಲ್ಲ. ಒತ್ತು, ದೀರ್ಘಗಳು ಸರಿಯಾಗಿ render ಆಗುತ್ತಿರಲಿಲ್ಲ. ಮೊದಮೊದಲು ಬಹಳ ಕಷ್ಟಪಟ್ಟು ಓದುತ್ತಿದ್ದೆನಾದರೂ, ನಿಧಾನವಾಗಿ ಅದೇ ಅಭ್ಯಾಸವಾಗಿ ಹೋಯಿತು. ಕನ್ನಡ ಅಕ್ಷರಗಳನ್ನು ಓದಲು ಸಾಧ್ಯವಾಗುತಿತ್ತು(ಸ್ವಲ್ಪ ಕಷ್ಟದಿಂದ).
ಸ್ವಲ್ಪದಿನಗಳ ಹಿಂದೆ ಕನ್ನಡಿಗರು.ಕಾಮ್ ಸಮುದಾಯದಲ್ಲಿನ 'ಅಭಯ್' ಎಂಬುವವರು ಕೊಟ್ಟ ಸಲಹೆ ಸೂಚನೆಗಳ ಫಲವಾಗಿ ನನ್ನ ಸಮಸ್ಯೆ ಬಗೆಹರಿಯಿತು!! ಕಸ್ತೂರಿ ಕನ್ನಡದ ಅಕ್ಷರಗಳನ್ನು ಬ್ರೌಸರ್ನಲ್ಲಿ ನೋಡಲು, ಓದಲು ಆನಂದವೋ ಆನಂದ.

ಇದನ್ನು ನನ್ನ ಕೆಲ ಸ್ನೇಹಿತರೊಡನೆ ಹಂಚಿಕೊಂಡಾಗ, ಅವರಿಗೂ ಸಮಸ್ಯೆ ಬಗೆಹರಿಯಿತು. ಅವರಲ್ಲಿ ಒಬ್ಬರಾದ ರಮೇಶ್ ಇದನ್ನು ಬ್ಲಾಗೊಂದರಲ್ಲಿ ಬರೆದು ಪ್ರಕಟಿಸಬೇಕೆಂದು ಪ್ರೇರೇಪಿಸಿದರು. ಅಭಯ್ ಮತ್ತು ರಮೇಶ್ ಅವರಿಗೆ ನನ್ನ ಧನ್ಯವಾದಗಳು!

The below information is written in English as it is mainly meant for those who have Win2000 and having the Unicode Kannada rendering problems.


If you have Windows 2000 installation CD, you can refer to:
http://sampada.net/fonthelp#windows_2000


If you dont have Windows 2000 installation CD, you can read further.


After a long wait, finally I got a solution(from www.kannadigaru.com forum) without needing Windows 2000 installation CD.


Solution is based on information present in this page:
http://www.aksharamala.com/help/chm/Installation/win2k.html


Whichever application needs to render the unicode kannada will need to have 1) A true type kannada font(eg: Tunga.ttf) and 2) Uniscribe Unicode script processor (usp10.dll)


Just a two simple steps.

1. Install any Kannada unicode font. For more details you can visit this page: http://salrc.uchicago.edu/resources/fonts/available/kannada/

(Make sure the font is placed into your Windows 2000 fonts directory, C:\WINNT\Fonts.)


2. Download and install USP10.dll (Unicode Script Processor) from this website and put into your Windows 2000 Internet Explorer directory, C:\Program Files\Internet Explorer.
Note: Since you are placing usp10.dll only in IE executables directory, the unicode Kannada renders properly in IE only.

If you have Arial Unicode MS, then you should be able to see proper rendering in MS Office applications such as MS-Word, MS-Excel, Powerpoint etc.

See the above aksharamala page for more details on display in all the other applications.Please Note: This blog article is only an attempt to explain how my problem was solved. For any problems/issues that may arise by following the above mentioned steps, I or any of the links present in this blog entry, cannot be held responsible.
ಮುಗಿಸುವ ಮುನ್ನ:

ಕನ್ನಡವನ್ನು ಕನ್ನಡ ಲಿಪಿಯಲ್ಲಿ ಓದಿದರೆ ತೃಪ್ತಿ ಮತ್ತು ಕ್ಷೇಮವೂ ಕೂಡ. ಕನ್ನಡ ಅಕ್ಷರಗಳಲ್ಲಿ ಸರಿಯಾಗಿ ಓದಲು ಕಾಣದೆ ಅನುಭವಿಸುವ ಯಾತನೆಯನ್ನು ನಾನು ಚೆನ್ನಾಗಿ ಬಲ್ಲೆ. ಈ ಲೇಖನದಿಂದ ಯಾರಿಗಾದರೂ ಆ ಯಾತನೆ ನಿವಾರಣೆಯಾದಲ್ಲಿ ನಮ್ಮ ಶ್ರಮ ಸಾರ್ಥಕ. :)

ಈ ಲೇಖನದಲ್ಲೇನಾದರೂ ತಪ್ಪುಗಳು ಕಂಡು ಬಂದರೆ ದಯವಿಟ್ಟು ತಿಳಿಸಿ.~ ಮನ

Link

Monday, June 26, 2006

 

'ಹಂಸಗೀತೆ'ಯ ಸಂಗೀತದ ಹಿಂದೆ....


ಮುನ್ನುಡಿ:

'ಹಂಸಗೀತೆ'
- ಕನ್ನಡದ ಪ್ರಸಿದ್ಧ ಚಿತ್ರಗಳಲ್ಲೊಂದು.
ಚಿತ್ರದುರ್ಗದ ಮದಕರಿನಾಯಕನ ಬಳಿ ಆಸ್ಥಾನ ವಿದ್ವಾಂಸರಾಗಿದ್ದ ಶ್ರೀ.ವೆಂಕಟಸುಬ್ಬಯ್ಯನವರ ಜೀವನವನ್ನಾಧರಿಸಿ ತ.ರಾ.ಸುಬ್ಬರಾಯರು ಬರೆದಿದ್ದ ಕೃತಿಯ ಪ್ರೇರಣೆಯಿಂದ ಈ ಸಂಗೀತಮಯ ಚಿತ್ರವನ್ನು ನಿರ್ಮಿಸಲಾಯಿತು. ಜಿ.ವಿ.ಅಯ್ಯರ್ ನಿರ್ದೇಶಿಸಿ, ನಿರ್ಮಿಸಿದ ಈ ಚಿತ್ರ ಅನಂತನಾಗ್ ಅವರ ಎರಡನೇ ಕನ್ನಡ ಚಲನಚಿತ್ರವೂ ಹೌದು. ಅನಂತನಾಗ್ ಅವರ ಕಲಾಪ್ರೌಢಿಮೆಗೆ ಆರಂಭದ ದಿನಗಳಲ್ಲೇ ಓರೆ ಹಚ್ಚಿದ ಚಿತ್ರವಿದು. ಸಂಗೀತ ಪ್ರಧಾನವಾದ ಈ ಚಿತ್ರಕ್ಕೆ 'ಅತ್ಯುತ್ತಮ ಸಂಗೀತ' ಪ್ರಶಸ್ತಿಯ ಗರಿಯು ದೊರಕಿತು. ಆ ಸಂಗೀತದ ಹಿಂದಿನ ಅಂಶಗಳ ಬಗ್ಗೆ ಒಂದು ಪರಿಚಯ...ಈ ಲೇಖನ.'ಹಂಸಗೀತೆ' ಚಿತ್ರವು ಬಿಡುಗಡೆಯಾದದ್ದು ೧೯೭೫. ಸಂಗೀತ ವಿದ್ವಾಂಸರೊಬ್ಬರ ಜೀವನವನ್ನಾಧರಿಸಿದ ಸಂಗೀತಮಯ ಚಿತ್ರ. ಈ ಚಿತ್ರದಲ್ಲಿನ ಹಾಡೊಂದರ ಗಾಯನಕ್ಕೆ ರಾಷ್ಟ್ರಪ್ರಶಸ್ತಿಯನ್ನೂ, ಚಿತ್ರದ ಸಂಗೀತ ನಿರ್ದೇಶನಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನೂ ಡಾ.ಎಂ.ಬಾಲಮುರಳಿಕೃಷ್ಣ ಅವರು ಪಡೆದರು.
ಇದು ಹಳೆಯ ಮಾತಾಯಿತು. ಸುಮಾರು ಇಪ್ಪತ್ತೇಳು ವರ್ಷಗಳ ನಂತರ:
ಈ ಚಿತ್ರದ ನಿರ್ದೇಶಕರೂ, ನಿರ್ಮಾಪಕರಾದ ಸ್ವತಃ ಜಿ.ವಿ.ಅಯ್ಯರ್ ಅವರೇ ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಈ ಚಿತ್ರದ ಸಂಗೀತದ ಹಿಂದಿನ ರಹಸ್ಯವನ್ನು ಹೊರಗೆಡವಿದರು.
ಜಿ.ವಿ.ಅಯ್ಯರ್ ಹೇಳಿಕೆಯ ಸಾರಾಂಶ:

ಹಂಸಗೀತೆ ಚಿತ್ರಕ್ಕೆ ಸಂಗೀತ ನೀಡಿದವರು ಯಾರೆಂದುಕೊಂಡಿದ್ದೀರಿ? ಬಾಲಮುರಳಿಕೃಷ್ಣ ಅವರಲ್ಲ. ಬದಲಾಗಿ, ಟಿ.ಜಿ.ಲಿಂಗಪ್ಪ!
ಈ ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನು ಬಿ.ವಿ.ಕಾರಂತರಿಂದ ಕೊಡಿಸಬೇಕು, ಆ ನಿಟ್ಟಿನಲ್ಲಿ ಅವರ ಪ್ರತಿಭೆ ಹೊರಬರಬೇಕೆಂದು ನನ್ನ ಹಂಬಲವಾಗಿತ್ತು. ಆದರೆ ಲಿಂಗಪ್ಪನವರು ಇದಕ್ಕೆ ಒಪ್ಪದಾದರು. ಚಿತ್ರದ ಸಂಪೂರ್ಣ ಸಂಗೀತದ ಜವಾಬ್ದಾರಿ ತಮ್ಮದಾಗಿರಬೇಕು ಎಂದು ಅವರ ವಾದವಾಗಿತ್ತು. ಕೊನೆಗೆ, ಅವರಿಗೆ ಸಲ್ಲಬೇಕಿದ್ದ ಹಣವನ್ನು ಸಲ್ಲಿಸಿದೆ, ನಂತರ ಅವರು ಚಿತ್ರದಿಮ್ದ ಹೊರಗೆ ಹೋದರು. ಕಾರಂತರು ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದರು.
ಚಿತ್ರವು ಸಂಪೂರ್ಣವಾಗಿ ತಯಾರಾಗಿ, ಚಿತ್ರದ ಟೈಟಲ್ ಕಾರ್ಡ್ಸ್ ಸಿದ್ಧಪಡಿಸುವಾಗ ಒಂದು ಸಮಸ್ಯೆ ಎದುರಾಯಿತು. ಸಂಗೀತ ನಿರ್ದೇಶಕರೆಂದು ಯಾರ ಹೆಸರನ್ನು ಹಾಕಬೇಕೆಂದು. "ರಾಗ ಸಂಯೋಜನೆ ನನ್ನದಲ್ಲ, ಮುಖ್ಯ ಸಂಗೀತ ನನ್ನದಲ್ಲ. ಹಿನ್ನೆಲೆ ಸಂಗೀತವಷ್ಟೆ ನನ್ನ ಕಾಣಿಕೆ ಈ ಚಿತ್ರದಲ್ಲಿ. ಆದ್ದರಿಂದ ನನ್ನ ಹೆಸರು ಹಾಕುವುದು ಸರಿಯಾಗುವುದಿಲ್ಲ" ಎಂದು ಕಾರಂತರು ಸಮರ್ಥಿಸಿಕೊಂಡರು. ನಂತರ ಲಿಂಗಪ್ಪನವರನ್ನು ಸಂಪರ್ಕಿಸಿದಾಗ, ಅವರು "ನಾನು ಚಿತ್ರತಂಡದಿಂದ ಹೊರಬಂದಿದ್ದೇನೆ. ನನಗೂ ಈ ಚಿತ್ರಕ್ಕೂ ಸಂಬಂಧವಿಲ್ಲ. ಆದಕಾರಣ, ನನ್ನ ಹೆಸರು ನೀವು ಹಾಕಲು ಸಾಧ್ಯವಿಲ್ಲ" ಎಂದು ಹೇಳಿ ಹೊರಗುಳಿದರು.
ಈ ಜಿಜ್ಞಾಸೆಯಲ್ಲಿರುವಾಗ, ಬಾಲಮುರಳಿಕೃಷ್ಣನವರು ಈ ರೀತಿ ಹೇಳಿದರು: "ಅವರು ಸಂಗೀತವನ್ನು ಕೊಟ್ಟಿದ್ದಾರೆ. ಆದರೆ ನಾನು ಸುಶ್ರಾವ್ಯವಾಗಿ ಹಾಡಿದ್ದೇನೆ. ಹಾಗಾಗಿ, ನೀವು ನನ್ನ ಹೆಸರನ್ನು ಸಂಗೀತ ನಿರ್ದೇಶಕನೆಂದು ಹಾಕಬಹುದು". ನಾವು ಹಾಗೆಯೇ ಮಾಡಿದೆವು. ನಂತರ, ಅವರಿಗೆ 'ಅತ್ಯುತ್ತಮ ಸಂಗೀತ ನಿರ್ದೇಶಕ' ಪ್ರಶಸ್ತಿಯೂ ದೊರಕಿತು!


ಮುಗಿಸುವ ಮುನ್ನ:

ಚಿತ್ರರಂಗ ಒಂದು ಮಾಯಾಲೋಕ. ಪರದೆಯ ಮೇಲೆ ಕಾಣುವುದು ಒಂದು ಚಿತ್ರ, ಕೇಳಿಸುವುದು ಒಂದು ಶಬ್ಧವಾದರೆ, ಪರದೆಯ ಹಿಂದೆ ನೂರೆಂಟು ದೃಶ್ಯಗಳು, ಶಬ್ಧಗಳು, ವಿದ್ಯಮಾನಗಳು. ಹಲವಾರು ವರ್ಷಗಳಿಂದ ಸುಪ್ತವಾಗಿರುವ ರಹಸ್ಯಗಳು ಯಾವುದೇ ಕ್ಷಣದಲ್ಲಿ ಹೊರಬೀಳುತ್ತವೆ.
ಈ ಮೇಲಿನ ರಹಸ್ಯ ಹೊರಬಂದಾಗ ವಿಧವಿಧವಾದ ಅಭಿಪ್ರಾಯಗಳು ಕೇಳಿಬಂದವು, ಬರುತ್ತಿವೆ.
"ಇಷ್ಟು ದಿನಗಳಿಂದ, ವರ್ಷಗಳಿಂದ ಗೋಪ್ಯವಾಗಿಟ್ಟಿದ್ದ ರಹಸ್ಯವನ್ನು ಅಯ್ಯರ್ ಏಕೆ ಬಯಲು ಮಾಡಿದರು? ಅದರ ಅಗತ್ಯವಿತ್ತೆ?" ಎಂದೆನ್ನುವವರು ಕೆಲವರು. "ಇಷ್ಟು ವರ್ಷಗಳ ಮೇಲಾದರೂ ಸತ್ಯಾಂಶ ಹೊರ ಬಂತಲ್ಲಾ! ಯಾವಾಗ ಹೊರಬಂದರೆ ಏನಂತೆ? ಸತ್ಯ ಸತ್ಯವೇ" ಎನ್ನುವವರು ಹಲವರು.
ಇದರಿಂದ ಅಯ್ಯರ್, ಬಾಲಮುರಳಿಕೃಷ್ಣ, ಟಿ.ಜಿ.ಲಿಂಗಪ್ಪ, ಬಿ.ವಿ.ಕಾರಂತ್ ಇವರ ವ್ಯಕ್ತಿವರ್ಚಸ್ಸಿನಲ್ಲೇನಾದರೂ ವ್ಯತ್ಯಾಸಗಳಾದುವೇ/ಆಗಬಹುದೇ? ಇದು ಅವರವರ ನಂಬಿಕೆಗಳಿಗೆ ಬಿಟ್ಟದ್ದು.


~ ಮನ

Saturday, June 24, 2006

 

ವಿಘ್ನೇಶ್ವರನ ನೆನೆಯಲು ನೂರೆಂಟು ಹೆಸರುಗಳು

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇ ಸರ್ವ ವಿಜ್ಞೋಪಃ ಶಾಂತಯೇ!

ವಿಘ್ನನಿವಾರಕನಾದ ಗೌರಿಸುತ ಗಣೇಶನ ನೂರೆಂಟು ಹೆಸರುಗಳನ್ನು (ಅಷ್ಟೋತ್ತರ ನಾಮಾವಳಿ) ಕನ್ನಡದಲ್ಲಿ ಬರೆದು, ಪ್ರತಿಯೊಂದು ಹೆಸರಿನ ಅರ್ಥಗಳನ್ನು ಬರೆಯುವ ಪ್ರಯತ್ನ ಮಾಡಿದ್ದೇನೆ.
ಇವುಗಳಲ್ಲಿ ಏನಾದರು ತಪ್ಪು/ಅಚಾತುರ್ಯ ಕಂಡು ಬಂದರೆ, ದಯವಿಟ್ಟು ತಿಳಿಸಿರಿ. ಸರಿ ಪಡಿಸುವೆ.

ಇದಕ್ಕೆ ಆಧಾರ: ನನ್ನ ಸ್ನೇಹಿತರೊಬ್ಬರು ಕಳಿಸಿದ ಒಂದು ಫಾರ್ವಡ್ ವಿ-ಅಂಚೆ ಮತ್ತು ಈ ತಾಣ http://www.eprarthana.com/html/ganesh108.aspಜೈ ಗಣೇಶಗಣೇಶನ ನೂರೆಂಟು(೧೦೮) ಹೆಸರುಗಳು

ಹೆಸರಿನ ಅರ್ಥ

Akhurath ಅಖುರಥ One who has Mouse as His Charioteer ಇಲಿಯನ್ನು ತನ್ನ ವಾಹನವಾಗಿರಿಸಿಕೊಂಡವ
Alampata ಆಲಂಪತ Ever Eternal Lord ಎಂದಿಗೂ ಅನಂತನಾದ ದೇವ
Amit ಅಮಿತ Incomparable Lord ಕೊನೆಯಿಲ್ಲದ ದೇವ
Anantachidrupamayam ಅನಂತಚಿದೃಪಮಯಂ Infinite and Consciousness Personified ಅನಂತ ಜ್ಞಾನ ಉಳ್ಳವ
Avaneesh ಅವನೀಶ್ Lord of the whole World ಭೂಮಿಯ ಒಡೆಯ
Avighna ಅವಿಘ್ನ Remover of Obstacles ವಿಘ್ನ ನಿವಾರಕ
Balaganapati ಬಾಲಗಣಪತಿ Beloved and Lovable Child ಪ್ರೀತಿ, ಆತ್ಮೀಯತೆಯಿಂದ ಮುದ್ದಿಸಲ್ಪಡುವವ, ಬಾಲಕ ಗಣಪತಿ
Bhalchandra ಬಾಲಚಂದ್ರ Moon-Crested Lord ಚಂದ್ರನಿಂದಲಂಕೃತನಾದವ
Bheema ಭೀಮ Huge and Gigantic ಸ್ಥೂಲಕಾಯದ ದೇಹಧಾರ್ಢ್ಯ ಉಳ್ಳವ
೧೦ Bhupati ಭೂಪತಿ Lord of the Gods ಭೂಮಿಗೆ ಯಜಮಾನ
೧೧ Bhuvanpati ಭುವನಪತಿ God of the Gods ಜಗತ್ತಿನ ಒಡೆಯ
೧೨ Buddhinath ಬುದ್ದಿನಾಥ God of Wisdom ಬುದ್ದಿಯನ್ನು, ಜ್ಞಾನವನ್ನು ದಯಪಾಲಿಸುವವನು
೧೩ Buddhipriya ಬುದ್ಧಿಪ್ರಿಯ Knowledge Bestower ಬುದ್ದಿವಂತ, ಜ್ಞಾನವಂತ
೧೪ Buddhividhata ಬುದ್ಧಿವಿಧಾತ God of Knowledge ಜ್ಞಾನದ ದೇವತೆ
೧೫ Chaturbhuj ಚತುರ್ಭುಜ One who has Four Arms ನಾಲ್ಕು ಕೈಗಳುಳ್ಳವನು
೧೬ Devadeva ದೇವದೇವ Lord of All Lords ದೇವತೆಗಳ ದೇವ
೧೭ Devantakanashakarin ದೇವಾಂತಕನಾಶಕ Destroyer of Evils and Asuras ರಾಕ್ಷಸರನ್ನು, ಅಸುರರನ್ನು ನಾಶಪಡಿಸುವವನು
೧೮ Devavrata ದೇವವ್ರತ One who accepts all Penances ಭಕ್ತರ ಪ್ರಾಯಶ್ಚಿತ್ತಗಳನ್ನು ಒಪ್ಪಿಕೊಳ್ಳುವ ದೇವತೆ
೧೯ Devendrashika ದೇವೇಂದ್ರಶಿಖಾ Protector of All Gods ದೇವತೆಗಳ ಹಿತರಕ್ಷಣೆ ಮಾಡುವವ
೨೦ Dharmik ಧಾರ್ಮಿಕ One who gives Charity ಧರ್ಮ ನಿರತನಾದವ
೨೧ Dhoomravarna ಧೂಮ್ರವರ್ಣ Smoke-Hued Lord ಧೂಮ್ರ ಬಣ್ಣದ ದೇವತೆ
೨೨ Durja ದುರ್ಜ Invincible Lord ಅದ್ವಿತೀಯ, ಅಜೇಯ ದೇವತೆ
೨೩ Dvaimatura ದ್ವೈಮಾತುರ One who has two Mothers ಇಬ್ಬರು ತಾಯಂದಿರನ್ನು ಉಳ್ಳವ
೨೪ Ekaakshara ಏಕಾಕ್ಷರ He of the Single Syllable ಒಂದು ಅಕ್ಷರದವ
೨೫ Ekadanta ಏಕದಂತ Single-Tusked Lord ಒಂದು ದಂತ (ಹಲ್ಲು) ಉಳ್ಳವ
೨೬ Ekadrishta ಏಕದೃಷ್ಟ Single-Tusked Lord ಒಂದು ದಂತ (ಹಲ್ಲು) ಉಳ್ಳವ
೨೭ Eshanputra ಈಶಪುತ್ರ Lord Shiva's Son ಈಶ್ವರನ ಪುತ್ರ
೨೮ Gadadhara ಗದಾಧರ One who has The Mace as His Weapon ಗದೆಯನ್ನು ಆಯುಧವನ್ನಾಗಿ ಉಪಯೋಗಿಸುವವ
೨೯ Gajakarna ಗಜಕರ್ಣ One who has Eyes like an Elephant ಆನೆಯ ಕಣ್ಣುಗಳನ್ನು ಹೊಂದಿರುವವ
೩೦ Gajanana ಗಜಾನನ Elephant-Faced Lord ಆನೆಯ ಮುಖವನ್ನು ಹೊಂದಿರುವವ
೩೧ Gajananeti ಗಜನನೇತಿ Elephant-Faced Lord ಆನೆಯ ಮುಖದ ತರಹದ ಮುಖವನ್ನು ಹೊಂದಿರುವವ
೩೨ Gajavakra ಗಜವಕ್ರ Trunk of The Elephant ಆನೆಯ ಸೊಂಡಿಲುಳ್ಳವ
೩೩ Gajavaktra ಗಜವಕ್ತ್ರ One who has Mouth like an Elephant ಆನೆಯ ಬಾಯಂತೆ ಬಾಯನ್ನು ಉಳ್ಳವ
೩೪ Ganadhakshya ಗಣದಕ್ಷಯ (ಗಣನಾಯಕ) Lord of All Ganas (Gods) ಗಣಗಳಿಗೆಲ್ಲಾ(ದೇವತೆಗಳು) ಅಧಿನಾಯಕ
೩೫ Ganadhyakshina ಗಣಧ್ಯಕ್ಷಿನ Leader of All The Celestial Bodies ಗಣಗಳಿಗೆಲ್ಲಾ(ದೇವತೆಗಳು) ಅಧ್ಯಕ್ಷ
೩೬ Ganapati ಗಣಪತಿ Lord of All Ganas (Gods) ಗಣನಾಯಕ, ದೇವತೆಗಳಿಗೆಲ್ಲಾ ಒಡೆಯ
೩೭ Gaurisuta ಗೌರಿಸುತ The Son of Gauri (Parvati) ಗೌರಿಯ ಪುತ್ರ
೩೮ Gunina ಗುಣಿನ One who is The Master of All Virtues ಸರ್ವ ಜ್ಞಾನ ಉಳ್ಳವನು
೩೯ Haridra ಹರಿದ್ರ One who is Golden Coloured ಬಂಗಾರದ ಬಣ್ಣದ ಮೈ ಉಳ್ಳವನು
೪೦ Heramba ಹೇರಂಬಾ Mother's Beloved Son ತಾಯಿಯ ಮುದ್ದಿನ ಮಗ
೪೧ Kapila ಕಪಿಲಾ Yellowish-Brown Coloured ಹಳದಿಮಿಶ್ರಿತ ಕಂದುಬಣ್ಣದ ಮೈ ಉಳ್ಳವ
೪೨ Kaveesha ಕವೀಶ Master of Poets ಕವಿಗಳಿಗೆಲಾ ಒಡೆಯ
೪೩ Kriti ಕೃತಿ Lord of Music ಸಂಗೀತದ ದೇವತೆ
೪೪ Kripalu ಕೃಪಾಳು Merciful Lord ಕರುಣಾಳಾದ ದೇವತೆ
೪೫ Krishapingaksha ಕೃಷಪಿಂಗಾಕ್ಷ Yellowish-Brown Eyed ಹಳದಿಮಿಶ್ರಿತ ಕಂದುಬಣ್ಣದ ಕಣ್ಣುಗಳುಳ್ಳವ
೪೬ Kshamakaram ಕ್ಷಮಾಕರಂ The Place of Forgiveness ಕ್ಷಮೆಯನ್ನು ದಯಪಾಲಿಸುವವ
೪೭ Kshipra ಕ್ಷಿಪ್ರ One who is easy to Appease ಸರಳವಾಗಿ, ಸುಲಭವಾಗಿ ಭಕ್ತರಿಗೆ ಒಲಿಯುವವ
೪೮ Lambakarna ಲಂಬಕರ್ಣ Large-Eared Lord ಉದ್ದನೆಯ ಕಿವಿಗಳುಳ್ಳವ
೪೯ Lambodara ಲಂಬೋದರ The Huge Bellied Lord ಉದ್ದನೆಯ ಹೊಟ್ಟೆಯನ್ನುಳ್ಳವ
೫೦ Mahabala ಮಹಾಬಲ Enormously Strong Lord ಅತ್ಯಂತ ಬಲಶಾಲಿಯಾದ ದೇವತೆ
೫೧ Mahaganapati ಮಹಾಗಣಪತಿ Omnipotent and Supreme Lord ಸರ್ವಾಧಿಕಾರಿ, ಸರ್ವೋಚ್ಛ ದೇವತೆ
೫೨ Maheshwaram ಮಹೇಶ್ವರಂ Lord of The Universe ಮಹಾ ಈಶ್ವರನ ಸಮಾನರಾದವ
೫೩ Mangalamurti ಮಂಗಳಮೂರ್ತಿ All Auspicious Lord ಮಂಗಳಕರನಾದ ದೇವತಾ ಮೂರ್ತಿ
೫೪ Manomay ಮನೋಮಯಿ Winner of Hearts ಮನಸ್ಸನ್ನು ಗೆಲ್ಲುವವನು
೫೫ Mrityuanjaya ಮೃತ್ಯುಂಜಯ Conqueror of Death ಸಾವನ್ನು ಗೆದ್ದವನು
೫೬ Mundakarama ಮುಂದಾಕರಮ Abode of Happiness ಸಂತಸವನ್ನು ಮನೆ ಮಾಡಿಕೊಂಡಿರುವವ
೫೭ Muktidaya ಮುಕ್ತಿದಾಯ Bestower of Eternal Bliss ಮುಕ್ತಿಯನ್ನು ದಯಪಾಲಿಸುವವ
೫೮ Musikvahana ಮೂಷಿಕವಾಹನ One who has Mouse as Charioteer ಇಲಿಯನ್ನು ತನ್ನ ವಾಹನವಾಗಿರಿಸಿಕೊಂಡವ
೫೯ Nadapratithishta ನಾದಪ್ರತಿಥಿಷ್ಟ One who Appreciates and Loves Music ನಾದ ಸುಧೆಯನ್ನು ಆಸ್ವಾಧಿಸುವವ, ಮೆಚ್ಚುವವ
೬೦ Namasthetu ನಮಸ್ತೇತು Vanquisher of All Evils and Vices and Sins ದುಷ್ಟಶಕ್ತಿಗಳನ್ನು, ದುಷ್ಟ ವಿಚಾರಗಳನ್ನು ನಿರ್ಮೂಲನ ಮಾಡುವವ
೬೧ Nandana ನಂದನ Lord Shiva's Son ಶಿವನ ಮಗ
೬೨ Nideeshwaram ನಿಧೀಶ್ವರಂ Giver of Wealth and Treasures ಆಯುರಾರೋಗ್ಯಐಶ್ವರ್ಯವನ್ನು ದಯಪಾಲಿಸುವವ
೬೩ Omkara ಓಂಕಾರ One who has the Form Of OM ಓಂಕಾರ ಸ್ವರೂಪಿಯಾದವನು
೬೪ Pitambara ಪೀತಾಂಬರ One who has Yellow-Coloured Body ಹಳದಿಬಣ್ಣದ ಮೈ ಉಳ್ಳವನು
೬೫ Pramoda ಪ್ರಮೋದ Lord of All Abodes ಮೋದಕಪ್ರಿಯ, ಮೋದಕಗಳ ಒಡೆಯ
೬೬ Prathameshwara ಪ್ರಥಮೇಶ್ವರ First Among All ಎಲ್ಲಾ ಕಡೆ ಮೊದಲಾಗಿರುವವನು, ಪ್ರಥಮ ಪೂಜೆಯ ದೇವತೆ
೬೭ Purush ಪುರುಷ್ The Omnipotent Personality ಅಪ್ರತಿಮ ಪುರುಷ ವ್ಯಕ್ತಿತ್ವ ಉಳ್ಳವನು
೬೮ Rakta ರಕ್ತ One who has Red-Coloured Body ರಕ್ತದಂತೆ ಕೆಂಪಗಿನ ಕಣ್ಣುಗಳುಳ್ಳವನು
೬೯ Rudrapriya ರುದ್ರಪ್ರಿಯ Beloved Of Lord Shiva ಶಿವನಿಗೆ ಪ್ರಿಯನಾದವನು
೭೦ Sarvadevatman ಸರ್ವದೇವಾತ್ಮನ್ Acceptor of All Celestial Offerings ಸರ್ವಕಾಣಿಕೆಗಳನ್ನು,ಪೂಜೆಗಳನ್ನು, ಒಪ್ಪಿಸಿಕೊಳ್ಳುವವನು
೭೧ Sarvasiddhanta ಸರ್ವಸಿದ್ಧಾಂತ Bestower of Skills and Wisdom ವಿದ್ಯೆ, ಬುದ್ದಿ, ಜ್ಞಾನವನ್ನು ಸಿದ್ದಿಸುವವನು
೭೨ Sarvatman ಸರ್ವಾತ್ಮನ್ Protector of The Universe ಜಗತ್ತನ್ನು ಸಂರಕ್ಷಿಸುತ್ತಿರುವವನು
೭೩ Shambhavi ಶಾಂಭವಿ The Son of Parvati ಶಾಂಭವಿಯಾದ ತಾಯಿ ಪಾರ್ವತಿಯ, ಮಗನು
೭೪ Shashivarnam ಶಶಿವರ್ಣಂ One who has a Moon like Complexion ಬೆಳದಿಂಗಳ ಬೆಳಕಿನಂತಿರುವವನು, ಚಂದ್ರನ ಬಣ್ಣವುಳ್ಳವನು
೭೫ Shoorpakarna ಶೂರ್ಪಕರ್ಣ Large-Eared Lord ಬೃಹದಾಕಾರದ ಕಿವಿಗಳುಳ್ಳವನು
೭೬ Shuban ಶುಭನ್ All Auspicious Lord ಶುಭದಾಯಕನಾದ ದೇವತೆಯು
೭೭ Shubhagunakanan ಶುಭಗುಣಕಣನ್ One who is The Master of All Virtues ಸರ್ವಕಾಯ, ಸರ್ವವಿಧಿಯನ್ನು ಬಲ್ಲವ
೭೮ Shweta ಶ್ವೇತ One who is as Pure as the White Colour ಬಿಳಿಯ ಬಣ್ಣದಂತೆ ಶುಭ್ರವಾಗಿ, ಪವಿತ್ರವಾಗಿರುವವನು
೭೯ Siddhidhata ಸಿದ್ದಿದಾತ Bestower of Success and Accomplishments ಕೀರ್ತಿಯಶಸ್ಸನ್ನು ದಯಪಾಲಿಸುವವ
೮೦ Siddhipriya ಸಿದ್ದಿಪ್ರಿಯ Bestower of Wishes and Boons ಸದಾಕಾಲ ಆಶೀರ್ವಾದವನ್ನು ಸಿದ್ದಿಸುವವ
೮೧ Siddhivinayaka ಸಿದ್ದಿವಿನಾಯಕ Bestower of Success ಯಶಸ್ಸಿನ ಅಧಿದೇವತೆ, ಯಶಸ್ಸನ್ನು ಕರುಣಿಸುವವ
೮೨
Skandapurvaja ಸ್ಕಂದಪೂರ್ವಜ Elder Brother of Skand (Lord Kartik) ಸುಬ್ರಹ್ಮಣ್ಯನ ಅಣ್ಣ
೮೩ Sumukha ಸುಮುಖ Auspicious Face ಪವಿತ್ರವಾದ, ಸ್ತುತ್ಯಾರ್ಹ ಮುಖವನ್ನುಳ್ಳವ
೮೪ Sureshwaram ಸುರೇಶ್ವರಂ Lord of All Lords ಸುರದೇವತಿಗಳಿಗೆಲ್ಲಾ ಒಡೆಯನಾದವ
೮೫ Swaroop ಸ್ವರೂಪ್ Lover of Beauty ರೂಪವಂತನೂ, ಸುಂದರ ವದನ ಉಳ್ಳವನು
೮೬ Tarun ತರುಣ್ Ageless ಸದಾಕಾಲ ತರುಣಂತೆಯೇ ಇರುವವ
೮೭ Uddanda ಉದ್ದಂಡ Nemesis of Evils and Vices ದುಷ್ಟಶಕ್ತಿಗಳಿಗೆ, ದುರ್ಜನರಿಗೆ ಶಾಪವನ್ನು ನೀಡುವವನು, ದುಷ್ಟ ಶಿಕ್ಷಕ
೮೮ Umaputra ಉಮಾಪುತ್ರ The Son of Goddess Uma (Parvati) ಪಾರ್ವತಿಯ ಮಗ
೮೯ Vakratunda ವಕ್ರತುಂಡ Curved Trunk Lord ಬಾಗಿದ ಸೊಂಡಿಲುಳ್ಳ ದೇವತೆ
೯೦ Varaganapati ವರಗಣಪತಿ Bestower of Boons ಬೇಡಿದ ವರ ನೀಡುವ ದೇವತೆ
೯೧ Varaprada ವರಪ್ರದ Granter of Wishes and Boons ವರಗಳನ್ನು ದಯಪಾಲಿಸುವವ
೯೨ Varadavinayaka ವರದವಿನಾಯಕ Bestower of Success ಯಶಸ್ಸಿನ್ನು ಹರಸಿ ವರವನ್ನೀಯುವವ
೯೩ Veeraganapati ವೀರಗಣಪತಿ Heroic Lord ವೀರನಾದ ಗಣೇಶ ದೇವತೆ
೯೪ Vidyavaridhi ವಿದ್ಯಾವಾರಿಧಿ God of Wisdom ವಿದ್ಯೆಯ ಅಧಿದೇವತೆ
೯೫ Vighnahara ವಿಘ್ನಹರ Remover of Obstacles ವಿಘ್ನಗಳನ್ನು ಹರಿಸುವವನು
೯೬ Vignaharta ವಿಘ್ನಹರ್ತ Demolisher of Obstacles ವಿಘ್ನಗಳನ್ನು ನಾಶಪಡಿಸುವವನು
೯೭ Vighnaraja ವಿಘ್ನರಾಜ Lord of All Hindrances ವಿಘ್ನಗಳನ್ನೆಲ್ಲಾ ಜಯಿಸಿ, ಅದರ ಒಡೆಯನಾಗಿರುವವನು
೯೮ Vighnarajendra ವಿಘ್ನರಾಜೇಂದ್ರ Lord of All Obstacles ವಿಘ್ನಗಳನ್ನೆಲ್ಲಾ ಜಯಿಸಿ,ವಿಘ್ನಗಳ ರಾಜನಾಗಿರುವವನು
೯೯ Vighnavinashanaya ವಿಘ್ನವಿನಾಶಾನಯ Destroyer of All Obstacles and Impediments ವಿಘ್ನಗಳನ್ನು ಸರ್ವನಾಶ ಮಾಡುವವನು
೧೦೦ Vigneshwara ವಿಘ್ನೇಶ್ವರ Lord of All Obstacles ವಿಘ್ನನಿವಾರಕ, ನಿಘ್ನಗಳಿಂದ ಕಾಪಾಡುವವನು
೧೦೧ Vikat ವಿಕತ್ Huge and Gigantic ಬೃಹದಾಕಾರದ ದೇಹವುಳ್ಳವನು
೧೦೨ Vinayaka ವಿನಾಯಕ Lord of All ಸರ್ವರಿಗೂ ನಾಯಕನಾದವನು
೧೦೩ Vishwamukha ವಿಶ್ವಮುಖ Master of The Universe ಜಗತ್ತಿಗೇ ಮುಖದಂತಿರುವವನು
೧೦೪ Vishwaraja ವಿಶ್ವರಾಜ King of The World ಪ್ರಪಂಚದೊಡೆಯ
೧೦೫ Yagnakaya ಯಜ್ಞಕಾಯ Acceptor of All Sacred and Sacrficial Offerings ಯಜ್ಞಗಳಲ್ಲಿ ಸಲ್ಲಿಸುವ ಭಕ್ತಿಸಮರ್ಪಣೆಗಳನ್ನು ಸ್ವೀಕರಿಸುವವನು
೧೦೬ Yashaskaram ಯಶಸ್ಕರಂ Bestower of Fame and Fortune ಯಶಸ್ಸನ್ನು, ಅದೃಷ್ಟವನ್ನು, ಸಿದ್ದಿಸುವವನು
೧೦೭ Yashvasin ಯಶಸ್ವಿನ್ Beloved and Ever Popular Lord ಅತ್ಯಂತ ಪ್ರೀತಿದಾಯಕನಾದ, ಅತ್ಯಂತ ಜನಪ್ರಿಯನಾದ ದೇವತೆಯು
೧೦೮ Yogadhipa ಯೋಗದೀಪ The Lord of Meditation ಯೋಗಕಾರಕನೂ, ಯೋಗದ ಅಧಿದೇವತೆಯೂ ಆದವನುಸ್ಕಂದಪೂರ್ವಜನು ತಮಗೆಲ್ಲರಿಗೂ ಹರಸಿ ಆಶೀರ್ವದಿಸಲಿ.
~ ಮನ

Wednesday, June 21, 2006

 

"ಕರ್ಣನ ನಿಜರೂಪ" ಲೇಖನಕ್ಕೆ ನನ್ನ ಪ್ರತಿಕ್ರಿಯೆ


'ದಟ್ಸ್ ಕನ್ನಡ.ಕಾಂ' - ಕನ್ನಡದ ಜನಪ್ರಿಯ ಅಂತರ್ಜಾಲ ತಾಣಗಳಲ್ಲೊಂದು. ಇದರಲ್ಲಿ ಪರಿಚಿತರೂ, ಆತ್ಮೀಯರೂ ಆದ ಸಂಪಿಗೆ ಶ್ರೀನಿವಾಸ್ ಅವರ "ಕರ್ಣನ ನಿಜರೂಪ ಕಂಡು ಬೆಚ್ಚದಿರಿ" ಲೇಖನ ಇಂದು ಪ್ರಕಟವಾಗಿದೆ. ಆ ಲೇಖನಕ್ಕೆ ನನ್ನ ಪ್ರತಿಕ್ರಿಯೆಯನ್ನು ಈಗಷ್ಟೆ ಸಂಪಿಗೆಯವರಿಗೆ ಒಪ್ಪಿಸಿದೆ. ಅದನ್ನೇ ಇಲ್ಲಿ ದಾಖಲಿಸುತ್ತಿದ್ದೇನೆ.ಸಂಪಿಗೆಯವರೆ,

ಇಡೀ ಲೇಖನ ಕರ್ಣನ ವೃತ್ತಾಂತದ ಬಗ್ಗೆ ಸುತ್ತಾಡುತ್ತಾ ಕರ್ಣನ ಅವಹೇಳನ ಮಾಡಿದೆ.
ವೇದವ್ಯಾಸರು ಬರೆದ ಮಹಾಭಾರತವನ್ನು ನಾನು ಓದಿದವನಲ್ಲ, ಅಥವಾ ಮಹಾಭಾರತವನ್ನು ಕಣ್ಣಾರೆ ಕಂಡವನಲ್ಲ. ಆದ್ದರಿಂದ ನಾರಾಯಣಾಚಾರ್ಯರು ಬರೆದಿರುವುದರಲ್ಲಿನ ಅಂಶಗಳು ಎಷ್ಟು ಸರಿ, ಎಷ್ಟು ತಪ್ಪು, ಯಾವುದು ಸರಿ, ಯಾವುದು ತಪ್ಪು ಎಂದು ವ್ಯಾಖ್ಯಾನಿಸುವ ಯೋಗ್ಯತೆ ನನಗಿಲ್ಲ.
ಆದರೆ ನಿಮ್ಮ ಲೇಖನವನ್ನು ಓದಿದ ಮೇಲೆ ಹಲವಾರು ಪ್ರಶ್ನೆಗಳು ಕಾಡತೊಡಗಿದವು.

೧. ಕರ್ಣನ ಒಳ್ಳೆಯತನದ ಬಗ್ಗೆ ವೇದವ್ಯಾಸರು ಏನೇನೂ ಬರೆದಿಲ್ಲವೆ? ಅಥವಾ ಕರ್ಣನು ತನ್ನ ಜೀವಿತಾವಧಿಯಲ್ಲಿ "ಒಳ್ಳೆಯದು" ಅನ್ನುವ ಯಾವ ಕೆಲಸವನ್ನು ಮಾಡಿಯೇ ಇಲ್ಲವೆ?

೨. ಗಂಧರ್ವಸೇನೆಯ ವಿರುದ್ಧ ಯುದ್ಧದಲ್ಲಿ ಕರ್ಣ ಸೋಲಲು ಪರಶುರಾಮರು ಕೊಟ್ಟ ಶಾಪ ಕಾರಣವಾಗಿರಬಾರದೇಕೆ?

೩. ಕರ್ಣನನ್ನು ಹೇಡಿ ಎಂದು ಕರೆದಿರುವುದು ಯಾವ ಕಾರಣಕ್ಕೆ? ಯುದ್ಧದಲ್ಲಿ ಸೋಲುಂಡಿದ್ದಕಾಗಿಯೆ? ಅಥವಾ ದ್ರೌಪದಿಯು ಗಂಧರ್ವಸೇನೆಯವರು ಕಟ್ಟಿದ್ದ ಬಂಧನ ಬಿಡಿಸಿದ್ದಕ್ಕಾಗಿಯೇ? ಕರ್ಣನನ್ನು ಹೇಡಿ ಅನ್ನಲು ಇವೆರಡೂ ಸಕಾರಣವಲ್ಲ ಎಂದು ನನ್ನ ಅಭಿಪ್ರಾಯ.

೪. ಇಂದ್ರನಿಂದ ಶಕ್ತ್ಯಾಯುಧ (ಇದು "ಶಕ್ತಾಯುಧ" ಆಗಬೇಕಲ್ಲವೆ?) ಪಡೆಯಬೇಕೆಂದು ಕರ್ಣನಿಗೆ ಅಪ್ಪಣೆಯಿತ್ತದ್ದು ತಂದೆಯಾದ ಸೂರ್ಯದೇವ. ಆ ಆಜ್ಞೆಯಂತೆ, ಕರ್ಣನು ಇಂದ್ರನಿಂದ ಶಕ್ತ್ಯಾಯುಧವನ್ನು ಬೇಡಿ ಪಡೆದಿದ್ದಾನೆ. ಹಾಗೆಯೇ, ಇಂದ್ರನ ಕೋರಿಕೆಯಂತೆ ಕವಚಕುಂಡಲಗಳನ್ನು ದಾನ ಮಾಡಿ ದಾನಶೂರ ಕರ್ಣನೆನೆಸಿದ್ದಾನೆ. ಎರಡು ಪ್ರತ್ಯೇಕ ವಿಷಯಗಳು. ಒಂದು ತಂದೆಯ ಅಪ್ಪಣೆ ಪಾಲಿಕೆ, ಇನ್ನೊಂದು ದಾನ.

ಆದರೆ ಇಲ್ಲಿ ನಾರಾಯಣಾಚಾರ್ಯರ ಪ್ರಶ್ನೆ: "ಒಂದು ವಸ್ತುವನ್ನು ಕೊಟ್ಟು, ಇನ್ನೊಂದನ್ನು ಪಡೆಯುವುದು ದಾನವೇ?".
ಈಗಾಗಲೇ ಹೇಳಿದಂತೆ ಇವೆರಡನ್ನೂ ಒಂದುಗೂಡಿಸುವುದು ವಿರೋಧಾಭಾಸ. ಕವಚಕುಂಡಲವನ್ನು ಕೊಟ್ಟಿದ್ದು ಖಂಡಿತವಾಗಿಯೂ ದಾನ. ಆದ್ದರಿಂದಲೇ ಇಂದಿಗೂ "ದಾನಶೂರ ಕರ್ಣ" ಎಂದು ಜನರು ನೆನಪಿನಲ್ಲಿಟ್ಟುಕೊಂಡಿರುವುದು. ಶಕ್ತಾಯುಧವನ್ನು ಪಡೆದದ್ದು ತಂದೆಯ ಆಜ್ಞೆ ಪಾಲಿಸಲು (ಪಿತೃವಾಕ್ಯ ಪರಿಪಾಲನೆ).

ಒಂದು ವೇಳೆ ಕರ್ಣನು ಶಕ್ತಾಯುಧವನ್ನು ಪಡೆಯದೇ ಕವಚಗಳನ್ನು ಕೊಟ್ಟು "ದಾನಿ" ಎಂದೆನಿಸಿಕೊಂಡಿದ್ದರೆ, "ತಂದೆಯಾದ ಸೂರ್ಯದೇವನ ವಾಕ್ಯವನ್ನು ಧಿಕ್ಕರಿಸಿ ನಡೆದುದು ಕರ್ಣನ ಅಧಿಕಪ್ರಸಂಗತನವಲ್ಲವೇ?" ಎಂದು ನಾರಾಯಣಾಚಾರ್ಯರು ಖಂಡಿತಾ ಪ್ರಶ್ನಿಸದೆ ಬಿಡುತ್ತಿದ್ದರೆ?

೫. ಕೊನೆಯದಾಗಿ: 'ಮಹಾಭಾರತ'ವನ್ನು ತಿಳಿಯದವರೇ ಅಪರೂಪ, ಭಾರತದಲ್ಲಿ. ಪಂಪ, ಕುಮಾರವ್ಯಾಸಾದಿ ಕವಿಗಳ ಅವತರಿಣಿಕೆಗಳಲ್ಲದೆ, ಚಲನಚಿತ್ರಗಳಲ್ಲಿ, ಕಿರುತೆರೆಯಲ್ಲಿ ಬಿ.ಆರ್.ಛೋಪ್ರಾ ಅವರ ಧಾರವಾಹಿಯಲ್ಲಿ, ಪುಸ್ತಕಗಳಲ್ಲಿ, ಅಜ್ಜ ಅಜ್ಜಿ ಹೇಳುವ ಕಥೆಗಳಲ್ಲಿ , ಹೀಗೆ ಎಲ್ಲೆಡೆ ಸರ್ವವ್ಯಾಪಿಯಾದುದು. ಪಂಪ, ಕುಮಾರವ್ಯಾಸರಂತೆ ಇತರೆ ಭಾಷೆಗಳಲ್ಲಿಯೂ ಮಹಾಭಾರತ ರಚನೆಯಾಗಿದೆ. ಇವರೆಲ್ಲರಿಗೂ ತಿಳಿಯದ ಸಂಸ್ಕೃತ ನಾರಾಯಣಾಚಾರ್ಯರಿಗೆ ಮಾತ್ರ ತಿಳಿಯಿತೆ? ಅಥವಾ "ಜನಮರುಳೋ ಜಾತ್ರೆ ಮರುಳೋ" ಎಂಬಂತೆ ಇಷ್ಟು ದಿನ ಎಲ್ಲರೂ ಮಿಥ್ಯವೇ ಸತ್ಯ ಎಂದು ನಂಬಿದ್ದರೆ?

ಭೀಷ್ಮ, ದ್ರೋಣ, ಕೃಷ್ಣ, ಧೃತರಾಷ್ಟ್ರ, ಧರ್ಮರಾಯ, ದ್ರೌಪದಿ, ಭೀಮ ಇವರುಗಳ ಬಗೆಗಿನ ಲೇಖನಗಳ ನಿರೀಕ್ಷೆಯಲ್ಲಿರುವೆ.

ಶುಭವಾಗಲಿ,
ಮನ

ಮುಕ್ತಾಯದ ಮುನ್ನ:

ಶಕ್ತ್ಯಾಯುಧ - ಶಕ್ತಾಯುಧ. ಇವೆರಡರಲ್ಲಿ ಯಾವುದು ಸರಿ?
ಇದರ ವ್ಯುತ್ಪತ್ತಿಯ್ಯು "ಶಕ್ತಿ + ಆಯುಧ" ಎಂದಿದ್ದರೆ, ಅದು ಶಕ್ತಾಯುಧ ಆಗಬೇಕು. ಇ'ಕಾರ ಲೋಪಸಂಧಿಯ ಪ್ರಕಾರ. ಇದರ ಬಗ್ಗೆ ಹೆಚ್ಚು ಬಲ್ಲವರು ದಯವಿಟ್ಟು ತಿಳಿಸಿರಿ. ಧನ್ಯವಾದಗಳು.

 

ಕರ್ಮಯೋಗಿ (ಕಥೆಯ ಭಾಗ ೩ - ಮನ)


'ಕರ್ಮಯೋಗಿ' ಭಾಗ ೧
'ಕರ್ಮಯೋಗಿ' ಭಾಗ ೨
ಇದೀಗ ಓದಿ ಅಂತಿಮ ಭಾಗ: 'ಕರ್ಮಯೋಗಿ' ಭಾಗ ೩


ಮಾರುತಿಯ ಮನಸ್ಸು ಪರಿವರ್ತನೆಗೊಂಡದ್ದನ್ನು ಮನಗಂಡ ಶ್ರೀನಾಥನಿಗೆ ಸ್ವರ್ಗವೇ ಧರೆಗಿಳಿದಂತಾಯ್ತು. ಕೂಡಲೆ, "ಅಬ್ಬಾ..ಆ ದೇವ್ರು ದೊಡ್ಡವ್ನು, ಬೆಟ್ಟದಂಗಿದದ್ದನ್ನ, ಮಂಜಿನಂತೆ ಕರಗಿಸಿಬಿಟ್ಟ" ಎಂದು ಮಾರುತಿಯ ಕೈಯನ್ನು ತೆಗೆದು ಶಂಕರನ ಕೈಗಿಟ್ಟು ಮೆದುವಾಗಿ ಎರಡು ಸಲ ತಟ್ಟುತ್ತಾನೆ. ಮೂವರೆದೆಯಲ್ಲೂ ಸಂತಸ ಉಕ್ಕಿ ಹರಿಯುತಿದೆ. ಮನೆ ಕಡೆಗೆ ವಾಪಸಾಗಹತ್ತಿದರು.

ಮನೆಯ ಬಾಗಿಲಲ್ಲಿಯೇ ನಿಂತಿದ್ದ ಭಾಗಿರಥಮ್ಮಳಿಗೆ, ಮೂವರು ಮಕ್ಕಳೂ ಹಸನ್ಮುಖಿಯರಾಗಿ ಮನೆಯ ಕಡೆ ಬರುತ್ತಿರುವದನ್ನು ನೋಡಿ, ನಿರಾಶೆಯ ಕಾರ್ಮೋಡಗಳೆಲ್ಲವೂ ಚದುರಿದಂತಾಯ್ತು. ಮಾರುತಿಯ ಮೊಗದಲ್ಲಿ, ಆ ರೀತಿಯ ಕಾಂತಿ, ಮುಗುಳ್ನಗೆ ನೋಡಿದ್ದನ್ನೇ ಮರೆತಿದ್ದಳು ಆ ತಾಯಿ. ಅವನ, ಓದಿನ ಬಗ್ಗೆ ಕಟ್ಟಿದ್ದ ಆಶಾಗೋಪುರಕ್ಕೆ ಹೊಸ ಜೀವ ಬಂದಿತ್ತು.
ಶ್ರೀನಾಥ ಓಡಿ ಬಂದು, "ಅಮ್ಮಾ, ಮಾರುತಿ ಮುಂದಕ್ಕೆ ಓದ್ತಾನೆ! ಅಪ್ಪಾ, ಮಾರುತಿ ಮುಂದಕ್ಕೆ ಓದ್ತಾನೆ!!" ಎಂದು ಗಂಟಲಿನಲ್ಲಿರುವ ಶಕ್ತಿಯನ್ನೆಲ್ಲಾ ಉಪಯೊಗಿಸಿ ಕಿರುಚುತ್ತಾ ತನ್ನ ಸಂತಸ ವ್ಯಕ್ತಪಡಿಸುತ್ತಾನೆ. ತಂದೆ, ತಾಯಿ, ತಮ್ಮಂದಿರ ಆನಂದಕ್ಕೆ ಪಾರವೇ ಇರಲಿಲ್ಲ. ಭಾಗಿರಥಮ್ಮ ಮಾರುತಿಯನ್ನು ಬಾಚಿ ತಬ್ಬುತ್ತಾಳೆ, "ಮಗಾ...ಕೊನೆಗೂ ಒಪ್ಕೊಂಡ? ನನ್ ಕಿವಿನೇ ನಂಬಕ್ಕಾಗ್ತಿಲ್ಲ" ಎಂದು ಗದ್ಗದಿತಳಾದಳು. ಶಂಕರ "ಅಮ್ಮ ಇನ್ಮೇಲೆ, ಇವ್ನು ನಂಜೊತೆ ಬೆಂಗಳೂರ್‍ನಲ್ಲಿರ್ತಾನೆ. ಅಲ್ಲೇ ಪಿ.ಯು.ಸಿ ಗೆ ಸೇರ್ತಾನೆ. ಇನ್ಮೇಲೆ ಇವನ ಜವಾಬ್ದಾರಿ ನಂದು". ಇಷ್ಟೇಳುವಷ್ಟರಲ್ಲಿ, ಮನೆಮಂದಿಯೆಲ್ಲಾ ಹೊರಗೋಡಿ ಬಂದಿದ್ದರು. ವಿಶ್ವನಾಥರಾಯರು, ಮಾರುತಿಯ ತಲೆ ನೇವರಿಸಿ ಎದೆಗಪ್ಪಿಕೊಂಡರು. ಇದನ್ನೆಲ್ಲಾ ನೋಡಿದ ಭಟರು ಕೂಡಲೆ ಹೋಟೆಲಿನಿಂದ ಸಿಹಿತಿಂಡಿಗಳನ್ನು ತರಲು ಧಾವಿಸಿದರು. ಅಷ್ಟೊತ್ತಿಗಾಗಲೆ, ಕಮಲಳ ಅಡುಗೆ ಘಮ್ಮೆನ್ನುತ್ತಿತ್ತು. ಮನೆಯಲ್ಲಿ ಹಿಂದೆಂದೂ ಕಾಣದಂತಹ ಹಬ್ಬದ ವಾತವರಣ ಮೂಡಿತ್ತು. ಎಲ್ಲರೂ ಸಾಲಾಗಿ ಕುಳಿತರು. ಮಾರುತಿಯ ಒಂದು ಪಕ್ಕದಲ್ಲಿ ಕೈ ಹಿಡಿದು ಭಾಗಿರಥಮ್ಮ ಕುಳಿತರೆ, ಇನ್ನೊಂದು ಪಕ್ಕದಲ್ಲಿ ಪ್ರೀತಿಯ ಅಣ್ಣನ ಷರಟು ಗಟ್ಟಿಯಾಗಿ ಹಿಡಿದು ಕುಳಿತಿರುವ ಕಿಶೋರ. ಕಮಲಳು ಎಲ್ಲರಿಗೂ ಬಡಿಸುವಷ್ಟರಲ್ಲಿ, ಓಡೋಡಿ ಬಂದ ಭಟರು, ಎಲ್ಲರಿಗೂ ಸಿಹಿ ತಿಂಡಿಯನ್ನು ಹಂಚುತ್ತಾ..."ನಂಗೂ ಊಟ ಬಡಿಸಮ್ಮ ಕಮಲ" ಎಂದು ಮುಗುಳ್ನಗುತ್ತಾ ರಾಯರ ಪಕ್ಕದಲ್ಲಿ ಆಸೀನನಾಗುತ್ತಾರೆ.
ಎಲ್ಲರೆದೆಯಲ್ಲೂ ಹರುಷದ ಹೊನಲು...ಜೊತೆಗೆ ಘಮ್ಮೆನ್ನುವ ಅಡುಗೆ, ಈಗ ಭಟರು ತಂದಿರುವ ಸಿಹಿತಿಂಡಿ ಬೇರೆ. ಆಹಾ..ಈ ಪಂಕ್ತಿಯ ಊಟದಲ್ಲಿರುವ ಸವಿಯೇ ಸವಿ. ಇದಕ್ಕಿಂತ ಬೇರೆ ಸ್ವರ್ಗ ಉಂಟೆ?
ರಾತ್ರಿ ಪೂರ್ತಿ, ಅಣ್ಣತಮ್ಮಂದಿರು ಹಾಡಿ ಕುಣಿದರು. ದೊಡ್ಡ ಮಕ್ಕಳೂ ಎಳೆಯ ಮಕ್ಕಳಾಗಿದ್ದರು. ಕಿಶೋರ ಮಾರುತಿಯ ಷರಟು ಬಿಟ್ಟೇ ಇರಲಿಲ್ಲ. ಶಂಕರನು, ತನ್ನ ತಾಯಿಯನ್ನು, ಹೆಂಡತಿಯನ್ನು ಕರೆದು ಸ್ವಲ್ಪ ಕಾಲ ಮಾತಾಡಿದನು. ಅಪ್ಪನ ಆರೋಗ್ಯದ ಬಗ್ಗೆ, ತಮ್ಮಂದಿರ ಓದಿನ ಬಗ್ಗೆ, ಮನೆಯ ನಿರ್ವಹಣೆ ಬಗ್ಗೆ ಕೆಲವು ಹಿತನುಡಿಗಳನ್ನು ಹೇಳಿದನು. ಮಾರುತಿಯ ಬಗ್ಗೆ ಯಾವುದೇ ರೀತಿಯಲ್ಲೂ ಚಿಂತಿಸದಂತೆ ತಾಯಿಯಲ್ಲಿ ಕೇಳಿಕೊಂಡನು. ತಮ್ಮಂದಿರು ಏನಾದರು ತಪ್ಪು ಮಾಡಿದರೆ, ಅದನ್ನು ಹೊಟ್ಟೆಗೆ ಹಾಕಿಕೊಂಡು, ಅವರ ತಪ್ಪನ್ನು ತಿದ್ದಿ ಅವರನ್ನು ಸರಿದಾರಿಗೆ ತರುವಂತೆ ಹೆಂಡತಿಯಲ್ಲಿ ವಿನಂತಿಸಿಕೊಂಡನು. ತಾನು ತಂದಿದ್ದ ಸ್ವಲ್ಪ ಹಣವನ್ನು ತಾಯಿಯ ಕೈಗಿಟ್ಟು, "ಇನ್ಮೇಲಾದ್ರು ನಿನ್ನ ಜೀವ ನೆಮ್ಮದಿಯಾಗಿರ್ಬೇಕು ಅನ್ನೋದೆ ನನ್ನ ಆಸೆ" ಅನ್ನುವನು. ಇವೆಲ್ಲಕ್ಕೂ ತಾಯಿಯು ಕಣ್ಣಿನಲ್ಲಿಯೇ ಆನಂದ ಸೂಚಿಸುತ್ತಾಳೆ.
ಬೆಳಗಾಯಿತು...ಶಂಕರ, ಮಾರುತಿ ಇಬ್ಬರೂ ಹೊರಟು ನಿಂತಿದ್ದಾರೆ. ರಾತ್ರಿ ಪೂರ್ತಿ ಕಮಲ ಏನೇನೋ ತಿಂಡಿ ತಿನಿಸುಗಳನ್ನು ತಯಾರಿಸಿದ್ದಾಳೆ. ಒಂದು ಡಬ್ಬಿಯಲ್ಲಿ ಹಾಕಿ ತಂದು ಮಾರುತಿಯ ಬಟ್ಟೆಯ ಬುಟ್ಟಿಯಲ್ಲಿಡುತ್ತಾಳೆ. ಮಾರುತಿಯು ಕಣ್ಣಲ್ಲೇ ಅತ್ತಿಗೆಗೆ ಕೃತಜ್ಞತೆ ಸಲ್ಲಿಸುತ್ತಾನೆ.
ಕಿಶೋರ ಮಾರುತಿಯ ಷರಟು ಹಿಡಿದೇ ಇದ್ದಾನೆ. ಮಾರುತಿಯು ಕಿಶೊರನನ್ನು ಎತ್ತಿ ತನ್ನ ಬೆನ್ನಿಗೆ ಹಾಕಿಕೊಂಡು, ಕಿಶೊರನ ಕೈಗಳನ್ನು ತನ್ನ ಕುತ್ತಿಗೆಗೆ ಗಂಟು ಹಾಕಿಕೊಳ್ಳುತ್ತಾನೆ. ಅಪ್ಪ, ಅಮ್ಮ,ಅತ್ತಿಗೆ ಅಣ್ಣಂದಿರೆಲ್ಲರ ಕಾಲು ಮುಟ್ಟಿ ನಮಸ್ಕರಿಸುತ್ತಾನೆ. ಭಾಗೀರಥಮ್ಮ, ಕಣ್ಣೀರಿಡುತ್ತಲೇ ಆಶೀರ್ವಾದ ಮಾಡಿ ಕಳಿಸಿಕೊಡುತ್ತಾಳೆ.
ಎಲ್ಲರಿಗೂ "ಹೋಗಿ ಬರ್ತೀನಿ" ಎಂದು ಹೇಳಿ, ಭಾರವಾದ ಮನಸ್ಸಿನಿಂದ ಬಸ್‍ಸ್ಟ್ಯಾಂಡ್ ಕಡೆಗೆ ತೆರಳುತ್ತಾರೆ ಶಂಕರ ಮತ್ತೆ ಮಾರುತಿ. ಜೊತೆಗೆ ಮಾರುತಿಯ ಬೆನ್ನಿಗಂಟಿರುವ ಕಿಶೋರ ಹಾಗು ಶಂಕರನ ಕೈ ಹಿಡಿದು ನಡೆದಿರುವ ಶ್ರೀನಾಥ. ಬಸ್ಸು ಹಾರ್ನ್ ಹೊಡೆಯತೊಡಗಿತು. ಕಿಶೋರನನ್ನು ಶ್ರೀನಾಥನಿಗೆ ಒಪ್ಪಿಸಿದನು ಮಾರುತಿ. ಕಿಶೋರನಿಗೆ ಅಳುವೇ ಬಂದಿತಾದರೂ, ಪ್ರೀತಿಯ ಅಣ್ಣನಿಗೆ ಟಾಟ ಮಾಡುತ್ತಾ ಕೈ ಅಲ್ಲಾಡಿಸುತ್ತಾನೆ. ಶಂಕರ, ಮಾರುತಿ ಇಬ್ಬರು ಬಸ್ಸನ್ನೇರಿ ಶ್ರೀನಾಥ ಮತ್ತು ಕಿಶೊರನ ಕಡೆ ನೋಡುತ್ತಲೆ ಸೀಟಿನಲ್ಲಿ ಕೂರುತ್ತಾರೆ. ಕಿಶೋರ ಕೈ ಆಡಿಸುತ್ತಲೇ ಇದ್ದಾನೆ, ಸಣ್ಣದಾಗಿ ಅಳುತ್ತಲೂ ಇದ್ದಾನೆ. ಮಾರುತಿಯ ಕೆನ್ನೆ ಮೇಲೆ ಹನಿಗಳು ಇಳಿಯುತ್ತಿವೆ, ಅವನೂ ಕಿಶೋರನ ಕಡೆ ಕೈ ಬೀಸುತ್ತಿದ್ದಾನೆ. ಬಸ್ಸು ಜೋರಾಗಿ ಹಾರ್ನ್ ಮಾಡುತ್ತಾ ಹೊರಟಿತು.
ಆ ಬಸ್ಸಿನ ಗಾಲಿಗಳ ವೇಗದಷ್ಟೇ ವೇಗವಾಗಿ ಕಾಲಚಕ್ರವು ಉರುಳಿತು. ಪಿ.ಯು.ಸಿ ಯಲ್ಲಿ ವಿಜ್ಞಾನ ವಿಷಯ ಆಯ್ದುಕೊಂಡ ಮಾರುತಿ, ಅಲ್ಲಿಯೂ ಮೊದಲ ರ್‍ಯಾಂಕ್ ಗಿಟ್ಟಿಸಿದ. ನಂತರ, ಬೆಂಗಳೂರಿನ ಬಿ.ಎಂ.ಸಿ. ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸೇರಿ, ಹಗಲಿರುಳು ಶ್ರಮಪಟ್ಟು ಓದಿ, ಡಾಕ್ಟರ್ ಆಗುತ್ತಾನೆ. ಬಹುಬೇಗ ಯಶಸ್ಸು, ಕೀರ್ತಿ, ಸಂಪತ್ತೆಲ್ಲವನ್ನೂ ಗಳಿಸುತ್ತಾನೆ. ತಾನು ಹತ್ತಿದ ಏಣಿಯನ್ನೆಂದೂ ಮರೆಯದೆ ಮನೆಮಂದಿಯನ್ನೆಲ್ಲಾ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾನೆ. ತನ್ನ ತಾಯಿಯ ಕನಸು ನನಸು ಮಾಡುತ್ತಾನೆ. ತಮ್ಮಂದಿರೆಲ್ಲರೂ ವಿದ್ಯಾವಂತರಾಗುವಂತೆ ಮಾಡಿ, ಅವರೆಲ್ಲರಿಗೂ ಮಾರ್ಗದರ್ಶಿಯಾಗುತ್ತಾನೆ.

ಹೀಗೆ ನಮ್ಮ ಕಥಾನಾಯಕ ಮಾರುತಿಯು ಕರ್ಮಯೋಗಿಯಾಗಿ, ದಿವ್ಯ ಜ್ಯೋತಿಯಾಗಿ ಬೆಳಗುತ್ತಾನೆ.


ಈ ಕರ್ಮಯೋಗಿಯ ಕಥೆಯನ್ನು ಓದಿದವರಿಗೂ, ಕೇಳಿದವರಿಗೂ, ಹೇಳಿದವರಿಗೂ ಭಗವಂತನಿಂದ ಒಳ್ಳೆಯದಾಗಲಿ. :)

- ಮನ

Tuesday, June 20, 2006

 

ಕರ್ಮಯೋಗಿ (ಕಥೆಯ ಭಾಗ ೨ - ಮನ)


'ಕರ್ಮಯೋಗಿ' ಕಥೆಯ ಪೂರ್ವಾರ್ಧ ಓದಿದಿರಲ್ಲವೇ? ಇಲ್ಲವಾದಲ್ಲಿ ಮೊದಲ ಭಾಗ ಓದಿ ನಂತರ ಇಲ್ಲಿಗೆ ಬನ್ನಿ :)
ಮೊದಲ ಭಾಗದಲ್ಲಿ ತಿಳಿಸಿದಂತೆ, ಅದನ್ನು ಬರೆದು ಮುಂದಿನ ಭಾಗವನ್ನು ಓದುಗರಿಗೆ ಬರೆಯಲು ಬಿಟ್ಟರು ತವಿಶ್ರೀಯವರು.
ಅಂದು ಆಗಸ್ಟ್ ೬, ೨೦೦೫. ಆಗಷ್ಟೆ ಕಥೆಯ ಅರ್ಧಭಾಗ ಓದಿ ಮುಗಿಸಿದ್ದೆ. ಏಕೋ, ಏನೋ, ಎಲ್ಲಿಂದಲೋ ಬಂದ ಉತ್ಸಾಹ ಮುಂದಿನ ಭಾಗವನ್ನು ಬರೆಯಲು ಪ್ರೇರೇಪಿಸಿತು.
ಶನಿವಾರ ರಾತ್ರಿ ೮ ಗಂಟೆಗೆ ಬರೆಯಲು ಪ್ರಾರಂಭಿಸಿಯೇ ಬಿಟ್ಟೆ. ಮನಸ್ಸಿಗೆ ಹೊಳೆದದ್ದನ್ನು ಹಾಗೆ ಹಾಗೆಯೇ ಬರೆಯಲು ಸಾಧ್ಯವಾದಷ್ಟೂ ಪ್ರಯತ್ನಿಸಿದೆ.ಮುಗಿಸಿದಾಗ ಭಾನುವಾರ ಬೆಳಗಿನ ಜಾವ ೨ ಆಗಿತ್ತು. ಅಷ್ಟು ಸುದೀರ್ಘವಾದ ಬರವಣಿಗೆ ನನ್ನಿಂದ ಹೊರಬಂದದ್ದು ಅದೇ ಮೊದಲು. ಇದಿಷ್ಟು ಪೀಠಿಕೆ.
ಮುಂದೆ ಓದಿ...ಕರ್ಮಯೋಗಿ ಭಾಗ ೨.


ಕರ್ಮಯೋಗಿ ಭಾಗ ೨
ಯಾರೆಷ್ಟೇ ಹೇಳಿದರೂ ಮಾರುತಿ ತನ್ನ ಪಟ್ಟು ಬಿಡಲಿಲ್ಲ. ತಾನು ಇಷ್ಟು ಓದಿದ್ದೇ ಸಾಕು...ತನ್ನ ಮೇಲೆ ಈಗ ಸಾಕಷ್ಟು ಜವಾಬ್ದಾರಿಗಳಿವೆ. ಅವುಗಳನ್ನು ನಿಭಾಯಿಸುವ ಕಡೆ ಗಮನಿಸಬೇಕು. ತಂದೆ ಸಂಪೂರ್ಣವಾಗಿ ಚೇತರಿಸಿಕೊಳ್ಳಬೇಕು. ತಮ್ಮಂದಿರ ಖಾಯಿಲೆಗಳೆಲ್ಲವೂ ವಾಸಿಯಾಗಬೇಕು, ಬಹು ತ್ರಾಸದಿಂದ ಸಂಸಾರದ ರಥವನೆಳೆದೂ ಎಳೆದೂ ಬಳಲಿ ಬೆಂಡಾಗಿರುವ ಮಮತೆಯ ಮೂರ್ತಿಯಾದ ತಾಯಿಯು ಇನ್ನು ಮುಂದೆಯಾದರೂ ನೆಮ್ಮದಿಯ ಬಾಳು ಬಾಳಬೇಕು, ತಮ್ಮಂದಿರು ಯಾವುದೇ ಚಿಂತೆಯಿಲ್ಲದೇ ಓದಿನ ಕಡೆ ಗಮನ ಹರಿಸುವಂತಾಗಬೇಕು...ಇನ್ನೂ ಎಷ್ಟೆಷ್ಟೊ ಕನಸುಗಳು ಬಂದುಹೊಗಹತ್ತಿದವು...ಮಾರುತಿಯ ನಿರ್ಮಲ ಮನದೊಳಗೆ. ಸರ್ಕಾರವೇನೋ ನನ್ನ ಮುಂದಿನ ಓದಿನ ಸಂಪೂರ್ಣ ವೆಚ್ಚ ಭರಿಸುತ್ತದೆ..ಸರಿ..ಸಂತೋಷ..ಆದರೆ ಮನೆಮಂದಿಯನ್ನೆಲ್ಲಾ ನೋಡಿಕೊಳ್ಳುತ್ತದೆಯೆ? ನಮ್ಮ ಸಂಸಾರದ ಕಷ್ಟಗಳನ್ನೆಲ್ಲಾ ಸರ್ಕಾರದ ಬಳಿ ತೋಡಿಕೊಳ್ಳಾಲಾಗುತ್ತದೆಯೇ? ಖಂಡಿತಾ ಇಲ್ಲಾ. ದುಡಿಯಬೇಕು...ಸಂಸಾರವನ್ನು ಸಾಕಿ ಸಲಹಬೇಕು...ಇದೊಂದೇ ಮಾರುತಿಯ ಮನದಲ್ಲಿ ಇದ್ದ ಆಕಾಂಕ್ಷೆ.

ಮನೆಯವರೆಲ್ಲರಿಗೂ ಇದನ್ನು ಸರಿಯಾಗಿಯೇ ವಿವರಿಸಿದ...ಆದರೆ ಇವನ ಮಾತು ಕೇಳುವವರಾರು? ಇವನಷ್ಟೇ ಪ್ರೀತಿ ಅವರೆಲ್ಲರಿಗೂ ಇವನ ಮೇಲಿದೆ. "ನಮ್ಮ ಕಷ್ಟಗಳು ಇದ್ದದ್ದೇ. ಇವುಗಳು ನಿನ್ನ ಓದಿಗೆ ಮುಳ್ಳಾಗಬಾರದು. ಭಕ್ತ ಕುಂಬಾರನ ಬಳಿಗೆ ಸಾಕ್ಷಾತ್ ವಿಠಲನೇ ಬಂದು ಉಪಚರಿಸಿದ ಹಾಗೆ ನಮ್ಮ ಭಟರು ಉಪಚರಿಸುತ್ತಿದ್ದಾರೆ. ಶ್ರೀನಾಥ ಸಂಸಾರದ ಭಾರವನ್ನು ಹೊರಲು ಸಿದ್ಧನಿದ್ದಾನೆ...ನೀನು ಸಂಸಾರದ ಬಗ್ಗೆ, ತಂದೆಯ ಆರೋಗ್ಯದ ಬಗ್ಗೆ, ತಮ್ಮಂದಿರ ಓದಿನ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ವಿದ್ಯೆ ಎಂಬುದು ಎಲ್ಲರಿಗೂ ಒಲಿದು ಬರುವುದಿಲ್ಲ. ಸರಸ್ವತಿ ತಾಯಿಯು ನಿನಗೆ ಒಲಿದಿದ್ದಾಳೆ, ಆ ಮಹಾತಾಯಿಯನ್ನು ದೂರ ತಳ್ಳಬೇಡ. ಕಷ್ಟ ಪಟ್ಟು ಓದಿ ಮೊದಲನೇ ರ್‍ಯಾಂಕ್ ಬಂದಿದ್ದೀಯ. ನಿನ್ನ ಜ್ಞಾನಾರ್ಜನೆ ಇಲ್ಲಿಗೆ ನಿಲ್ಲುವುದು ಬೇಡ. ನೀನು ಜ್ಞಾನದ ಹಸಿವಿನಲ್ಲಿ, ಎಷ್ಟೋ ಸಲ ಹೊಟ್ಟೆಯ ಹಸಿವನ್ನು ಮರೆತಿದ್ದೀಯೆ ಎಂಬುದನ್ನ ನಿನ್ನ ತಾಯಿಯಾಗಿ ನಾನು ತುಂಬಾ ಚೆನ್ನಾಗಿ ಅರಿತಿದ್ದೇನೆ. ನೀನು ಓದನ್ನು ಮುಂದುವರೆಸಲೇ ಬೇಕು. ಇದು ನಿನ್ನ ತಾಯಿಯ ಆಶೀರ್ವಾದ ಮಾತ್ರವಲ್ಲ, ಅಜ್ಞೆಯೆಂದು ತಿಳಿ" ಎಂದು ಭಾಗಿರಥಮ್ಮ ತನ್ನ ಮನದಿಂಗಿತವನ್ನ ಮಾರುತಿ ಬಳಿ ಅಂಗಲಾಚಿಕೊಂಡಳು.

ನಮ್ಮ ಮಾರುತಿ ಅಡ್ಡಕತ್ತರಿಯಲ್ಲಿ ಸಿಕ್ಕ ಅಡಕೆಯಂತಾದ. "ಅಯ್ಯೋ ವಿಧಿಯೇ ಇದೆಂಥ ಧರ್ಮಸಂಕಟ? ನಾನೀಗ ದುಡಿಯಬೇಕೆ? ಅಥವಾ ಓದು ಮುಂದುವರೆಸಬೇಕೆ? ನಾನ್ಯಾಕಾದರೂ ರ್‍ಯಾಂಕ್ ಬಂದೆನೋ?" ಎಂದು ಅವನ ಮನಸ್ಸಿನಲ್ಲಿ ತುಮುಲ ತಳಮಳಗಳು ಸಾಗರದಲೆಗಳಂತೆ ಒಂದಾದ ಮೇಲೊಂದರಂತೆ ಉಕ್ಕತೊಡಗಿದವು. ದಿಕ್ಕೇತೋಚದವನಾಗಿ ಸೂರನ್ನು ದಿಟ್ಟಿಸತೊಡಗಿದ್ದಾಗ ಯಾರೋ ತನ್ನ ಕೈ ಬೆರಳನ್ನೆಳದಂತಾಯ್ತು. ಎಳೆದದ್ದು ಎಲ್ಲರಿಗಿಂತ ಚಿಕ್ಕ ತಮ್ಮನಾದ ಕಿಶೋರನು. ಆತ್ಮೀಯತೆಯಿಂದ ಅವನ ತಲೆ ನೇವರಿಸಿದ ಮಾರುತಿ. ಕಿಶೋರ ತನ್ನ ಪುಟ್ಟ ದನಿಯಲ್ಲಿ ಅಣ್ಣನ ಬಳಿ ಉಸುರಿದ..."ಅಣ್ಣಾ...ಅಣ್ಣಾ...ನೀನು ಓದ್ಬೇಕಣ್ಣಾ...ನಂಬಗ್ಗೆ ಚಿಂತಿಸ್ಬೇಡಣ್ಣಾ...ಅಲ್ನೋಡಣ್ಣಾ ಅಮ್ಮನ್ನಾ...ಅವಳನ್ನ ನೋಯಿಸ್ಬೇಡಣ್ಣಾ". ಮಾರುತಿಗೆ ಪ್ರೀತಿ ಉಕ್ಕಿ ಬಂತು. ಕಿಶೊರನನ್ನ ಬಾಚಿ ತಬ್ಬಿಕೊಂಡ. ಆನಂದಭಾಷ್ಪವೋ? ಅಥವಾ ದುಃಖದ ಕಡಲಿನ ಕಟ್ಟೆ ಒಡೆಯಿತೋ? ಒಟ್ಟಿನಲ್ಲಿ ಕಣ್ಣೀರು ಸುರಿಯತೊಡಗಿತು. ಪ್ರೀತಿಯ ತಮ್ಮನ ಅಪ್ಪುಗೆ ಬಲಪಡಿಸುತ್ತ, ತನ್ನ ರೋದನೆ ಮುಂದುವರೆಸಿದ.


ಸ್ವಲ್ಪ ಹೊತ್ತಿನ ನಂತರ ಎಲ್ಲವೂ ನಿಶ್ಯಬ್ಧ. ಆದರೆ ಎಲ್ಲರ ಮನಸ್ಸಿನಲ್ಲಿ ನೂರೆಂಟು ಯೋಚನಾಲಹರಿಗಳು. ಈ ಯೋಚನೆಗಳಿಗೆ ಅಡ್ಡಿಬಂತಂದೆ ಹೊರಗಡೆ ಹೆಜ್ಜೆಗಳ ಸಪ್ಪಳವಾಯಿತು.

ಬಾಗಿಲಲ್ಲೇ ಕುಳಿತಿದ್ದ ಲೋಹಿತ (ಆರನೆ ಮಗ, ಅಂದರೆ ಕಿಶೋರನಿಗೆ ಮಾತ್ರ ಅಣ್ಣ ), ಹೊರಗಡೆ ಇಣುಕಿದ. ಕಣ್ಣಗಲಿಸಿ ನೋಡಿದ..ಕಣ್ಣು ಮತ್ತೂ ಅಗಲಿಸಿ ಕೂಗಿಕೊಂಡ "ದೊಡ್ಡಣ್ಣಾ ಬಂದಾ....ದೊಡ್ಡಣ್ಣಾ ಬಂದಾ....". ಓಡಿ ಹೊಗಿ ಹಿರಿಯಣ್ಣನ ಕೈ ಹಿಡಿದು ಕೊಂಡ. ಮನೆಬಿಟ್ಟು ಹೋಗಿದ್ದ ಹಿರಿಯ ಮಗ ಶಂಕರ, ಮಾರುತಿಯ ಬಗ್ಗೆ ದಿನಪತ್ರಿಕೆಯಲ್ಲಿ ರ್‍ಯಾಂಕ್ ಸುದ್ದಿಯನ್ನು ಓದಿ ಮರಳಿ ಗೂಡಿಗೆ ಬಂದಿದ್ದ. ಬಂದವನೇ ಮಾರುತಿಯನ್ನು ಬಾಚಿ ತಬ್ಬಿದ. ಮಾರುತಿಯ ಹಣೆಗೆ ಮುತ್ತಿಟ್ಟ. ಕಣ್ಣೀರಿಟ್ಟ. ತಾಯ್ತಂದೆಯರಿಗೆ ನಮಸ್ಕರಿಸಿದ. ಅವನ ಹಿಂದೆಯೆ ಅವನ ಹೆಂಡತಿ ಕಮಲಳೂ ನಮಸ್ಕರಿಸಿದಳು. ವಿಶ್ವನಾಥರಾಯರಿಗೂ, ಭಾಗಿರಥಮ್ಮನವರಿಗೂ ಕ್ಷಣಕಾಲ ನೂರೆಂಟು ಪ್ರಶ್ನೆಗಳು ಮನದಲ್ಲಿ ಹಾದುಹೋದರೂ, ನಮಸ್ಕರಿಸಿದ ಸೊಸೆಯನ್ನು ಮನೆಗೆ ಬಂದ ಮಹಾಲಕ್ಷ್ಮಿಯೆಂದು ಭಾವಿಸಿ ಮನಸಾರೆ ಆಶೀರ್ವದಿಸಿದರು.

ಶಂಕರನು ತಾನು ತಂದಿದ್ದ ದ್ರಾಕ್ಷಿ, ಸೇಬುಗಳನ್ನು ಪ್ರೀತಿಯ ತಮ್ಮಂದಿರಿಗೆ ಕೊಟ್ಟು, ಅಪ್ಪನ ಪಕ್ಕದಲ್ಲಿ ಬಂದು ಕುಳಿತನು. ಮೂಸಂಬಿಯ ಸಿಪ್ಪೆ ಸುಲಿಯುತ್ತಾ ತನ್ನ ಕತೆಯನ್ನು ವಿವರವಾಗಿ ಹೇಳಿದ. ಹೇಳದೆ ಕೇಳದೆ ಮನೆ ಬಿಟ್ಟು ಹೋದದ್ದಕ್ಕೆ ಎಲ್ಲರಲ್ಲೂ ಕ್ಷಮೆ ಕೇಳಿದ. ದೊಡ್ಡಮಗನಾಗಿ ಬೇರೆಯವರಿಗಿಂತ ತನ್ನ ಮೇಲೆ ಜವಬ್ದಾರಿ ಹೆಚ್ಚೆಂದು ತಿಳಿದೇ, ಯಾವುದಾದರು ಕೆಲಸ ಮಾಡಿ ಮತ್ತೆ ಮನೆಗೆ ಮರಳಬೇಕೆಂದೇ ಮನೆ ಬಿಟ್ಟೆನೆ ಹೊರತು, ನಿಮ್ಮಿಂದ ಶಾಶ್ವತವಾಗಿ ದೂರಹೋಗಬೇಕೆಂದಲ್ಲಾ ಎಂದು ಸೂಕ್ಷ್ಮವಾಗಿ ತಿಳಿಹೇಳಿದನು. ತಾನು ಬೆಂಗಳೂರಿನ ಬಸ್ ಹತ್ತಿದ್ದೂ, ಬೆಂಗಳೂರಿನಲ್ಲಿ ಕೆಲಸಕ್ಕಾಗಿ ಪಟ್ಟ ಪಾಡು, ಕೊನೆಗೆ ಅಪ್ಪನ ಮೇಸ್ತ್ರಿ ಕೆಲಸ ಸ್ವಲ್ಪ ಗೊತ್ತಿದ್ದರಿಂದ ಹೇಗೊ ಕಾಲ ತಳ್ಳುತ್ತಿದುದ್ದು, ತನ್ನನ್ನು ನೋಡಿಕೊಳ್ಳುತ್ತಿದ್ದ ಮೇಸ್ತ್ರಿ ರಾಮಪ್ಪ ಇದ್ದಕ್ಕಿದ್ದಂತೆ ಕಣ್ಮುಚ್ಚಿದ್ದು, ಆತನ ಮಗಳಾದ ಕಮಲಳಿಗೆ ಅಪ್ಪನ ನಂತರ ಯಾರೂ ನೆರವಾಗದಿದ್ದದ್ದೂ, ಕೊನೆಗೆ ಯಾರಿಗೂ ತಿಳಿಸದಂತೆ ಮದುವೆಯಾಗಬೇಕಾದಂತ ಪರಿಸ್ಥಿತಿ ಎದುರಾದದ್ದೂ ಇವೆಲ್ಲವನ್ನೂ ಇದ್ದದ್ದು ಇದ್ದಂತೆಯೆ ವಿವರಿಸಿದ. ಮೊದಲು ಕೊಂಚ ಕೋಪಗೊಂಡಿದ್ದ, ಶ್ರೀನಾಥ ಅಣ್ಣನ ಈ ವಿವರಗಳಿಂದ ಈಗ ಮೆದುವಾಗಿದ್ದ. ಇಷ್ಟು ಹೇಳಿ ಮುಗಿಸುವಷ್ಟರಲ್ಲಿಯೇ ಕಮಲಳು ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದಳು. ಕಸವನ್ನೆಲ್ಲಾ ಮೂಲೆಯಲ್ಲಿ ಗುಡ್ಡೆ ಮಾಡಿ ಬಾಚುವಾಗ, ಪುಟಾಣಿ ಕಿಶೋರ ಓಡಿಹೋಗಿ ಕಮಲಳ ಕುತ್ತಿಗೆಗೆ ಹಿಂದಿನಿಂದ ಹೋಗಿ ಎರಡು ಕೈಗಳನ್ನು ಸುತ್ತಿಹಾಕಿಕೊಂಡು, "ನಿಮ್ಮನ್ನ ಏನಂತ ಕರೀಲಿ?" ಎಂದು ಮುಗ್ಧತೆಯ ಭಾವದಿಂದ ಕೇಳಿದ. ಕಮಲಳ ಮುಖವು ಕಮಲದಂತೆ ಅರಳಿ, ಹಾಗೆಯೇ ಅವನ ಕಡೆ ತಿರುಗಿ, "ಅತ್ತಿಗೆ ಅಂತಾ ಕರಿ ಕಂದಾ" ಎಂದು ನೋಡಿ ಮುಗುಳ್ನಕ್ಕಳು.


ಕೇವಲ ಕೆಲವು ನಿಮಿಷಗಳಲ್ಲೆ ಮನೆಮಂದಿಯ ಮನ ಗೆದ್ದಿದ್ದಳು ಕಮಲ, ಅಡುಗೆ ಮನೆಯ ಸ್ವಚ್ಛಮಾಡಿ, ಎಲ್ಲರಿಗೂ ಅಡುಗೆ ಮಾಡತೊಡಗಿದ್ದಳು.


ಇತ್ತ, ಭಾಗಿರಥಮ್ಮ, ಹಿರಿಯಮಗ ಶಂಕರನ ಬಳಿ, ಅವಳ ಮುಂದಿದ್ದ ಆಸೆಯನ್ನು ಬಿಚ್ಚಿಟ್ಟಳು. "ನಾವೆಲ್ಲಾ ಹೇಳಿದ್ದಾಯ್ತು...ಈಗ ನೀನಾದ್ರು ಮಾರುತಿಗೆ ಹೇಳು ಮುಂದಕ್ಕೆ ಓದಪ್ಪ ಅಂತಾ...ಓದದೇ ಇಲ್ಲಾ ಅಂತ ಕುಂತವ್ನೆ" ಎಂದಳು. ಆ ಭಗವಂತ ಶಂಕರನನ್ನು ಮನೆಗೆ ವಾಪಸಾಗುವಂತೆ ಮಾಡಿರುವುದೇ ಅದಕ್ಕಲ್ಲವೇ?


ಶಂಕರ ಮಾರುತಿಯ ಕೈ ಹಿಡಿದು ಮನೆಯಿಂದ ಹೊರಬಂದ. ಅವರಿಬ್ಬರನ್ನು ಶ್ರೀನಾಥನೂ ಹಿಂಬಾಲಿಸಿದ. ಸ್ವಲ್ಪ ದೂರ ಹೋದಮೇಲೆ, ಶ್ರೀನಾಥನು ಮನೆಯಲ್ಲಿ ನಡೆಯುತ್ತಿದ್ದ ಚರ್ಚೆಯನ್ನು ಚಾಚೂ ತಪ್ಪದೆ ಶಂಕರನಿಗೆ ವಿವರಿಸಿದ. ಶಂಕರ ಒಂದು ದೀರ್ಘ ನಿಟ್ಟುಸಿರು ಬಿಟ್ಟು ಹೇಳಿದ. "ಆ ದೇವರು ದೊಡ್ಡವನು. ನಾನಿಲ್ಲಿಗೆ ಸರಿಯಾದ ಸಮಯಕ್ಕೇ ಬರುವಂತೆ ಮಾಡಿದ್ದಾನೆ. ನೋಡು ಮಾರುತಿ, ನಿನ್ನ ಮನಸ್ಸಿನಲ್ಲಿರುವ ಪ್ರತಿಯೊಂದು ಆಸೆ, ಕನಸು, ಭಾವನೆಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಇವೆಲ್ಲವೂ ನನ್ನಲ್ಲಿಯೂ ಇತ್ತು...ಈಗಲೂ ಇವೆ. ನಮ್ಮಿಬ್ಬರಲ್ಲಿ ಮಾತ್ರವಲ್ಲ, ಶ್ರೀನಾಥನ ಬಳಿಯೂ ಇವೆ. ನಮ್ಮೆಲ್ಲರ ಆಸೆ ಒಂದೆ, ನಮ್ಮ ಮನೆ ಜೇನುಗೂಡಿನಂತಿರಬೇಕು. ನಾವೆಲ್ಲಾ ಜೇನುಗಳಾಗಿ ಜೊತೆಯಾಗಿರಬೇಕು. ಆಗಾಗುವದಕ್ಕೆ, ಒಂದೇ ಪರಿಹಾರ. ಅದುವೇ ಒಬ್ಬರಿಗೊಬ್ಬರು ನೆರವಾಗುವುದು".
ಮಾರುತಿ ಶಂಕರನ ಮಾತುಗಳನ್ನು ತದೇಕಚಿತ್ತದಿಂದ ಕೇಳುತಿದ್ದ.
ಶಂಕರ ಮುಂದುವರೆಸಿದ, "ನಮ್ಮ ಸಂಸಾರ ಈಗ ಸಾಕಷ್ಟು ಸುಧಾರಿಸಿದೆ. ಮೊದಮೊದಲು, ಅಪ್ಪನ ಮೇಲೇ ಪೂರ್ತಿ ಜವಾಬ್ದಾರಿಯಿತ್ತು. ಆದರೆ ಈಗ ಹಾಗಲ್ಲ. ನೀನು, ಶ್ರೀನಾಥ ಸೇರಿಕೊಂಡು ಸಾಕಷ್ಟು ಉತ್ತಮಗೊಳಿಸಿದ್ದೀರಿ. ನಾನು ಮನೆ ಬಿಟ್ಟು ಹೋದಾಗಿನಿಂದ ಇಲ್ಲಿಯವರೆಗೂ ಜವಾಬ್ದಾರಿಗಳನ್ನು ಉತ್ತಮವಾಗಿ ನಿಭಾಯಿಸಿದ್ದೀರಿ. ತಮ್ಮಂದಿರನ್ನ ಚೆನ್ನಾಗಿ ಪೋಷಿಸಿದ್ದೀರಿ. ನಿಮಗೆ ನಾನೆಷ್ಟು ಕೃತಜ್ಞತೆಗಳನ್ನರ್ಪಿಸದರೂ ಸಾಲದು."
ಶಂಕರನ ಕಣ್ಣು ಒದ್ದೆಯಾಗಿತ್ತು...ಆದರೂ ಮುಂದುವರೆಸಿದ, "ಈಗ, ನಿಮ್ಮ ಜವಾಬ್ದಾರಿಯನ್ನು ಹಂಚಿಕೊಳ್ಳಲು ನಾನು ಎಲ್ಲ ರೀತಿಯಿಂದಲೂ ಸನ್ನದ್ಧನಾಗಿದ್ದೇನೆ. ಸಂಸಾರವನ್ನು ತಕ್ಕ ಮಟ್ಟಿಗೆ ನೋಡಿಕೊಳ್ಳುವ ಚೈತನ್ಯವಿರುವಷ್ಟು ದುಡಿಯುತ್ತಿದ್ದೇನೆ. ನಮ್ಮೆಲ್ಲರನ್ನೂ ಸಾಕಿ ದೊಡ್ದವರನ್ನಾಗಿ ಮಾಡುವಲ್ಲಿಯೇ ತನ್ನ ಜೀವವನ್ನು ತೇಯುತ್ತಿರುವ ಅಮ್ಮನಿಗೆ ಇನ್ಮುಂದೆ ನೆರವಾಗಲು, ಬೆಂಗಾವಲಾಗಲು ಕಮಲಳು ಇಲ್ಲಿಯೇ ಇರುತ್ತಾಳೆ. ನಾನು ಪ್ರತಿ ವಾರಕ್ಕೊಮ್ಮೆ ಬಂದು ಹೋಗುತ್ತಿರುತ್ತೇನೆ. ನೀನು ನನ್ನ ಜೊತೆ ಬೆಂಗಳೂರಿಗೆ ಬಾ. ನನ್ನ ಮನೆ, ಇನ್ಮುಂದೆ ನಿನ್ನ ಮನೆ. ಪಿ.ಯು.ಸಿ ಸೇರಲು ಇನ್ನು ಜಾಸ್ತಿ ದಿನ ಉಳಿದಿಲ್ಲ. ನಿನ್ನ ಓದಿನ ಭಾರವನ್ನು ಸರ್ಕಾರ ಹೊರುತ್ತಿರುವುದು ನಮ್ಮೆಲ್ಲರ ಹೊರೆಯನ್ನು ಸ್ವಲ್ಪವಾದರೂ ಕಡಿಮೆಮಾಡಿದೆ. ಇಲ್ಲಿ ಅಪ್ಪ ಅಮ್ಮ, ತಮ್ಮಂದಿರನ್ನು ನೋಡಿಕೊಳ್ಳಲು ಶ್ರೀನಾಥ, ಭಟರು, ಕಮಲ ಇವರೆಲ್ಲರೂ ಇದ್ದಾರೆ. ಏನಾದರೂ ತುರ್ತು ವಿಷಯವಿದ್ದರೆ, ಶ್ರೀನಾಥ ಭಟರ ಮೂಲಕ ನಮಗೆ ಟೆಲಿಗ್ರಾಮ್ ಕೊಡಲಿ ಅಥವಾ ಬೆಂಗಳೂರಿನ ನಮ್ಮ ಪಕ್ಕದಮನೆಯವರಿಗೆ ಫೋನಾಯಿಸಲಿ. ಏನಂತ್ಯೋ ಶ್ರೀನೀ?"
ಶ್ರೀನಾಥನಿಗೆ ಮಾತೇ ಹೊರಡುತ್ತಿಲ್ಲ..ಮೌನದಿಂದಲೆ ಹೌದೆಂಬಂತೆ ತಲೆಯಲ್ಲಾಡಿಸಿದ.

ಶಂಕರ ಹೇಳುವುದು ಇನ್ನೂ ಮುಗಿದಿರಲಿಲ್ಲ, "ನೋಡು ಮಾರುತಿ, ನಿನ್ನ ಅಣ್ಣನಾಗಿ ನಾನು ನಿನಗಿಂತ ಸ್ವಲ್ಪ ಜಾಸ್ತಿ ಈ ಪ್ರಪಂಚವನ್ನು ಅರ್ಥಮಾಡಿಕೊಂಡಿದ್ದೇನೆ. ಸಾಕಷ್ಟು ನೋವು-ಕಷ್ಟಗಳನ್ನು ಅನುಭವಿಸಿದ್ದೇನೆ. ನೀನು, ಅಪ್ಪ, ಅಮ್ಮ, ಶ್ರೀನೀ ಎಲ್ಲರೂ ನೋವು-ಕಷ್ಟಗಳನ್ನು ಉಂಡವರೇ. ನಮ್ಮ ತಮ್ಮಂದಿರೂ ಆ ನೋವಿನಲ್ಲಿ ತೋಯಬೇಕೆ? ಅವರು ಮುಂದೆ ಓದಿ, ವಿದ್ಯಾವಂತರಾಗಬೇಕಲ್ಲವೇ? ಅವರು ವಿದ್ಯಾವಂತರಾಗಲು ನೀನು ಮಾರ್ಗದರ್ಶಿಯಾಗಬೇಕಲ್ಲವೇ? ಅಣ್ಣಂದಿರಾದ ನಾವೇ ಓದದೇ ತಮ್ಮಂದಿರಿಗೆ ಓದಲು ಹೇಳಿದರೆ ನಮ್ಮ ಮಾತಿಗೆ ಬೆಲೆಕೊಡುತ್ತಾರೆಯೇ? ಮುಂದೆ ಅವರು ಏನು ಓದಬೇಕು, ಎತ್ತ ದಿಕ್ಕಿನಲ್ಲಿ ಸಾಗಬೇಕು ಎಂದು ಅರ್ಥಮಾಡಿಕೊಂಡು ಅವರಿಗೆ ಬುದ್ಧಿಹೇಳಲು ನಮಗೆ ಸಾಕಷ್ಟು ಯೋಗ್ಯತೆ ಇರಬೇಕಲ್ಲವೇ? ನೀನು ಓದಿ ದೊಡ್ಡ ಹುದ್ದೆಯನ್ನೇರಿದರೆ, ನೀನು ನಮಗೆಲ್ಲರಿಗೂ ಆಧಾರಸ್ತಂಭ ಮಾತ್ರವಲ್ಲ, ತಮ್ಮಂದಿರೆಲ್ಲರಿಗೂ ಸ್ಪೂರ್ತಿಯಾಗುವೆಯಲ್ಲವೇ? ನಿನ್ನಂತೆ ತಾನೂ ಓದಿ ಮುಂದೆ ಬರಬೇಕೆಂಬ ಆಸೆ, ಉತ್ಸಾಹ, ಛಲ ಅವರಲ್ಲಿಯೂ ಮೂಡುತ್ತದೆಯಲ್ಲವೇ? ನೀನೇ ಓದುವುದಿಲ್ಲವೆಂದರೆ ಅವರೆಲ್ಲರ ಉತ್ಸಾಹಕ್ಕೆ ತಣ್ಣೀರೆರಚಿದಂತಾಗುವುದಿಲ್ಲವೇ? ನೀನಿಷ್ಟು ದಿನ ಕಷ್ಟಪಟ್ಟು ಓದಿದ್ದು, ರ್‍ಯಾಂಕ್ ಬಂದದ್ದೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುವುದಿಲ್ಲವೇ?" ಕ್ಷಣಕಾಲ ಸುಮ್ಮನಾದ ಶಂಕರ ಮಾರುತಿಯನ್ನು ಗಮನಿಸುತ್ತಾನೆ. ಮಾರುತಿ ಶಂಕರನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಾನೆ, ಕಿವಿಯಲ್ಲಿ ಕಿವಿಯಿಟ್ಟು ಕೇಳುತ್ತಿದ್ದಾನೆ. ತಾನು ಕೇಳುತ್ತಿರುವುದು, ನೋಡುತ್ತಿರುವುದು ವಾಸ್ತವವೋ, ಭ್ರಾಂತಿಯೋ ಎಂದು ಕ್ಷಣಕಾಲ ಗೊಂದಲಕ್ಕೀಡಾಗುತ್ತಾನೆ. ನಿಧಾನವಾಗಿ ಗೊಂದಲದಿಂದ ಚೇತರಿಸಿಕೊಂಡು, "ಶಂಕ್ರಣ್ಣಾ...ನನಗೆ ಏನು ಹೇಳಬೇಕೆಂದೇ ತೋಚುತ್ತಿಲ್ಲ...ಮಾತೇ ಹೊರಡುತ್ತಿಲ್ಲ" ಎಂದಷ್ಟೇ ಹೇಳಿ ನಿಲ್ಲಿಸುತ್ತಾನೆ. ಅವನ ಕಣ್ಣುಗಳಲ್ಲಿ ಪ್ರಜ್ವಲಿಸುತ್ತಿದ್ದ ಕಾಂತಿಯನ್ನು ಬಹುಬೇಗ ಗ್ರಹಿಸಿದ ಶಂಕರ, "ನೀನೇನೂ ಹೇಳಬೇಕಿಲ್ಲ. ಎಲ್ಲವನ್ನೂ ನಾನೇ ಅರ್ಥ ಮಾಡಿಕೊಂಡೆ" ಎಂದು ಸಂತೋಷದಿಂದ ಮಾರುತಿಯ ಭುಜವನ್ನು ತಟ್ಟುತ್ತಾನೆ.

ಕೊನೆಗೇನಾಯಿತು?
ಮೂರನೆಯ ಹಾಗು ಅಂತಿಮ ಭಾಗದಲ್ಲಿ ನಿರೀಕ್ಷಿಸಿ.


Sunday, June 18, 2006

 

ಕರ್ಮಯೋಗಿ (ಕಥೆಯ ಭಾಗ ೧ - ತವಿಶ್ರೀ)

ಆತ್ಮೀಯ ತವಿಶ್ರೀಯವರು ಕನ್ನಡ ಆಡಿಯೋ ಫೋರಮ್ಮಿನಲ್ಲಿ ಈ ಕಥೆಯನ್ನು ಪ್ರಕಟಿಸಿದ್ದರು. ವಿಶೇಷವೆಂದರೆ, ಈ ಕಥೆಯ ಅರ್ಧ ಭಾಗವನ್ನಷ್ಟೆ ಮೊದಲು ಪ್ರಕಟಿಸಿ, ಉಳಿದರ್ಧಕ್ಕೆ ಓದುಗರೆಲ್ಲರೂ ಕಾತುರದಿಂದ ಕಾಯುವಂತೆ ಮಾಡಿದರು. ಅಷ್ಟೆ ಅಲ್ಲದೇ, "ಉಳಿದರ್ಧವನ್ನು ನೀವೇ ಯಾರದರೂ ಬರೆಯಿರಿ, ನಂತರ ನಾನು ಬರೆದಿರುವ ಉಳಿದರ್ಧ ಭಾಗ ಪ್ರಕಟಿಸುವೆ" ಎಂದರು.
ಮುಂದಿನ ಮಾತು, ಭಾಗ ೨ರಲ್ಲಿ.


ಕರ್ಮಯೋಗಿ ಭಾಗ ೧

ಮಾರುತಿ ಹುಟ್ಟಿದಾಗಿನಿಂದ ಅವನ ಮನೆಯಲ್ಲಿ ದರಿದ್ರ ಕಾಲೊಕ್ಕರಿಸಿತ್ತು. ಮಗು ಹುಟ್ಟಿದಾಗ ಜಾತಕ ಬರೆದವರು ಹೇಳಿದ್ದೇನೆಂದರೆ ಈ ಮಗು ಮನೆಯಲ್ಲಿರುವವರೆಗೂ ಮನೆಯಲ್ಲಿ ಕಷ್ಟಕಾಲ, ಇವನು ಮನೆಯಿಂದಾಚೆಗೆ ಹೋದಾಗಲೇ ಮನೆಯಲ್ಲಿ ಏಳಿಗೆ. ಹಾಗೆಂದು ಮಗುವನ್ನು ಮನೆಯಿಂದಾಚೆಗೆ ತಳ್ಳೋಕ್ಕಾಗತ್ಯೇ? ಅಲ್ಲಿಯವರೆವಿಗೆ ಅವನಪ್ಪ ಅಮ್ಮ ಐಷಾರಾಮಿ ಜೀವನ ನಡೆಸಿ ಇದ್ದದ್ದೆಲ್ಲವನ್ನೂ ಕಳೆದುಕೊಂಡಿದ್ದರು. ಈ ನಾಲ್ಕನೆಯ ಮಗು ಹುಟ್ಟಿದಾಗ ಅಪ್ಪನಿಗೆ ಕೆಲಸವಿಲ್ಲ. ಮನೆಯಲ್ಲಿ ತಿನ್ನಲು ಏನೇನೂ ಇಲ್ಲ. ಹೊಸಹಳ್ಳಿಯ ಜಂಗಮ ಕರಡಪ್ಪಜ್ಜ ಭಿಕ್ಷೆ ಬೇಡಿ, ತಂದ ಕಾಳು ಕಡ್ಡಿಯನ್ನು ಇವನಮ್ಮ ಭಾಗೀರಥಿಗೆ ಕೊಟ್ಟು - ನೋಡಮ್ಮಾ ನೀನು ಅನುಕೂಲಸ್ಥರ ಮನೆಯಿಂದ ಬಂದವಳು. ಬೇರೆಯವರಿಂದ ಪಡೆದು ಅಭ್ಯಾಸವಿಲ್ಲ. ನಾನು ತಂದು ಕೊಡುವೆ - ನೀನು ಮಗುವನ್ನು ದೊಡ್ಡದು ಮಾಡು ಎಂದಳು. ತಂದೆ ವಿಶ್ವನಾಥರಾಯ ಕೆಲಸ ಬದುಕಿಲ್ಲದೇ ತನಗಾಗಿ ಇದ್ದ ಪಾಳು ಬಿದ್ದ ಜಮೀನನ್ನು ಸಾಗುವಳಿ ಮಾಡಲು ಪ್ರಯತ್ನಿಸಿದ. ಅಂದಿನವರೆಗೂ ಕೆಲಸ ಮಾಡದಿದ್ದ ಮೈ ಕಟು ಕೆಲಸಕ್ಕೆ ಬಗ್ಗೀತೇ? ಅದು ಆಗಿ ಬರಲಿಲ್ಲ. ಕೊನೆಗೆ ಅವನಣ್ಣ ಅಲ್ಲೆಲ್ಲೋ ದೂರದ ಲಕ್ಕವಳ್ಳಿಯಲ್ಲಿ ಇವನಿಗಾಗಿ ಗುಮಾಸ್ತೆಯ ಕೆಲಸ ಕೊಡಿಸಿದರು. ಸರಿ ಅಲ್ಲಿ ಸಂಸಾರ ಪ್ರಾರಂಭಿಸಿದ ಸ್ವಲ್ಪವೇ ದಿನಗಳಲ್ಲಿ ಯಾರೋ ತರ್ಲೆ ಮಾಡಿ ವಿಶ್ವನಾಥರಾ‍ಯರ ಕೆಲಸ ಹೋಯಿತು. ಮತ್ತೆ ಅವರಣ್ಣ ಆಗ ತಾನೆ ಶರಾವತಿಯ ಅಣೆಕಟ್ಟಿನ ಕೆಲಸ ಪ್ರಾರಂಭವಾಗಿದ್ದು ಅಲ್ಲಿ ಮೇಸ್ತ್ರಿ ಬೇಕಾಗಿ ಇವರನ್ನು ಅಲ್ಲಿಗೆ ಸೇರಿಸಿದರು. ದುರ್ಭಿಕ್ಷದಲ್ಲಿ ಅಧಿಕಮಾಸ ಬಂದಂತೆ ಹಿಂದೆಯೇ ಮನೆಯಲ್ಲಿ ಇನ್ನೂ ಮೂರು ಮಕ್ಕಳು ಹುಟ್ಟಿದವು. ಮನೆಯೋ ಕೌರವರ ಸೈನ್ಯವೋ ಅನ್ನುವ ಹಾಗಿತ್ತು. ಪಾಪ ಭಾಗೀರಥಿ ಹಸುವಿನಂತಹ ಮನಸ್ಸಿನವಳು. ಹೇಗೋ ಜೀವನದ ಗಾಡಿಯನ್ನು ಎಳೆಯುತ್ತಿದ್ದಳು.

ಮಾರುತಿ ಹೈಸ್ಕೂಲಿಗೆ ಹೋಗುವ ವೇಳೆಗೆ ಶರಾವತಿ ಕೆಲಸ ಮುಗಿದು ಅವನಪ್ಪ ವಿಶ್ವನಾಥರಾಯರಿಗೆ ಮತ್ತೆ ಕೆಲಸ ಹೋಯಿತು. ಮುಂದೇನು ಮಾಡಬೇಕೆಂದು ದಿಕ್ಕೇ ತೋಚದಂತಾಗಿದ್ದರು. ದೇವರಂತೆ ಬಂದವರೊಬ್ಬರು ವಿಶ್ವನಾಥರಾಯರಿಗೆ ದೂರದ ಸಾಗರದ ಮಂಡಿಯಲ್ಲಿ ಕೆಲಸ ಕೊಡಿಸಿದರು. ಸಂಸಾರವನ್ನು ಲಿಂಗನಮಕ್ಕಿಯಲ್ಲೇ ಬಿಟ್ಟು ಸಾಗರಕ್ಕೆ ಕೆಲಸಕ್ಕಾಗಿ ಹೋಗುತ್ತಿದ್ದವರು, ವಾರಕ್ಕೊಮ್ಮೆ ಮನೆ ಸೇರುತ್ತಿದ್ದರು. ಹುಡುಗರು ಬುದ್ಧಿವಂತರು. ಶಾಲೆಯಲ್ಲಿ ಮಾಸ್ತರುಗಳಿಗೆ ಅಚ್ಚುಮೆಚ್ಚಿನವರಾಗಿದ್ದರು. ಶಾಲೆಯ ಮಾಸ್ತರರಲ್ಲೊಬ್ಬರಾದ ಜೋಯಿಸರು ಮಾರುತಿ ಮತ್ತು ಅವನಣ್ಣ ಶ್ರೀನಾಥನನ್ನು ಮನೆಗೆ ಕರೆದು ಅವರ ಮನೆಗೆ ಪಾಠಕ್ಕಾಗಿ ಬರುತ್ತಿದ್ದ ಚಿಕ್ಕ ಚಿಕ್ಕ ಮಕ್ಕಳಿಗೆ ಪಾಠ ಹೇಳಿಕೊಡಲು ಇವರಿಗೆ ಹೇಳಿ ಮನೆಗೆ ಸ್ವಲ್ಪ ಆಧಾರವಾಗಲು ಕಾರಣರಾದರು. ನೋಡಿ ದೇವರು ಹೇಗೆ ಯಾವ ಯಾವ ರೂಪದಲ್ಲಿ ಬಂದು ಮುಳುಗುತ್ತಿದ್ದವರಿಗೆ ಹುಲ್ಲು ಕಡ್ಡಿಯನ್ನಿತ್ತು ಮುಳುಗದಂತೆ ನೋಡಿಕೊಳ್ಳುವನು. ಇವರನ್ನು ಪರೀಕ್ಷೆ ಮಾಡಲೆಂದೇ ಅನ್ನುವಂತೆ ಅವರೆಲ್ಲರ ಹಿರಿಯ ಹುಡುಗ ಮನೆ ಬಿಟ್ಟು ಎಲ್ಲಿಗೋ ಹೋಗಿದ್ದ. ಮಂಡಿಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿ ಒಳ್ಳೆಯ ಹೆಸರು ಗಳಿಸಿದ್ದ ವಿಶ್ವನಾಥರಾಯರು ಅಲ್ಲಿ ಇಲ್ಲಿ ಪೌರೋಹಿತ್ಯವನ್ನೂ ಮಾಡಿಕೊಂಡು ಜೀವನರಥವನ್ನು ಎಳೆಯುತ್ತಿದ್ದರು. ಕೊನೆಯವರುಗಳು ಇನ್ನೂ ಚಿಕ್ಕ ಚಿಕ್ಕ ಮಕ್ಕಳು. ಮನೆಯಲ್ಲಿ ಶ್ರೀನಾಥ ಮತ್ತು ಮಾರುತಿಯಷ್ಟೇ ಸ್ವಲ್ಪ ತಿಳುವಳಿಕೆ ಬಂದ ಮಕ್ಕಳು. ಶ್ರೀನಾಥ ಸ್ವಲ್ಪ ಸೂಕ್ಷ್ಮ ಶರೀರದವ. ತೀರ್ಥ ತೆಗೆದುಕೊಂಡರೆ ಶೀತ ಮತ್ತು ಮಂಗಳಾರತಿ ತೆಗೆದುಕೊಂಡರೆ ಉಷ್ಣ ಆಗುತ್ತಿತ್ತು. ಇದ್ದುದರಲ್ಲಿ ಸ್ವಲ್ಪ ಗಟ್ಟಿಗ ಅಂದ್ರೆ ನಮ್ಮ ಮಾರುತಿಯೇ. ಎಂಥ ಕಾಲದಲ್ಲಿಯೂ ಅಪ್ಪನಿಗೂ ಅಮ್ಮನಿಗೂ ಮನೆಯ ಬೆನ್ನೆಲುಬಾಗಿ ನಿಲ್ಲುತ್ತಿದ್ದ.

ಪರೀಕ್ಷಿಸಲು ಗಟ್ಟಿಗರಿಗೇ ಕಷ್ಟಗಳು ಜಾಸ್ತಿ ಬರುವುದಂತೆ. ಮಾರುತಿ ಹತ್ತನೇ ತರಗತಿಗೆ ಬಂದಾಗ ತುಂಬಾ ಕಷ್ಟದ ಸಮಯ ಬಂದಿತು. ಚಿಕ್ಕ ಮಕ್ಕಳಿಗೆ ದಿನಂಪ್ರತಿ ಒಂದಲ್ಲ ಒಂದು ಕಾಯಿಲೆಗಳು. ಮಾರುತಿಯದೇ ಮನೆಯಲ್ಲಿ ಹೆಚ್ಚಿನ ಕೆಲಸಗಳೆಲ್ಲಾ. ಅವನಮ್ಮನಿಗೆ ಅವನಿಲ್ಲದಿದ್ದರೆ ಒಂದು ಕೈಯೇ ಕಳೆದು ಹೋದ ಅನುಭವವಾಗುತ್ತಿತ್ತು. ಆ ಕಡೆ ಪಬ್ಲಿಕ್ ಪರೀಕ್ಷೆಗೆ ಓದಿಕೊಳ್ಳಬೇಕು, ಈ ಕಡೆ ಮನೆ ಕಡೆಯೂ ನೋಡಿಕೊಳ್ಳಬೇಕು. ಹೀಗಿರುವಾಗ ಡಿಸೆಂಬರ್ ಮಾಹೆಯಲ್ಲಿ ಪರೀಕ್ಷೆಗೆ ಹಣ ಕಟ್ಟಬೇಕಾದ ಸಂದರ್ಭ ಬಂದಿತು. ಅದು ರಾಜ್ಯದ ಮಟ್ಟದಲ್ಲಿ ನಡೆಯುವ ಪರೀಕ್ಷೆ - ಅದಕ್ಕೆ ೧೦ ರೂಪಾಯಿಗಳನ್ನು ಕಟ್ಟಬೇಕಿತ್ತು. ಮನೆಯಲ್ಲಿ ಹಣವಿಲ್ಲ. ಪಾಠಕ್ಕೆ ಬರುತ್ತಿದ್ದ ಚಿಕ್ಕ ಮಕ್ಕಳು ಸರಿಯಾಗಿ ಹಣ ಕೊಟ್ಟಿಲ್ಲವೆಂದು ಜೋಯಿಸರು ಹೇಳಿದ್ದರು. ಆ ವಾರ ಅವರಪ್ಪ ಕೂಡಾ ಅದೇಕೋ ಬಂದೇ ಇರ್ಲಿಲ್ಲ. ಯಾರ ಮುಂದೆಯೂ ಕೈ ಚಾಚಬಾರದೆಂಬ ಅಣತಿ ಅಪ್ಪನದು. ಮನೆಯವರಲ್ಲೂ ಒಣ ಪ್ರತಿಷ್ಠೆ ತುಂಬಿತ್ತು. ಅಮ್ಮನಿಗಂತೂ ದಿಕ್ಕೇ ತೋಚದೆ, "ಮಾರುತಿ ನೋಡಪ್ಪಾ, ನೀನೇ ಏನಾದರೂ ಮಾಡಿ ಹಣ ಹೊಂದಿಸಿಕೊಂಡು ಪರೀಕ್ಷೆಗೆ ಕಟ್ಟು" ಅಂದಳು. ಪಾಪದ ಹುಡುಗ ಏನು ಮಾಡಿಯಾನು. ವಯಸ್ಸಿಕೆ ಮೀರಿದ ತಿಳುವಳಿಕೆ ಬುದ್ಧಿವಂತಿಕೆ ಇದ್ದರೂ ಹಣ ಎಲ್ಲಿಂದ ತಂದಾನು. ಹತ್ತಿರದವರು ಅನ್ನುವ ಎಲ್ಲರನ್ನೂ ಕೇಳಿದ್ದಾಯಿತು. ಸಾಲ ಕೊಡಲು ಎಲ್ಲರಿಗೂ ಭಯ, ಮತ್ತೆ ಹಣ ವಾಪಸ್ಸು ಬರುತ್ತದೋ ಇಲ್ಲವೋ ಅಂತ. ಜೋಯಿಸರು ಕಣ್ತಪ್ಪಿಸಿ ಓಡಾಡಲು ಆರಂಭಿಸಿದರು. ಅಪ್ಪನಿಗೆ ಪತ್ರ ಬರೆದರೂ ಉತ್ತರವಿಲ್ಲ. ನಂತರ ತಿಳಿದು ಬಂದದ್ದು, ಯಾವುದೋ ಕೆಲಸದ ಮೇಲೆ ಮಂಡಿಯವರು ಅವರನ್ನು ಶಿರಸಿ ಕಡೆಗೆ ಕಳುಹಿಸಿದ್ದರು. ಡಿಸೆಂಬರ್ ೩೦ರೊಳಗೆ ಹಣ ಕಟ್ಟಲು ಗಡುವು ಇದ್ದಿತ್ತು. ೨೯ ಆದರೂ ಎಲ್ಲೂ ಹಣ ಸಿಕ್ಕಲಿಲ್ಲ. ಅದೇ ವೇಳೆಯಲ್ಲಿ ಶ್ರೀನಾಥನಿಗೆ ಉಬ್ಬಸ ಜಾಸ್ತಿ ಆಗಿತ್ತು. ವೈದ್ಯರ ಬಳಿ ಹೋಗಲು ಹಣವಿಲ್ಲ. ಚಿಕ್ಕ ಮಕ್ಕಳಿಗೆ ಸಣ್ಣ ಪುಟ್ಟ ಜ್ವರ, ನೆಗಡಿ. ತಾಯಿಗಂತೂ ಇವರನ್ನೆಲ್ಲಾ ನೋಡಿಕೊಳ್ಳುವುದೇ ಒಂದು ದೊಡ್ಡ ಸಮಸ್ಯೆಯಾಗಿತ್ತು. ಮಾರುತಿ ಅವಳ ಮುಂದೆ ತನ್ನ ಸಮಸ್ಯೆ ಹೇಳಿಕೊಳ್ಳಲು ಇಚ್ಛಿಸಲಿಲ್ಲ. ೨೯ನೇ ತಾರೀಖು ರಾತ್ರಿಯೆಲ್ಲ ನಿದ್ದೆಯಿಲ್ಲದೇ ಹೊರಳಾಡುತ್ತಿದ್ದ. ಏನೇನೋ ಯೋಚನೆಗಳು. ಪುಸ್ತಕ ಹಿಡಿದು ಕೂತರೆ ಏನೂ ಕಾಣುತ್ತಿಲ್ಲ. ನಾಳೆಯನ್ನು ಹೇಗೆ ಎದುರಿಸುವುದೆಂಬ ಭಯದಲ್ಲಿ ಕಣ್ಣು ತುಂಬಿ ಬರುತ್ತಿದೆ.

ಹೇಗೋ ಬೆಳಗಾಯಿತು. ಶಾಲೆಯ ಕಡೆ ಹೋದ. ಅಲ್ಲಿ ಹೆಡ್ ಮಾಸ್ತರರನ್ನು ಕಂಡು ತನ್ನ ಕಷ್ಟ ಹೇಳಿಕೊಂಡ. ಅವರು ಏನೂ ಆಗದೆಂದು ಕೈ ಆಡಿಸಿದರು. ಎಲ್ಲೇ ಹೋದರೂ ಏನೇ ಪ್ರಯತ್ನಕ್ಕೆ ಕೈ ಹಾಕಿದರೂ ಅವಮಾನ ಆಗುತ್ತಿತ್ತು. ಮಧ್ಯಾಹ್ನ ೩ ಘಂಟೆಗೆ ಪರೀಕ್ಷೆಗೆ ಹಣ ಕಟ್ಟಲು ಗಡುವು ಮುಗಿಯುತ್ತದೆ. ಆಗ ಸಮಯ ೧ ಆಗಿದೆ. ಹೊಟ್ಟೆ ಹಸಿಯುತ್ತಿರುವುದರ ಕಡೆಗೆ ಪರಿವೆಯೂ ಇಲ್ಲದೇ ಎಲ್ಲೆಂದರಲ್ಲಿ ಓಡಾಡುತ್ತಿರುವ, ಮಾರುತಿ. ೨ ಘಂಟೆಗೆ ಸಾಗರದಿಂದ ಬರುವ ಬಸ್ಸನ್ನು ಎದುರುಗೊಳ್ಳಲು ಬಸ್ ನಿಲ್ದಾಣಕ್ಕೆ ಹೋದ. ಬಸ್ಸು ಬಂದಿತು. ಇವರಪ್ಪ ಇಳಿಯಲೇ ಇಲ್ಲ. ಚಾಲಕನ್ನನ್ನು ಕೆಳಿದ, ನಮ್ಮಪ್ಪನನ್ನು ನೋಡಿದಿರಾ? ಅದಕ್ಕವನು ಯಾರೋ ನಿಮ್ಮಪ್ಪ, ಮುಖ್ಯಮಂತ್ರಿಯೋ ಅಥವಾ ಪ್ರಧಾನ ಮಂತ್ರಿಯೋ ಅಂತ ವ್ಯಂಗ್ಯ ಮಾಡಿದ. ಎಳೆಯ ಮನಸ್ಸಿನ ಮೇಲೆ ಬರೆ ಎಳೆದಂತಾಯ್ತು. ಇನ್ನು ಮನೆ ಕಡೆಗೆ ಹೋಗಿ ಪ್ರಯೋಜನವಿಲ್ಲ. ಬದುಕನ್ನು ಎದುರಿಸಲೇಬೇಕೆಂಬ ಛಲ ಉಕ್ಕುತ್ತಿದೆ. ಸರಿ ಹಾಗೇ ರಸ್ತೆಗುಂಟ ಹೊರಟ. ಮನೆಕಡೆ ಗಮನವೂ ಬರಲಿಲ್ಲ. ಲಿಂಗನಮಕ್ಕಿಯಿಂದ ಕಾಡಿನ ಮುಖಾಂತರ ಕಾರ್ಗಲ್, ಜೋಗ ದಾಟಿ ಭಟ್ಕಳದ ರಸ್ತೆ ಹಿಡಿದ. ಸಂಜೆಯಾಯಿತು. ಅದ್ಯಾವ ಊರು ಅಂತ ಕೂಡ ತಿಳಿಯಲಿಲ್ಲ. ಅಲ್ಲೇ ಹತ್ತಿರದಲ್ಲಿದ್ದ ಮನೆಯ ಜಗುಲಿಯ ಮೇಲೆ ಮಲಗಿದ. ಸ್ವಲ್ಪ ಕಣ್ಣಿಗೆ ಜೊಂಪು ಹತ್ತಿತ್ತು, ಯಾರೋ ಬಂದು "ಲೇ ಮಾಣಿ ಎಂತದ್ದು ಮಾಡ್ತಿ ಇಲ್ಲಿ. ನಡೆ ಆಚೆಗೆ" ಅಂದರು. ಮಾತನಾಡಲು ತ್ರಾಣವೂ ಇಲ್ಲ. ಸ್ವಲ್ಪ ಸಮಯವಾದರೂ ಹುಡುಗನಿಂದ ಉತ್ತರ ಬರದಿರಲು ಮನೆಯಾತನಿಗೆ ಕರುಣೆ ಉಕ್ಕಿ ಬಂದಿತು. ಎಂಥದು! ಉಂಡಿಲ್ಲವೋ ಎಂದ. ಇವನು ತಲೆ ಅಲ್ಲಾಡಿಸಿದ. ಮನೆಯೊಳಗೆ ಹೋಗಿ ಅದೇನನ್ನೋ ತಂದು ಕೊಟ್ಟ. ಸ್ವಲ್ಪ ಅನ್ನ ಇತ್ತು. ಅದೂ ಹಳಸಿದ ವಾಸನೆ ಸಾರುತ್ತಿತ್ತು. ಜೊತೆಗಿದ್ದ ಸಾರಿನಂಥ ಪದಾರ್ಥ ಬಂಗಡಿ ಮೀನಿನ ವಾಸನೆಯ ಗಬ್ಬು ವಾಸನೆ. ಬರಿಯ ಅನ್ನವನ್ನೇ ಹೇಗೋ ಮಾಡಿ ಹೊಟ್ಟೆಯ ಒಳಕ್ಕೆ ತಳ್ಳಿದ. ಸ್ವಲ್ಪ ಹೊತ್ತು ನಿದ್ರಿಸಿ, ಬೆಳಗಾಗುತ್ತಲೇ ಅಲ್ಲಿಂದ ಹೊರಟ. ಹಾಗೇ ಅಲ್ಲಿ ಇಲ್ಲಿ ಸಿಕ್ಕಿದ್ದನ್ನು ತಿಂದು ಕುಡಿದು ೫-೬ ದಿನಗಳ ನಂತರ ಭಟ್ಕಳ ಪೇಟೆಯನ್ನು ತಲುಪಿದ. ಮುಂದೆ ಅಲ್ಲಿ ಏನು ಮಾಡಬೇಕು ಎನ್ನುವ ಪ್ರಶ್ನೆ ಭೂತದಂತೆ ಕಾಡಹತ್ತಿತು. ಪರೀಕ್ಷೆಗೆ ಹಣ ಕಟ್ಟುವ ಅವಧಿಯೂ ಮುಗಿದಿದೆ. ಯಾಕಾದರೂ ಏನು ಮಾಡಬೇಕು, ಎಲ್ಲಿ ಹೋಗಬೇಕು, ಜೀವನ ಅಂದ್ರೆ ಇಷ್ಟೇನಾ ಅನ್ನುವ ಯೋಚನೆ ಹುಟ್ಟಿತು. ಹೊಟ್ಟೆ ಚುರ್ ಅಂದಾಗ ಕಂಡದ್ದು ಹತ್ತಿರದ ಭಟ್ಟರ ಹೋಟೆಲ್. ಅಲ್ಲಿ ಹೋಗಿ ಕೆಲಸ ಕೇಳಿದ. ಅವರು ಇವನ ಪೂರ್ವಾಪರ ವಿಚಾರಿಸಿದರು. ಇವನು ಏನೋ ಒಂದು ಸುಳ್ಳು ಹೇಳಿದ. ಅಂತಹ ಸ್ಥಿತಿಯಲ್ಲೂ ತನ್ನ ಬಗ್ಗೆ ನಿಜ ಹೇಳಲು ಪ್ರತಿಷ್ಠೆ ಅಡ್ಡ ಬಂದಿತ್ತು. ಹೇಗೊ ಒಂದು ತಿಂಗಳು ಭಟ್ಟರು ಹೇಳಿದ ಕೆಲಸವನ್ನೆಲ್ಲಾ ಚೊಕ್ಕವಾಗಿ ಮಾಡಿ ಅವರ ಮೆಚ್ಚುಗೆ ಸಂಪಾದಿಸಿದ. ಭಟ್ಟರಿಗೆ ಇವನು ತನ್ನ ಬಗ್ಗೆ ಸುಳ್ಳು ಹೇಳಿದ್ದಾನೆಂಬ ಸುಳಿವು ಅದು ಹೇಗೋ ಸಿಕ್ಕಿತ್ತು. ಹತ್ತಿರ ಕರೆದು ಅವನ ತಲೆ ನೇವರಿಸಿ "ಲೇ ಮಾಣಿ ಇಂಥ ಸುಳ್ಳು ಹೇಳೂದ, ನೀನು ಬುದ್ಧಿವಂತ. ಓದಿ ಮುಂದೆ ಬರ್ಬೇಕಾದವ. ಹೇಳು ನಿನಗೇನು ತೊಂದರೆ" ಎಂದರು.

ಮಾರುತಿಗೆ ಭಟ್ಟರ ಪ್ರೀತಿಯ ಮಾತುಗಳು ಕೇಳಿ ಅಳುವೇ ಬಂದಿತು. ವಿಷಯವನ್ನೆಲ್ಲಾ ಅರುಹಿದ. ಭಟ್ಟರು ಕೈಗೆ ಸ್ವಲ್ಪ ಹಣವನ್ನಿತ್ತು, ನೋಡು ಈಗ ನೀನು ಮನೆಗೆ ನಡೆ. ಆಗಾಗ್ಯೆ ನನಗೆ ಪತ್ರ ಬರೆ. ನಿನ್ನನ್ನು ನೋಡಿದರೆ, ಸತ್ತು ಹೋದ ನನ್ನ ಮಗನ ಜ್ಞಾಪಕವಾಗುತ್ತಿದೆ. ನೀನು ಇಂದಿನಿಂದ ನನ್ನ ಮಗನೇ. ಚೆನ್ನಾಗಿ ಓದು. ನಿನಗೆಷ್ಟು ಬೇಕೋ ಅಷ್ಟು ಹಣವನ್ನು ನಾನು ಕೊಡುವೆ. ಮನೆಯಲ್ಲಿ ನನ್ನ ವಿಷಯ ತಿಳಿಸು. ಅಂದೇ ಬಸ್ಸಿನಲ್ಲಿ ಕುಳ್ಳಿರಿಸಿ ಲಿಂಗನಮಕ್ಕಿಗೆ ಕಳುಹಿಸಿದರು. ಮನೆಗೆ ಬಂದ ಮಾರುತಿ. ನೊಡ್ತಾನೆ, ಅವರಪ್ಪನಿಗೆ ಲಕ್ವ ಹೊಡಿದು ಮಲಗಿದ್ದಾರೆ. ಚಿಕ್ಕ ಮಕ್ಕಳಲ್ಲಿ ಕಾಯಿಲೆಯಿಂದ ಒಬ್ಬ ತೀರಿ ಹೋಗಿದ್ದಾನೆ. ಇವನನ್ನು ನೋಡಿದ ಕೂಡಲೇ ಅವರಮ್ಮ ಮತ್ತು ಶ್ರೀನಾಥ ತಬ್ಬಿ ಕೊಂಡು ಗೊಳೋ ಅಂದು ಅತ್ತು ಬಿಟ್ಟರು. ಮಾರ್ಚ್ ಪರೀಕ್ಷೆಗೆ ಕಟ್ಟಲು ಸಮಯವಾಗಿ ಹೋಗಿತ್ತು. ಆದರೂ ಮರುದಿನ ಹೆಡ್ ಮಾಸ್ತರರನ್ನು ಭೇಟಿಯಾಗಿ ವಿಷಯವನ್ನೆಲ್ಲಾ ಅರುಹಿದ.

ಅಷ್ಟು ಹೊತ್ತಿಗಾಗಲೇ ಊರಿನ ಮಂದಿಗೆಲ್ಲಾ ಮಾರುತಿಯ ವಿಷಯ ಗೊತ್ತಾಗಿತ್ತು. ಇನ್ನು ಸುಮ್ಮನೆ ಕೂತರೆ ಕೆಟ್ಟ ಹೆಸರು ಬರುವುದೆಂದೂ, ತಾನೂ ಏನಾದರೂ ಸಹಾಯ ಮಾಡಬೇಕೆಂದು ಹೆಡ್ ಮಾಸ್ತರರು ಬೆಂಗಳೂರಿನ ವಿದ್ಯಾ ಇಲಾಖೆಗೆ ದೂರವಾಣಿಯ ಮೂಲಕ ಮಾತನಾಡಿ ಹುಡುಗನಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕೆಂದು ಕೇಳಿಕೊಂಡರು. ದೇವರು ದೊಡ್ಡವನು. ಹಾಗೇ ಆಗಿ, ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿ ದೊರಕಿತು. ಪ್ರತಿ ತಿಂಗಳೂ ಭಟ್ಟರಿಂದ ಹಣ ಬರುತ್ತಿತ್ತು.

ಈ ಮಧ್ಯೆ ಒಮ್ಮೆ ಭಟ್ಟರು ಇವರ ಮನೆಗೆ ಬಂದು, ವಿಶ್ವನಾಥರಾಯರ ಚಿಕಿತ್ಸೆಗೆಂದು ಅಂಕೋಲಾಗೆ ಕೂಡ ಕರೆದುಕೊಂಡು ಹೋಗಿದ್ದರು.

ಮಾರುತಿಗೆ ಪರೀಕ್ಷೆಗಾಗಿ ಓದುವುದು ಬಿಟ್ಟು ಬೇರೆ ಯಾವುದೂ ಯೋಚನೆಗಳು ಬರದಂತೆ ಎಲ್ಲರೂ ನೋಡಿಕೊಂಡರು. ಮಾರ್ಚ್ ತಿಂಗಳಲ್ಲಿ ಪರೀಕ್ಷೆ ಮುಗಿಯಿತು. ಅಂಕೋಲಾದ ಪೊಕ್ಕ ಮಾನು ಗೌಡ ಔಷಧಿಯ ಸಹಾಯದಿಂದ ಮಾರುತಿ ತಂದೆಯ ಆರೈಕೆ ಮಾಡಿದ. ಬಹಳ ಬೇಗ ತಂದೆ ಆರೋಗ್ಯರಾದರು. ಮೇ ತಿಂಗಳ ಕೊನೆಯ ವಾರದಲ್ಲಿ ಭಟ್ಟರು ಕೈಯಲ್ಲಿ ದಿನಪತ್ರಿಕೆ ಹಿಡಿದು ಓಡೋಡಿ ಬಂದರು. ಜೊತೆಗೇ ಶಾಲೆಯ ಹೆಡ್ ಮಾಸ್ತರರು, ಜೋಯಿಸರು ಮತ್ತಿತರೇ ಮಾಸ್ತರರುಗಳೂ ಇದ್ದರು. ಮನೆಯಲ್ಲಿ ಎಲ್ಲರಿಗೂ ಏನಾಯಿತೆಂದು ಆತಂಕ. ಏದುಸಿರು ಬಿಡುತ್ತಾ ಭಟ್ಟರೇ ಹೇಳಿದರು - ವಿಶ್ವನಾಥರಾಯರೇ ನಿಮ್ಮ ಹುಡುಗ ಅಲ್ಲಲ್ಲ ನನ್ನ ಹುಡುಗ ಮಾರುತಿ ಹತ್ತನೆಯ ತರಗತಿ ಪರೀಕ್ಷೆಯಲ್ಲಿ ಮೊದಲ rank ಗಳಿಸಿದ್ದಾನೆ. ರಾಜ್ಯ ಸರ್ಕಾರದವರು ಅವನ ಮುಂದಿನ ಓದನ್ನೆಲ್ಲಾ ನೋಡಿಕೊಳ್ಳುತ್ತಾರೆ.

ಎಲ್ಲರೂ ಮಾರುತಿಯನ್ನು ಕೇಳಿದರು, ಏನನಿಸತ್ತೋ ಪುಟ್ಟಾ, ಮುಂದೆ ಓದಲು ನೀನೆಲ್ಲಿಗೆ ಹೋಗ್ತೀ? ಮಾರುತಿ ಎಂದ, ನನಗೆ ಓದು ಬೇಡ! ನನಗೆ ಕೆಲಸ ಬೇಕು. ಯಾರಾದರೂ ಕೆಲಸ ಕೊಡಿಸಿ - ಇಲ್ಲದಿದ್ದಲ್ಲಿ ಭಟ್ಟರ ಹೊಟೆಲ್ ಗೆ ಕೆಲಸಕ್ಕೆ ಸೇರುವೆ.

ಮುಂದೇನಾಯಿತು ....

ಕಾದು ನೋಡಿ - ಅಥವಾ ನೀವೇ ಯೋಚಿಸಿ ಮುಂದಿನ ಭಾಗ ಬರೆಯಿರಿ.

This page is powered by Blogger. Isn't yours?