ಮನದ ಮಾತು

Monday, June 26, 2006

 

'ಹಂಸಗೀತೆ'ಯ ಸಂಗೀತದ ಹಿಂದೆ....


ಮುನ್ನುಡಿ:

'ಹಂಸಗೀತೆ'
- ಕನ್ನಡದ ಪ್ರಸಿದ್ಧ ಚಿತ್ರಗಳಲ್ಲೊಂದು.
ಚಿತ್ರದುರ್ಗದ ಮದಕರಿನಾಯಕನ ಬಳಿ ಆಸ್ಥಾನ ವಿದ್ವಾಂಸರಾಗಿದ್ದ ಶ್ರೀ.ವೆಂಕಟಸುಬ್ಬಯ್ಯನವರ ಜೀವನವನ್ನಾಧರಿಸಿ ತ.ರಾ.ಸುಬ್ಬರಾಯರು ಬರೆದಿದ್ದ ಕೃತಿಯ ಪ್ರೇರಣೆಯಿಂದ ಈ ಸಂಗೀತಮಯ ಚಿತ್ರವನ್ನು ನಿರ್ಮಿಸಲಾಯಿತು. ಜಿ.ವಿ.ಅಯ್ಯರ್ ನಿರ್ದೇಶಿಸಿ, ನಿರ್ಮಿಸಿದ ಈ ಚಿತ್ರ ಅನಂತನಾಗ್ ಅವರ ಎರಡನೇ ಕನ್ನಡ ಚಲನಚಿತ್ರವೂ ಹೌದು. ಅನಂತನಾಗ್ ಅವರ ಕಲಾಪ್ರೌಢಿಮೆಗೆ ಆರಂಭದ ದಿನಗಳಲ್ಲೇ ಓರೆ ಹಚ್ಚಿದ ಚಿತ್ರವಿದು. ಸಂಗೀತ ಪ್ರಧಾನವಾದ ಈ ಚಿತ್ರಕ್ಕೆ 'ಅತ್ಯುತ್ತಮ ಸಂಗೀತ' ಪ್ರಶಸ್ತಿಯ ಗರಿಯು ದೊರಕಿತು. ಆ ಸಂಗೀತದ ಹಿಂದಿನ ಅಂಶಗಳ ಬಗ್ಗೆ ಒಂದು ಪರಿಚಯ...ಈ ಲೇಖನ.



'ಹಂಸಗೀತೆ' ಚಿತ್ರವು ಬಿಡುಗಡೆಯಾದದ್ದು ೧೯೭೫. ಸಂಗೀತ ವಿದ್ವಾಂಸರೊಬ್ಬರ ಜೀವನವನ್ನಾಧರಿಸಿದ ಸಂಗೀತಮಯ ಚಿತ್ರ. ಈ ಚಿತ್ರದಲ್ಲಿನ ಹಾಡೊಂದರ ಗಾಯನಕ್ಕೆ ರಾಷ್ಟ್ರಪ್ರಶಸ್ತಿಯನ್ನೂ, ಚಿತ್ರದ ಸಂಗೀತ ನಿರ್ದೇಶನಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನೂ ಡಾ.ಎಂ.ಬಾಲಮುರಳಿಕೃಷ್ಣ ಅವರು ಪಡೆದರು.
ಇದು ಹಳೆಯ ಮಾತಾಯಿತು. ಸುಮಾರು ಇಪ್ಪತ್ತೇಳು ವರ್ಷಗಳ ನಂತರ:
ಈ ಚಿತ್ರದ ನಿರ್ದೇಶಕರೂ, ನಿರ್ಮಾಪಕರಾದ ಸ್ವತಃ ಜಿ.ವಿ.ಅಯ್ಯರ್ ಅವರೇ ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಈ ಚಿತ್ರದ ಸಂಗೀತದ ಹಿಂದಿನ ರಹಸ್ಯವನ್ನು ಹೊರಗೆಡವಿದರು.
ಜಿ.ವಿ.ಅಯ್ಯರ್ ಹೇಳಿಕೆಯ ಸಾರಾಂಶ:

ಹಂಸಗೀತೆ ಚಿತ್ರಕ್ಕೆ ಸಂಗೀತ ನೀಡಿದವರು ಯಾರೆಂದುಕೊಂಡಿದ್ದೀರಿ? ಬಾಲಮುರಳಿಕೃಷ್ಣ ಅವರಲ್ಲ. ಬದಲಾಗಿ, ಟಿ.ಜಿ.ಲಿಂಗಪ್ಪ!
ಈ ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನು ಬಿ.ವಿ.ಕಾರಂತರಿಂದ ಕೊಡಿಸಬೇಕು, ಆ ನಿಟ್ಟಿನಲ್ಲಿ ಅವರ ಪ್ರತಿಭೆ ಹೊರಬರಬೇಕೆಂದು ನನ್ನ ಹಂಬಲವಾಗಿತ್ತು. ಆದರೆ ಲಿಂಗಪ್ಪನವರು ಇದಕ್ಕೆ ಒಪ್ಪದಾದರು. ಚಿತ್ರದ ಸಂಪೂರ್ಣ ಸಂಗೀತದ ಜವಾಬ್ದಾರಿ ತಮ್ಮದಾಗಿರಬೇಕು ಎಂದು ಅವರ ವಾದವಾಗಿತ್ತು. ಕೊನೆಗೆ, ಅವರಿಗೆ ಸಲ್ಲಬೇಕಿದ್ದ ಹಣವನ್ನು ಸಲ್ಲಿಸಿದೆ, ನಂತರ ಅವರು ಚಿತ್ರದಿಮ್ದ ಹೊರಗೆ ಹೋದರು. ಕಾರಂತರು ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದರು.
ಚಿತ್ರವು ಸಂಪೂರ್ಣವಾಗಿ ತಯಾರಾಗಿ, ಚಿತ್ರದ ಟೈಟಲ್ ಕಾರ್ಡ್ಸ್ ಸಿದ್ಧಪಡಿಸುವಾಗ ಒಂದು ಸಮಸ್ಯೆ ಎದುರಾಯಿತು. ಸಂಗೀತ ನಿರ್ದೇಶಕರೆಂದು ಯಾರ ಹೆಸರನ್ನು ಹಾಕಬೇಕೆಂದು. "ರಾಗ ಸಂಯೋಜನೆ ನನ್ನದಲ್ಲ, ಮುಖ್ಯ ಸಂಗೀತ ನನ್ನದಲ್ಲ. ಹಿನ್ನೆಲೆ ಸಂಗೀತವಷ್ಟೆ ನನ್ನ ಕಾಣಿಕೆ ಈ ಚಿತ್ರದಲ್ಲಿ. ಆದ್ದರಿಂದ ನನ್ನ ಹೆಸರು ಹಾಕುವುದು ಸರಿಯಾಗುವುದಿಲ್ಲ" ಎಂದು ಕಾರಂತರು ಸಮರ್ಥಿಸಿಕೊಂಡರು. ನಂತರ ಲಿಂಗಪ್ಪನವರನ್ನು ಸಂಪರ್ಕಿಸಿದಾಗ, ಅವರು "ನಾನು ಚಿತ್ರತಂಡದಿಂದ ಹೊರಬಂದಿದ್ದೇನೆ. ನನಗೂ ಈ ಚಿತ್ರಕ್ಕೂ ಸಂಬಂಧವಿಲ್ಲ. ಆದಕಾರಣ, ನನ್ನ ಹೆಸರು ನೀವು ಹಾಕಲು ಸಾಧ್ಯವಿಲ್ಲ" ಎಂದು ಹೇಳಿ ಹೊರಗುಳಿದರು.
ಈ ಜಿಜ್ಞಾಸೆಯಲ್ಲಿರುವಾಗ, ಬಾಲಮುರಳಿಕೃಷ್ಣನವರು ಈ ರೀತಿ ಹೇಳಿದರು: "ಅವರು ಸಂಗೀತವನ್ನು ಕೊಟ್ಟಿದ್ದಾರೆ. ಆದರೆ ನಾನು ಸುಶ್ರಾವ್ಯವಾಗಿ ಹಾಡಿದ್ದೇನೆ. ಹಾಗಾಗಿ, ನೀವು ನನ್ನ ಹೆಸರನ್ನು ಸಂಗೀತ ನಿರ್ದೇಶಕನೆಂದು ಹಾಕಬಹುದು". ನಾವು ಹಾಗೆಯೇ ಮಾಡಿದೆವು. ನಂತರ, ಅವರಿಗೆ 'ಅತ್ಯುತ್ತಮ ಸಂಗೀತ ನಿರ್ದೇಶಕ' ಪ್ರಶಸ್ತಿಯೂ ದೊರಕಿತು!


ಮುಗಿಸುವ ಮುನ್ನ:

ಚಿತ್ರರಂಗ ಒಂದು ಮಾಯಾಲೋಕ. ಪರದೆಯ ಮೇಲೆ ಕಾಣುವುದು ಒಂದು ಚಿತ್ರ, ಕೇಳಿಸುವುದು ಒಂದು ಶಬ್ಧವಾದರೆ, ಪರದೆಯ ಹಿಂದೆ ನೂರೆಂಟು ದೃಶ್ಯಗಳು, ಶಬ್ಧಗಳು, ವಿದ್ಯಮಾನಗಳು. ಹಲವಾರು ವರ್ಷಗಳಿಂದ ಸುಪ್ತವಾಗಿರುವ ರಹಸ್ಯಗಳು ಯಾವುದೇ ಕ್ಷಣದಲ್ಲಿ ಹೊರಬೀಳುತ್ತವೆ.
ಈ ಮೇಲಿನ ರಹಸ್ಯ ಹೊರಬಂದಾಗ ವಿಧವಿಧವಾದ ಅಭಿಪ್ರಾಯಗಳು ಕೇಳಿಬಂದವು, ಬರುತ್ತಿವೆ.
"ಇಷ್ಟು ದಿನಗಳಿಂದ, ವರ್ಷಗಳಿಂದ ಗೋಪ್ಯವಾಗಿಟ್ಟಿದ್ದ ರಹಸ್ಯವನ್ನು ಅಯ್ಯರ್ ಏಕೆ ಬಯಲು ಮಾಡಿದರು? ಅದರ ಅಗತ್ಯವಿತ್ತೆ?" ಎಂದೆನ್ನುವವರು ಕೆಲವರು. "ಇಷ್ಟು ವರ್ಷಗಳ ಮೇಲಾದರೂ ಸತ್ಯಾಂಶ ಹೊರ ಬಂತಲ್ಲಾ! ಯಾವಾಗ ಹೊರಬಂದರೆ ಏನಂತೆ? ಸತ್ಯ ಸತ್ಯವೇ" ಎನ್ನುವವರು ಹಲವರು.
ಇದರಿಂದ ಅಯ್ಯರ್, ಬಾಲಮುರಳಿಕೃಷ್ಣ, ಟಿ.ಜಿ.ಲಿಂಗಪ್ಪ, ಬಿ.ವಿ.ಕಾರಂತ್ ಇವರ ವ್ಯಕ್ತಿವರ್ಚಸ್ಸಿನಲ್ಲೇನಾದರೂ ವ್ಯತ್ಯಾಸಗಳಾದುವೇ/ಆಗಬಹುದೇ? ಇದು ಅವರವರ ನಂಬಿಕೆಗಳಿಗೆ ಬಿಟ್ಟದ್ದು.


~ ಮನ

Comments:
ಇದ್ಯಾವುದೂ ವಿಷಯಗಳೇ ನನಗೆ ಗೊತ್ತಿರ್ಲಿಲ್ಲ. ಆ ಚಿತ್ರ ಬಂದಾಗ ಇಷ್ಟೆಲ್ಲಾ ಆಯಿತೇ? ಆಗ ವೃತ್ತಪತ್ರಿಕೆಯಲ್ಲೂ ಈ ವಿಷಯಗಳು ಬಂದಿರಲಿಲ್ಲ. ಯಾರೋ ಬೆವರು ಸುರಿಸಿದ್ದು, ಕಡೆಗೆ ಇನ್ಯಾರಿಗೂ ಫಲ ದೊರಕಿದ್ದು. ಇದುವೇ ಜೀವನ.

ಬಹಳ ಅತ್ಯಮೂಲ್ಯ ಮಾಹಿತಿಯನ್ನು ಸಂಗ್ರಹಿಸಿ ಓದುಗರ ಮುಂದಿಟ್ಟಿದ್ದಕ್ಕೆ ಧನ್ಯವಾದಗಳು.
 
ಇದನ್ನು ಮುಂಚೆ ಒದಿದ್ದೆ. ಪತ್ರಿಕ ಪ್ರತಿನಿದಿಗಳು, ಐಯೆರ್ ರವರು ಇಸ್ಟು ವರುಷಗಳ ನಂತರ ಈ ವಿಷಯವನ್ನು ಬಹಿರಂಗ ಪಡಿಸಿದ್ದಕ್ಕೆ ಕಿಡಿಕಾರಿದ್ದರು ಅದನ್ನೆಲ್ಲ ಒಂದೆ ಕಡೆ ಕಲೆ ಹಾಕಿ ಒಳ್ಲೆ ಕೆಲಸ ಮಾಡಿರುವೆ.

ಭೂತ
 
ಪತ್ರಿಕೆಗಳಲ್ಲಿ ಇದನ್ನು ಓದಿದ್ದೆ. ನಿಮ್ಮ ಬ್ಲಾಗ್‍ನಲ್ಲಿ ದಾಖಲಿಸಿ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮ್ಮ ಬ್ಲಾಗ್‍ನಲ್ಲಿ ಇಂತಹ ನಿಗೂಢ ಸತ್ಯಗಳನ್ನು ಬಯಲಿಗೆಳೆಯಿರಿ. ಬಹುಶ: ಹಂಸಗೀತೆಗೆ ಪ್ರಶಸ್ತಿ ದೊರಕಿರದಿದ್ದರೆ, ಈ ವಿಷಯಗಳೆಲ್ಲ ಬೆಳಕಿಗೇ ಬರುತ್ತಿರಲಿಲ್ಲವೇನೋ.

ನನ್ನ ಅನಿಸಿಕೆಯೇನೆಂದರೆ - ಇಲ್ಲಿ ಯಾರದೂ ತಪ್ಪಿಲ್ಲ, ಯಾರಿಗೋ ಅನ್ಯಾಯವಾಗಿದೆ, ಆದರೆ ಅದಕ್ಕೆ ಯಾರೂ ಹೊಣೆಯಲ್ಲ. ವಿಧಿಯ ಕೈವಾಡ ಎನ್ನೋಣವೇ? :-)
 
ಹಂಸಗೀತೆ ಹಿಂದೆ ಈ ರೀತಿ ಕಲರವವೇ !
ಸತ್ಯ ಬೆಳಕಿಗೆ ತಂದಿದ್ದಕ್ಕೆ ಥ್ಯಾಂಕ್ಸ್..
ನಿಜಕ್ಕೂ ಬೆಳ್ಳಿ ಪರದೆ ಹಿಂದೆ ಎನೇನೂ ಅಡಗಿದೆಯೋ ಎನೋ..
 
Sathya endigadaroo sathyave. adakke eradu mathilla. ee sangeetha nirdeshanakana hesrina hinde yavude rahasyavirali, BV Karanth, TJ nijalingappanavara sathya nadevalikeyannu,oudAryatheyannu gamnisi. Ide haNada hinde biddavarAgiddare adara pariNAma bereye Aguththiththu.
 
Post a Comment



<< Home
This page is powered by Blogger. Isn't yours?