ಮನದ ಮಾತು

Wednesday, June 21, 2006

 

ಕರ್ಮಯೋಗಿ (ಕಥೆಯ ಭಾಗ ೩ - ಮನ)


'ಕರ್ಮಯೋಗಿ' ಭಾಗ ೧
'ಕರ್ಮಯೋಗಿ' ಭಾಗ ೨
ಇದೀಗ ಓದಿ ಅಂತಿಮ ಭಾಗ: 'ಕರ್ಮಯೋಗಿ' ಭಾಗ ೩


ಮಾರುತಿಯ ಮನಸ್ಸು ಪರಿವರ್ತನೆಗೊಂಡದ್ದನ್ನು ಮನಗಂಡ ಶ್ರೀನಾಥನಿಗೆ ಸ್ವರ್ಗವೇ ಧರೆಗಿಳಿದಂತಾಯ್ತು. ಕೂಡಲೆ, "ಅಬ್ಬಾ..ಆ ದೇವ್ರು ದೊಡ್ಡವ್ನು, ಬೆಟ್ಟದಂಗಿದದ್ದನ್ನ, ಮಂಜಿನಂತೆ ಕರಗಿಸಿಬಿಟ್ಟ" ಎಂದು ಮಾರುತಿಯ ಕೈಯನ್ನು ತೆಗೆದು ಶಂಕರನ ಕೈಗಿಟ್ಟು ಮೆದುವಾಗಿ ಎರಡು ಸಲ ತಟ್ಟುತ್ತಾನೆ. ಮೂವರೆದೆಯಲ್ಲೂ ಸಂತಸ ಉಕ್ಕಿ ಹರಿಯುತಿದೆ. ಮನೆ ಕಡೆಗೆ ವಾಪಸಾಗಹತ್ತಿದರು.

ಮನೆಯ ಬಾಗಿಲಲ್ಲಿಯೇ ನಿಂತಿದ್ದ ಭಾಗಿರಥಮ್ಮಳಿಗೆ, ಮೂವರು ಮಕ್ಕಳೂ ಹಸನ್ಮುಖಿಯರಾಗಿ ಮನೆಯ ಕಡೆ ಬರುತ್ತಿರುವದನ್ನು ನೋಡಿ, ನಿರಾಶೆಯ ಕಾರ್ಮೋಡಗಳೆಲ್ಲವೂ ಚದುರಿದಂತಾಯ್ತು. ಮಾರುತಿಯ ಮೊಗದಲ್ಲಿ, ಆ ರೀತಿಯ ಕಾಂತಿ, ಮುಗುಳ್ನಗೆ ನೋಡಿದ್ದನ್ನೇ ಮರೆತಿದ್ದಳು ಆ ತಾಯಿ. ಅವನ, ಓದಿನ ಬಗ್ಗೆ ಕಟ್ಟಿದ್ದ ಆಶಾಗೋಪುರಕ್ಕೆ ಹೊಸ ಜೀವ ಬಂದಿತ್ತು.
ಶ್ರೀನಾಥ ಓಡಿ ಬಂದು, "ಅಮ್ಮಾ, ಮಾರುತಿ ಮುಂದಕ್ಕೆ ಓದ್ತಾನೆ! ಅಪ್ಪಾ, ಮಾರುತಿ ಮುಂದಕ್ಕೆ ಓದ್ತಾನೆ!!" ಎಂದು ಗಂಟಲಿನಲ್ಲಿರುವ ಶಕ್ತಿಯನ್ನೆಲ್ಲಾ ಉಪಯೊಗಿಸಿ ಕಿರುಚುತ್ತಾ ತನ್ನ ಸಂತಸ ವ್ಯಕ್ತಪಡಿಸುತ್ತಾನೆ. ತಂದೆ, ತಾಯಿ, ತಮ್ಮಂದಿರ ಆನಂದಕ್ಕೆ ಪಾರವೇ ಇರಲಿಲ್ಲ. ಭಾಗಿರಥಮ್ಮ ಮಾರುತಿಯನ್ನು ಬಾಚಿ ತಬ್ಬುತ್ತಾಳೆ, "ಮಗಾ...ಕೊನೆಗೂ ಒಪ್ಕೊಂಡ? ನನ್ ಕಿವಿನೇ ನಂಬಕ್ಕಾಗ್ತಿಲ್ಲ" ಎಂದು ಗದ್ಗದಿತಳಾದಳು. ಶಂಕರ "ಅಮ್ಮ ಇನ್ಮೇಲೆ, ಇವ್ನು ನಂಜೊತೆ ಬೆಂಗಳೂರ್‍ನಲ್ಲಿರ್ತಾನೆ. ಅಲ್ಲೇ ಪಿ.ಯು.ಸಿ ಗೆ ಸೇರ್ತಾನೆ. ಇನ್ಮೇಲೆ ಇವನ ಜವಾಬ್ದಾರಿ ನಂದು". ಇಷ್ಟೇಳುವಷ್ಟರಲ್ಲಿ, ಮನೆಮಂದಿಯೆಲ್ಲಾ ಹೊರಗೋಡಿ ಬಂದಿದ್ದರು. ವಿಶ್ವನಾಥರಾಯರು, ಮಾರುತಿಯ ತಲೆ ನೇವರಿಸಿ ಎದೆಗಪ್ಪಿಕೊಂಡರು. ಇದನ್ನೆಲ್ಲಾ ನೋಡಿದ ಭಟರು ಕೂಡಲೆ ಹೋಟೆಲಿನಿಂದ ಸಿಹಿತಿಂಡಿಗಳನ್ನು ತರಲು ಧಾವಿಸಿದರು. ಅಷ್ಟೊತ್ತಿಗಾಗಲೆ, ಕಮಲಳ ಅಡುಗೆ ಘಮ್ಮೆನ್ನುತ್ತಿತ್ತು. ಮನೆಯಲ್ಲಿ ಹಿಂದೆಂದೂ ಕಾಣದಂತಹ ಹಬ್ಬದ ವಾತವರಣ ಮೂಡಿತ್ತು. ಎಲ್ಲರೂ ಸಾಲಾಗಿ ಕುಳಿತರು. ಮಾರುತಿಯ ಒಂದು ಪಕ್ಕದಲ್ಲಿ ಕೈ ಹಿಡಿದು ಭಾಗಿರಥಮ್ಮ ಕುಳಿತರೆ, ಇನ್ನೊಂದು ಪಕ್ಕದಲ್ಲಿ ಪ್ರೀತಿಯ ಅಣ್ಣನ ಷರಟು ಗಟ್ಟಿಯಾಗಿ ಹಿಡಿದು ಕುಳಿತಿರುವ ಕಿಶೋರ. ಕಮಲಳು ಎಲ್ಲರಿಗೂ ಬಡಿಸುವಷ್ಟರಲ್ಲಿ, ಓಡೋಡಿ ಬಂದ ಭಟರು, ಎಲ್ಲರಿಗೂ ಸಿಹಿ ತಿಂಡಿಯನ್ನು ಹಂಚುತ್ತಾ..."ನಂಗೂ ಊಟ ಬಡಿಸಮ್ಮ ಕಮಲ" ಎಂದು ಮುಗುಳ್ನಗುತ್ತಾ ರಾಯರ ಪಕ್ಕದಲ್ಲಿ ಆಸೀನನಾಗುತ್ತಾರೆ.
ಎಲ್ಲರೆದೆಯಲ್ಲೂ ಹರುಷದ ಹೊನಲು...ಜೊತೆಗೆ ಘಮ್ಮೆನ್ನುವ ಅಡುಗೆ, ಈಗ ಭಟರು ತಂದಿರುವ ಸಿಹಿತಿಂಡಿ ಬೇರೆ. ಆಹಾ..ಈ ಪಂಕ್ತಿಯ ಊಟದಲ್ಲಿರುವ ಸವಿಯೇ ಸವಿ. ಇದಕ್ಕಿಂತ ಬೇರೆ ಸ್ವರ್ಗ ಉಂಟೆ?
ರಾತ್ರಿ ಪೂರ್ತಿ, ಅಣ್ಣತಮ್ಮಂದಿರು ಹಾಡಿ ಕುಣಿದರು. ದೊಡ್ಡ ಮಕ್ಕಳೂ ಎಳೆಯ ಮಕ್ಕಳಾಗಿದ್ದರು. ಕಿಶೋರ ಮಾರುತಿಯ ಷರಟು ಬಿಟ್ಟೇ ಇರಲಿಲ್ಲ. ಶಂಕರನು, ತನ್ನ ತಾಯಿಯನ್ನು, ಹೆಂಡತಿಯನ್ನು ಕರೆದು ಸ್ವಲ್ಪ ಕಾಲ ಮಾತಾಡಿದನು. ಅಪ್ಪನ ಆರೋಗ್ಯದ ಬಗ್ಗೆ, ತಮ್ಮಂದಿರ ಓದಿನ ಬಗ್ಗೆ, ಮನೆಯ ನಿರ್ವಹಣೆ ಬಗ್ಗೆ ಕೆಲವು ಹಿತನುಡಿಗಳನ್ನು ಹೇಳಿದನು. ಮಾರುತಿಯ ಬಗ್ಗೆ ಯಾವುದೇ ರೀತಿಯಲ್ಲೂ ಚಿಂತಿಸದಂತೆ ತಾಯಿಯಲ್ಲಿ ಕೇಳಿಕೊಂಡನು. ತಮ್ಮಂದಿರು ಏನಾದರು ತಪ್ಪು ಮಾಡಿದರೆ, ಅದನ್ನು ಹೊಟ್ಟೆಗೆ ಹಾಕಿಕೊಂಡು, ಅವರ ತಪ್ಪನ್ನು ತಿದ್ದಿ ಅವರನ್ನು ಸರಿದಾರಿಗೆ ತರುವಂತೆ ಹೆಂಡತಿಯಲ್ಲಿ ವಿನಂತಿಸಿಕೊಂಡನು. ತಾನು ತಂದಿದ್ದ ಸ್ವಲ್ಪ ಹಣವನ್ನು ತಾಯಿಯ ಕೈಗಿಟ್ಟು, "ಇನ್ಮೇಲಾದ್ರು ನಿನ್ನ ಜೀವ ನೆಮ್ಮದಿಯಾಗಿರ್ಬೇಕು ಅನ್ನೋದೆ ನನ್ನ ಆಸೆ" ಅನ್ನುವನು. ಇವೆಲ್ಲಕ್ಕೂ ತಾಯಿಯು ಕಣ್ಣಿನಲ್ಲಿಯೇ ಆನಂದ ಸೂಚಿಸುತ್ತಾಳೆ.
ಬೆಳಗಾಯಿತು...ಶಂಕರ, ಮಾರುತಿ ಇಬ್ಬರೂ ಹೊರಟು ನಿಂತಿದ್ದಾರೆ. ರಾತ್ರಿ ಪೂರ್ತಿ ಕಮಲ ಏನೇನೋ ತಿಂಡಿ ತಿನಿಸುಗಳನ್ನು ತಯಾರಿಸಿದ್ದಾಳೆ. ಒಂದು ಡಬ್ಬಿಯಲ್ಲಿ ಹಾಕಿ ತಂದು ಮಾರುತಿಯ ಬಟ್ಟೆಯ ಬುಟ್ಟಿಯಲ್ಲಿಡುತ್ತಾಳೆ. ಮಾರುತಿಯು ಕಣ್ಣಲ್ಲೇ ಅತ್ತಿಗೆಗೆ ಕೃತಜ್ಞತೆ ಸಲ್ಲಿಸುತ್ತಾನೆ.
ಕಿಶೋರ ಮಾರುತಿಯ ಷರಟು ಹಿಡಿದೇ ಇದ್ದಾನೆ. ಮಾರುತಿಯು ಕಿಶೊರನನ್ನು ಎತ್ತಿ ತನ್ನ ಬೆನ್ನಿಗೆ ಹಾಕಿಕೊಂಡು, ಕಿಶೊರನ ಕೈಗಳನ್ನು ತನ್ನ ಕುತ್ತಿಗೆಗೆ ಗಂಟು ಹಾಕಿಕೊಳ್ಳುತ್ತಾನೆ. ಅಪ್ಪ, ಅಮ್ಮ,ಅತ್ತಿಗೆ ಅಣ್ಣಂದಿರೆಲ್ಲರ ಕಾಲು ಮುಟ್ಟಿ ನಮಸ್ಕರಿಸುತ್ತಾನೆ. ಭಾಗೀರಥಮ್ಮ, ಕಣ್ಣೀರಿಡುತ್ತಲೇ ಆಶೀರ್ವಾದ ಮಾಡಿ ಕಳಿಸಿಕೊಡುತ್ತಾಳೆ.
ಎಲ್ಲರಿಗೂ "ಹೋಗಿ ಬರ್ತೀನಿ" ಎಂದು ಹೇಳಿ, ಭಾರವಾದ ಮನಸ್ಸಿನಿಂದ ಬಸ್‍ಸ್ಟ್ಯಾಂಡ್ ಕಡೆಗೆ ತೆರಳುತ್ತಾರೆ ಶಂಕರ ಮತ್ತೆ ಮಾರುತಿ. ಜೊತೆಗೆ ಮಾರುತಿಯ ಬೆನ್ನಿಗಂಟಿರುವ ಕಿಶೋರ ಹಾಗು ಶಂಕರನ ಕೈ ಹಿಡಿದು ನಡೆದಿರುವ ಶ್ರೀನಾಥ. ಬಸ್ಸು ಹಾರ್ನ್ ಹೊಡೆಯತೊಡಗಿತು. ಕಿಶೋರನನ್ನು ಶ್ರೀನಾಥನಿಗೆ ಒಪ್ಪಿಸಿದನು ಮಾರುತಿ. ಕಿಶೋರನಿಗೆ ಅಳುವೇ ಬಂದಿತಾದರೂ, ಪ್ರೀತಿಯ ಅಣ್ಣನಿಗೆ ಟಾಟ ಮಾಡುತ್ತಾ ಕೈ ಅಲ್ಲಾಡಿಸುತ್ತಾನೆ. ಶಂಕರ, ಮಾರುತಿ ಇಬ್ಬರು ಬಸ್ಸನ್ನೇರಿ ಶ್ರೀನಾಥ ಮತ್ತು ಕಿಶೊರನ ಕಡೆ ನೋಡುತ್ತಲೆ ಸೀಟಿನಲ್ಲಿ ಕೂರುತ್ತಾರೆ. ಕಿಶೋರ ಕೈ ಆಡಿಸುತ್ತಲೇ ಇದ್ದಾನೆ, ಸಣ್ಣದಾಗಿ ಅಳುತ್ತಲೂ ಇದ್ದಾನೆ. ಮಾರುತಿಯ ಕೆನ್ನೆ ಮೇಲೆ ಹನಿಗಳು ಇಳಿಯುತ್ತಿವೆ, ಅವನೂ ಕಿಶೋರನ ಕಡೆ ಕೈ ಬೀಸುತ್ತಿದ್ದಾನೆ. ಬಸ್ಸು ಜೋರಾಗಿ ಹಾರ್ನ್ ಮಾಡುತ್ತಾ ಹೊರಟಿತು.
ಆ ಬಸ್ಸಿನ ಗಾಲಿಗಳ ವೇಗದಷ್ಟೇ ವೇಗವಾಗಿ ಕಾಲಚಕ್ರವು ಉರುಳಿತು. ಪಿ.ಯು.ಸಿ ಯಲ್ಲಿ ವಿಜ್ಞಾನ ವಿಷಯ ಆಯ್ದುಕೊಂಡ ಮಾರುತಿ, ಅಲ್ಲಿಯೂ ಮೊದಲ ರ್‍ಯಾಂಕ್ ಗಿಟ್ಟಿಸಿದ. ನಂತರ, ಬೆಂಗಳೂರಿನ ಬಿ.ಎಂ.ಸಿ. ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸೇರಿ, ಹಗಲಿರುಳು ಶ್ರಮಪಟ್ಟು ಓದಿ, ಡಾಕ್ಟರ್ ಆಗುತ್ತಾನೆ. ಬಹುಬೇಗ ಯಶಸ್ಸು, ಕೀರ್ತಿ, ಸಂಪತ್ತೆಲ್ಲವನ್ನೂ ಗಳಿಸುತ್ತಾನೆ. ತಾನು ಹತ್ತಿದ ಏಣಿಯನ್ನೆಂದೂ ಮರೆಯದೆ ಮನೆಮಂದಿಯನ್ನೆಲ್ಲಾ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾನೆ. ತನ್ನ ತಾಯಿಯ ಕನಸು ನನಸು ಮಾಡುತ್ತಾನೆ. ತಮ್ಮಂದಿರೆಲ್ಲರೂ ವಿದ್ಯಾವಂತರಾಗುವಂತೆ ಮಾಡಿ, ಅವರೆಲ್ಲರಿಗೂ ಮಾರ್ಗದರ್ಶಿಯಾಗುತ್ತಾನೆ.

ಹೀಗೆ ನಮ್ಮ ಕಥಾನಾಯಕ ಮಾರುತಿಯು ಕರ್ಮಯೋಗಿಯಾಗಿ, ದಿವ್ಯ ಜ್ಯೋತಿಯಾಗಿ ಬೆಳಗುತ್ತಾನೆ.


ಈ ಕರ್ಮಯೋಗಿಯ ಕಥೆಯನ್ನು ಓದಿದವರಿಗೂ, ಕೇಳಿದವರಿಗೂ, ಹೇಳಿದವರಿಗೂ ಭಗವಂತನಿಂದ ಒಳ್ಳೆಯದಾಗಲಿ. :)

- ಮನ

Comments: Post a Comment



<< Home
This page is powered by Blogger. Isn't yours?