ಮನದ ಮಾತು

Wednesday, June 21, 2006

 

"ಕರ್ಣನ ನಿಜರೂಪ" ಲೇಖನಕ್ಕೆ ನನ್ನ ಪ್ರತಿಕ್ರಿಯೆ


'ದಟ್ಸ್ ಕನ್ನಡ.ಕಾಂ' - ಕನ್ನಡದ ಜನಪ್ರಿಯ ಅಂತರ್ಜಾಲ ತಾಣಗಳಲ್ಲೊಂದು. ಇದರಲ್ಲಿ ಪರಿಚಿತರೂ, ಆತ್ಮೀಯರೂ ಆದ ಸಂಪಿಗೆ ಶ್ರೀನಿವಾಸ್ ಅವರ "ಕರ್ಣನ ನಿಜರೂಪ ಕಂಡು ಬೆಚ್ಚದಿರಿ" ಲೇಖನ ಇಂದು ಪ್ರಕಟವಾಗಿದೆ. ಆ ಲೇಖನಕ್ಕೆ ನನ್ನ ಪ್ರತಿಕ್ರಿಯೆಯನ್ನು ಈಗಷ್ಟೆ ಸಂಪಿಗೆಯವರಿಗೆ ಒಪ್ಪಿಸಿದೆ. ಅದನ್ನೇ ಇಲ್ಲಿ ದಾಖಲಿಸುತ್ತಿದ್ದೇನೆ.



ಸಂಪಿಗೆಯವರೆ,

ಇಡೀ ಲೇಖನ ಕರ್ಣನ ವೃತ್ತಾಂತದ ಬಗ್ಗೆ ಸುತ್ತಾಡುತ್ತಾ ಕರ್ಣನ ಅವಹೇಳನ ಮಾಡಿದೆ.
ವೇದವ್ಯಾಸರು ಬರೆದ ಮಹಾಭಾರತವನ್ನು ನಾನು ಓದಿದವನಲ್ಲ, ಅಥವಾ ಮಹಾಭಾರತವನ್ನು ಕಣ್ಣಾರೆ ಕಂಡವನಲ್ಲ. ಆದ್ದರಿಂದ ನಾರಾಯಣಾಚಾರ್ಯರು ಬರೆದಿರುವುದರಲ್ಲಿನ ಅಂಶಗಳು ಎಷ್ಟು ಸರಿ, ಎಷ್ಟು ತಪ್ಪು, ಯಾವುದು ಸರಿ, ಯಾವುದು ತಪ್ಪು ಎಂದು ವ್ಯಾಖ್ಯಾನಿಸುವ ಯೋಗ್ಯತೆ ನನಗಿಲ್ಲ.
ಆದರೆ ನಿಮ್ಮ ಲೇಖನವನ್ನು ಓದಿದ ಮೇಲೆ ಹಲವಾರು ಪ್ರಶ್ನೆಗಳು ಕಾಡತೊಡಗಿದವು.

೧. ಕರ್ಣನ ಒಳ್ಳೆಯತನದ ಬಗ್ಗೆ ವೇದವ್ಯಾಸರು ಏನೇನೂ ಬರೆದಿಲ್ಲವೆ? ಅಥವಾ ಕರ್ಣನು ತನ್ನ ಜೀವಿತಾವಧಿಯಲ್ಲಿ "ಒಳ್ಳೆಯದು" ಅನ್ನುವ ಯಾವ ಕೆಲಸವನ್ನು ಮಾಡಿಯೇ ಇಲ್ಲವೆ?

೨. ಗಂಧರ್ವಸೇನೆಯ ವಿರುದ್ಧ ಯುದ್ಧದಲ್ಲಿ ಕರ್ಣ ಸೋಲಲು ಪರಶುರಾಮರು ಕೊಟ್ಟ ಶಾಪ ಕಾರಣವಾಗಿರಬಾರದೇಕೆ?

೩. ಕರ್ಣನನ್ನು ಹೇಡಿ ಎಂದು ಕರೆದಿರುವುದು ಯಾವ ಕಾರಣಕ್ಕೆ? ಯುದ್ಧದಲ್ಲಿ ಸೋಲುಂಡಿದ್ದಕಾಗಿಯೆ? ಅಥವಾ ದ್ರೌಪದಿಯು ಗಂಧರ್ವಸೇನೆಯವರು ಕಟ್ಟಿದ್ದ ಬಂಧನ ಬಿಡಿಸಿದ್ದಕ್ಕಾಗಿಯೇ? ಕರ್ಣನನ್ನು ಹೇಡಿ ಅನ್ನಲು ಇವೆರಡೂ ಸಕಾರಣವಲ್ಲ ಎಂದು ನನ್ನ ಅಭಿಪ್ರಾಯ.

೪. ಇಂದ್ರನಿಂದ ಶಕ್ತ್ಯಾಯುಧ (ಇದು "ಶಕ್ತಾಯುಧ" ಆಗಬೇಕಲ್ಲವೆ?) ಪಡೆಯಬೇಕೆಂದು ಕರ್ಣನಿಗೆ ಅಪ್ಪಣೆಯಿತ್ತದ್ದು ತಂದೆಯಾದ ಸೂರ್ಯದೇವ. ಆ ಆಜ್ಞೆಯಂತೆ, ಕರ್ಣನು ಇಂದ್ರನಿಂದ ಶಕ್ತ್ಯಾಯುಧವನ್ನು ಬೇಡಿ ಪಡೆದಿದ್ದಾನೆ. ಹಾಗೆಯೇ, ಇಂದ್ರನ ಕೋರಿಕೆಯಂತೆ ಕವಚಕುಂಡಲಗಳನ್ನು ದಾನ ಮಾಡಿ ದಾನಶೂರ ಕರ್ಣನೆನೆಸಿದ್ದಾನೆ. ಎರಡು ಪ್ರತ್ಯೇಕ ವಿಷಯಗಳು. ಒಂದು ತಂದೆಯ ಅಪ್ಪಣೆ ಪಾಲಿಕೆ, ಇನ್ನೊಂದು ದಾನ.

ಆದರೆ ಇಲ್ಲಿ ನಾರಾಯಣಾಚಾರ್ಯರ ಪ್ರಶ್ನೆ: "ಒಂದು ವಸ್ತುವನ್ನು ಕೊಟ್ಟು, ಇನ್ನೊಂದನ್ನು ಪಡೆಯುವುದು ದಾನವೇ?".
ಈಗಾಗಲೇ ಹೇಳಿದಂತೆ ಇವೆರಡನ್ನೂ ಒಂದುಗೂಡಿಸುವುದು ವಿರೋಧಾಭಾಸ. ಕವಚಕುಂಡಲವನ್ನು ಕೊಟ್ಟಿದ್ದು ಖಂಡಿತವಾಗಿಯೂ ದಾನ. ಆದ್ದರಿಂದಲೇ ಇಂದಿಗೂ "ದಾನಶೂರ ಕರ್ಣ" ಎಂದು ಜನರು ನೆನಪಿನಲ್ಲಿಟ್ಟುಕೊಂಡಿರುವುದು. ಶಕ್ತಾಯುಧವನ್ನು ಪಡೆದದ್ದು ತಂದೆಯ ಆಜ್ಞೆ ಪಾಲಿಸಲು (ಪಿತೃವಾಕ್ಯ ಪರಿಪಾಲನೆ).

ಒಂದು ವೇಳೆ ಕರ್ಣನು ಶಕ್ತಾಯುಧವನ್ನು ಪಡೆಯದೇ ಕವಚಗಳನ್ನು ಕೊಟ್ಟು "ದಾನಿ" ಎಂದೆನಿಸಿಕೊಂಡಿದ್ದರೆ, "ತಂದೆಯಾದ ಸೂರ್ಯದೇವನ ವಾಕ್ಯವನ್ನು ಧಿಕ್ಕರಿಸಿ ನಡೆದುದು ಕರ್ಣನ ಅಧಿಕಪ್ರಸಂಗತನವಲ್ಲವೇ?" ಎಂದು ನಾರಾಯಣಾಚಾರ್ಯರು ಖಂಡಿತಾ ಪ್ರಶ್ನಿಸದೆ ಬಿಡುತ್ತಿದ್ದರೆ?

೫. ಕೊನೆಯದಾಗಿ: 'ಮಹಾಭಾರತ'ವನ್ನು ತಿಳಿಯದವರೇ ಅಪರೂಪ, ಭಾರತದಲ್ಲಿ. ಪಂಪ, ಕುಮಾರವ್ಯಾಸಾದಿ ಕವಿಗಳ ಅವತರಿಣಿಕೆಗಳಲ್ಲದೆ, ಚಲನಚಿತ್ರಗಳಲ್ಲಿ, ಕಿರುತೆರೆಯಲ್ಲಿ ಬಿ.ಆರ್.ಛೋಪ್ರಾ ಅವರ ಧಾರವಾಹಿಯಲ್ಲಿ, ಪುಸ್ತಕಗಳಲ್ಲಿ, ಅಜ್ಜ ಅಜ್ಜಿ ಹೇಳುವ ಕಥೆಗಳಲ್ಲಿ , ಹೀಗೆ ಎಲ್ಲೆಡೆ ಸರ್ವವ್ಯಾಪಿಯಾದುದು. ಪಂಪ, ಕುಮಾರವ್ಯಾಸರಂತೆ ಇತರೆ ಭಾಷೆಗಳಲ್ಲಿಯೂ ಮಹಾಭಾರತ ರಚನೆಯಾಗಿದೆ. ಇವರೆಲ್ಲರಿಗೂ ತಿಳಿಯದ ಸಂಸ್ಕೃತ ನಾರಾಯಣಾಚಾರ್ಯರಿಗೆ ಮಾತ್ರ ತಿಳಿಯಿತೆ? ಅಥವಾ "ಜನಮರುಳೋ ಜಾತ್ರೆ ಮರುಳೋ" ಎಂಬಂತೆ ಇಷ್ಟು ದಿನ ಎಲ್ಲರೂ ಮಿಥ್ಯವೇ ಸತ್ಯ ಎಂದು ನಂಬಿದ್ದರೆ?

ಭೀಷ್ಮ, ದ್ರೋಣ, ಕೃಷ್ಣ, ಧೃತರಾಷ್ಟ್ರ, ಧರ್ಮರಾಯ, ದ್ರೌಪದಿ, ಭೀಮ ಇವರುಗಳ ಬಗೆಗಿನ ಲೇಖನಗಳ ನಿರೀಕ್ಷೆಯಲ್ಲಿರುವೆ.

ಶುಭವಾಗಲಿ,
ಮನ

ಮುಕ್ತಾಯದ ಮುನ್ನ:

ಶಕ್ತ್ಯಾಯುಧ - ಶಕ್ತಾಯುಧ. ಇವೆರಡರಲ್ಲಿ ಯಾವುದು ಸರಿ?
ಇದರ ವ್ಯುತ್ಪತ್ತಿಯ್ಯು "ಶಕ್ತಿ + ಆಯುಧ" ಎಂದಿದ್ದರೆ, ಅದು ಶಕ್ತಾಯುಧ ಆಗಬೇಕು. ಇ'ಕಾರ ಲೋಪಸಂಧಿಯ ಪ್ರಕಾರ. ಇದರ ಬಗ್ಗೆ ಹೆಚ್ಚು ಬಲ್ಲವರು ದಯವಿಟ್ಟು ತಿಳಿಸಿರಿ. ಧನ್ಯವಾದಗಳು.

Comments:
ಸಂಸ್ಕೃತದಲ್ಲಿ ಲೋಪ ಸಂಧಿ ಇಲ್ಲ - ಅದು ಆಗುವುದು ಕನ್ನಡದಲ್ಲಿ ಮಾತ್ರ. ಶಕ್ತ್ಯಾಯುಧವೇ ಸರಿ.

ವೆಂ.
 
ವೆಂಕಟೇಶ ಮೂರ್ತಿಯವರಿಗೆ ಧನ್ಯವಾದಗಳು.
ಹೌದು, ನೀವು ಹೇಳಿದ್ದು ಸರಿ. ಲೋಪಸಂಧಿಯು ಒಂದು ಕನ್ನಡ ಸಂಧಿ.

ಶಕ್ತಿ + ಆಯುಧ = ಶಕ್ತ್ಯಾಯುಧ
ಇದು ಯಣ್ ಸಂಧಿ (ಸಂಸ್ಕೃತ ಸಂಧಿಗಳಲ್ಲೊಂದು).
ಇದರ ಇತರ ಉದಾಹರಣೆಗಳು:
ಅತಿ + ಉತ್ತಮ = ಅತ್ಯುತ್ತಮ
ಅತಿ + ಅಮೋಘ = ಅತ್ಯಮೋಘ
ಇತಿ + ಆದಿ = ಇತ್ಯಾದಿ
 
ಮನೋಹರರಿಗೆ ವ್ಯಾಕರಣ ಹೇಳಿಕೊಡ್ಬೇಕಾ? ನೀವು ಹೇಳ್ತಿರೋದೇ ಸರಿ. ಸಂಪಿಗೆಯವರ ಉತ್ತರದ ನಿರೀಕ್ಷೆಯಲ್ಲಿ ನಾನೂ ನಿಮ್ಮೊಂದಿಗಿರುವೆ.
 
ನಿನ್ನ ತರ್ಕ ಚೆನ್ನಗಿದೆ. ನನಗೆ ಈ ಪ್ರಶ್ನೆಗಳು ಹೊಳೆಯುತ್ತಿತ್ತೊ ಏನೊ?

ನೋಡುವ ಸಂಪಿಘೆ ಯವರು ಏನು ಹೇಳುತ್ತಾರೆ ಎಂದು.

ಭೂತ
 
Post a Comment



<< Home
This page is powered by Blogger. Isn't yours?