ಮನದ ಮಾತು

Saturday, August 19, 2006

 

ವಿನಾಯಕ ಜೋಶಿ - ಕನ್ನಡ ಚಿತ್ರರಂಗದ ನವನಾಯಕ ನಟ

ಮುನ್ನುಡಿ:
ಕನ್ನಡ ಚಿತ್ರರಂಗದಲ್ಲಿ, ಬಾಲನಟನಾಗಿ ತಮ್ಮದೇ ಆದ ಛಾಪು ಮೂಡಿಸಿ ನಂತರ ನಾಯಕರಾದವರ ಪಟ್ಟಿ ದೊಡ್ಡದಾಗಿಯೇ ಇದೆ. ಪುನೀತ್, ವಿಜಯ ರಾಘವೇಂದ್ರ, ಸುನಿಲ್ ಮೊದಲಾದವರಿರುವ ಈ ಪಟ್ಟಿಯಲ್ಲಿ ಇದೀಗ ಸ್ಥಾನಪಡೆಯಲು ಸಜ್ಜಾಗಿದ್ದಾರೆ, ವಿನಾಯಕ ಜೋಶಿ


ಬೆಂಗಳೂರಿನ ಶ್ರೀ ವಾಸುದೇವ ಜೋಶಿ ಮತ್ತು ಶ್ರೀಮತಿ ಶಾಲಿನಿ ಜೋಶಿ ದಂಪತಿಗಳಿಗೆ ೧೯೮೭ ಆಗಸ್ಟ್ ೨೫ರಂದು ಜನಿಸಿದ ವಿನಾಯಕ ಜೋಶಿ ಚಿಕ್ಕ ಬಾಲಕನಾಗಿದ್ದಾಗಲೇ ಅಗಾಧ ಪ್ರತಿಭೆಯ ಕುರುಹು ತೋರಿದರು.
೧೯೯೫ರಲ್ಲಿ - ಅಂದರೆ ೮ ವರ್ಷದ ಬಾಲಕನಾಗಿದ್ದಾಗಲೇ ಬೆಳ್ಳಿಪರದೆಗೆ ಕಾಲಿಟ್ಟ ಇವರು, ಒಂದಾದ ಮೇಲೊಂದು ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದೀಗ ಅವರ ನಾಯಕತ್ವದಲ್ಲಿನ ಮೊದಲ ಚಿತ್ರ, ನನ್ನ ಕನಸಿನ ಹೂವೆ ಬಿಡುಗಡೆಯಾಗುತ್ತಲಿದೆ.
ವಿನಾಯಕ ಜೋಶಿ ಅಭಿನಯದ ಚಿತ್ರಗಳು

೧ ಪುಟ್ಮಲ್ಲಿ
೨ ನಾವಿದ್ದೀವಿ ಎಚ್ಚರಿಕೆ (ಮಕ್ಕಳ ಚಲನಚಿತ್ರೋತ್ಸವಕ್ಕಾಗಿ ನಾಗಭರಣ ನಿರ್ದೇಶನದಲ್ಲಿ ತಯಾರಿಸಿದ ಚಿತ್ರ)
೩ ನಮ್ಮೂರ ಮಂದಾರ ಹೂವೆ
೪ ಸೂತ್ರಧಾರ
೫ ಅಮೃತ ವರ್ಷಿಣಿ
೬ ಸಿಂಹದಮರಿ
೭ ಎಲ್ಲರಂತಲ್ಲ ನನ್ನ ಗಂಡ
೮ ಲಾಲಿ
೯ ವಿಮೋಚನೆ
೧೦ ಮೈ ಡಿಯರ್ ಟೈಗರ್
೧೧ ಆರ್ಯಭಟ
೧೨ ಕುರಿಗಳು ಸಾರ್ ಕುರಿಗಳು (ಬಾಲನಟನಾಗಿ ಕೊನೆಯ ಚಿತ್ರ)
೧೩ ಚಿಟ್ಟೆ
೧೪ ಪಾಂಚಾಲಿ
೧೫ ಕಿಚ್ಚ
೧೬ ಚಿತ್ರ
೧೭ ಅಪ್ಪು
೧೮ ಓಕೆ ಸಾರ್ ಓಕೆ
೧೯ ಕಂಠಿ
೨೦ ಬಾ ಬಾರೋ ರಸಿಕ
೨೧ ಯಶವಂತ್
೨೨ ಆಟೋಗ್ರಾಫ್ ಪ್ಲೀಸ್
೨೩ ಸಖಸಖಿ
೨೪ ೬ ಟೀನ್ಸ್ ಎಂಬ ತಮಿಳು ಚಿತ್ರ
೨೫ ನನ್ನ ಕನಸಿನ ಹೂವೆ

ಇವಗಳಲ್ಲದೇ, ಬಿಡುಗಡೆಯಾಗಬೇಕಿರುವ ಚಿತ್ರಗಳು ಸುಮಾರು ಏಳೆಂಟು.

ವಿನಾಯಕ ಜೋಶಿಯವರು ಪಡೆದ ಪ್ರಶಸ್ತಿ ಪುರಸ್ಕಾರಗಳು ಬಹಳಷ್ಟು.

೧೯೯೬-೯೭ "ಅತ್ಯುತ್ತಮ ಬಾಲನಟ" ರಾಜ್ಯ ಪ್ರಶಸ್ತಿ.

೧೯೯೭-೯೮ ಅಮೃತವರ್ಷಿಣಿ ಚಿತ್ರದಲ್ಲಿನ ನಟನೆಗಾಗಿ, ೧೯೯೭-೯೮ನೇ ಸಾಲಿನ "ಅತ್ಯುತ್ತಮ ಬಾಲನಟ" ಎಂದು ಆರ್ಯಭಟ ಪ್ರಶಸ್ತಿ .
೧೯೯೮-೯೯ ಕಲ್ಯಾಣಮ್ಮ ಮಕ್ಕಳ ಕೂಟ ಪ್ರಶಸ್ತಿ .

ಡ್ರೀಮ್ಸ್ ಇನ್ ಡ್ರೀಮ್ಸ್ ಯುವಕ ಸಂಘ (Dreams in dreams youth association) ನೀಡಿರುವ "ಚಾರ್ಮಿಂಗ್ ಸ್ಟಾರ್" ಎಂಬ ಬಿರುದು ,
ನಾಡಿನಾದ್ಯಂತ ನಡೆದ ವಿವಿಧ ಸಭೆ ಸಮಾರಂಭಗಳಲ್ಲಿ, ಸುಮಾರು ೩೦೦ಕ್ಕೂ ಹೆಚ್ಚಿನ ಸನ್ಮಾನಗಳು, ಇವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ.

ಸುಮಾರು ೩೩೦ ಕಲಾವಿದರು ಭಾಗವಹಿಸಿದ್ದ, ಕಳೆದ ವರ್ಷದ(೨೦೦೫) 'ಹೆಚ್.ನರಸಿಂಹಯ್ಯ ನಾಟಕೋತ್ಸವ'ದಲ್ಲಿನ ನಟನೆಗೆ 'ಅತ್ಯುತ್ತಮ ನಟ' ಬಹುಮಾನ ಪಡೆದರು.

ಇವರದೇ ಆದ ಒಂದು ನಾಟಕ ತಂಡವಿದೆ, ಹೆಸರು ದ್ಯುತಿ
೧೯೯೫ರಲ್ಲಿ ಅತ್ಯುತ್ತಮ ನೃತ್ಯಪಟು ಎಂಬ ರಾಜ್ಯಮಟ್ಟದ ಪ್ರಶಸ್ತಿಯು ಪಡೆದಿದ್ದರು.


ಬಾಲನಟನಾಗಿ(ವಿಶೇಷವಾಗಿ ನಮ್ಮೂರ ಮಂದಾರ ಹೂವೆ ಮತ್ತು ಅಮೃತವರ್ಷಿಣಿ ಚಿತ್ರಗಳಲ್ಲಿ) ಜನಮೆಚ್ಚುಗೆ ಗಳಿಸಿದ್ದ ವಿನಾಯಕ ಜೋಶಿ, ಈಗ ತಮ್ಮ ವಿನೂತನ ವರಸೆಯನ್ನು ಪ್ರೇಕ್ಷಕರ ಮುಂದಿಡುತ್ತಿದ್ದಾರೆ.
ತಂದೆ ವಾಸುದೇವ ಜೋಶಿಯವರೇ ನಿರ್ಮಿಸಿರುವ ಈ ಚಿತ್ರವು ಎಲ್ಲ ರೀತಿಯಿಂದಲೂ ಅವರೆಲ್ಲರ ಕನಸಿನ ಹೂವಾಗಿದೆ. ಈ ಹೂವು ಕನಸಿನಲ್ಲದೇ, ನನಸಿನಲ್ಲಿಯೂ ಹೂವಾಗಿ, ಅದರ ಪರಿಮಳವನ್ನು ಪಸರಿಸಲಿ ಎಂದು ಹಾರೈಸೋಣವೇ?
ಸ್ವಾರಸ್ಯ:
ಇಪ್ಪತ್ತೈದಕ್ಕೂ (೨೫) ವಿನಾಯಕ ಜೋಶಿಯವರಿಗೂ ವಿಶೇಷವಾದ ನಂಟು ಇದೆಯೇ? ಗಮನಿಸಿ ನೋಡಿ. ಇವರ ಜನ್ಮ ದಿನಾಂಕ ಆಗಸ್ಟ್ ೨೫, ಇವರ ಚಿತ್ರ ಬಿಡುಗಡೆಯಾಗುತ್ತಿರುವುದೂ ಆಗಸ್ಟ್ ೨೫ ಮತ್ತು ಬಿಡುಗಡೆಯಾಗಿರುವ ಚಿತ್ರಗಳ ಲೆಕ್ಕದಲ್ಲಿ ನನ್ನ ಕನಸಿನ ಹೂವೆ, ಇವರ ಇಪ್ಪತ್ತೈದನೇ ಚಿತ್ರ.

ಚಿತ್ರವು ಯಶಸ್ವಿಯಾಗಲಿ ಎಂದು ಹೃತ್ಪೂರ್ವಕವಾಗಿ ಶುಭಹಾರೈಸುತ್ತೇನೆ!
~ ಮನ
Link

Friday, August 11, 2006

 

ವರಮಹಾಲಕ್ಷ್ಮಿ ಹಬ್ಬದ ಕನ್ನಡ ಚಿತ್ರರಂಗ

ಮುನ್ನುಡಿ:
ಸಾಮಾನ್ಯವಾಗಿ, ಯಾವುದೇ ಮಹತ್ತರವಾದ ಕೆಲಸವನ್ನು ಪ್ರಾರಂಭಿಸುವುದು, ಹೊಸ ಹೆಜ್ಜೆಗಳನ್ನಿಡುವುದು ಸುಸಂದರ್ಭಗಳಲ್ಲಿಯೇ. ಹಬ್ಬಗಳು ನಮ್ಮ ಧರ್ಮಗಳಲ್ಲಿ ಅವುಗಳದೇ ಆದ ಅಚ್ಚೊತ್ತಿಬಿಟ್ಟಿವೆ.
ಕೆಲವರಿಗೆ ಸಂಕ್ರಾಂತಿಯು ಅದೃಷ್ಟದಾಯಕ ಹಬ್ಬವಾದರೇ, ಇನ್ನು ಕೆಲವರಿಗೆ ವಿಘ್ನನಿವಾರಕ ವಿನಾಯಕ ಚತುರ್ಥಿ ಎಂದರೆ ಎಂತಹ ಕೆಲಸವಾದರೂ ಜಯಿಸಬಲ್ಲೆನೆಂಬ ವಿಶ್ವಾಸ. ನನ್ನ ಮಟ್ಟಿಗೆ ವಿಜಯದಶಮಿ ಎಂದರೆ, ಅದೇನೋ ವಿಶೇಷ ಗೌರವ, ಭಯ, ಭಕ್ತಿ, ಆಕರ್ಷಣೆ, ಉತ್ಸಾಹ.
ಕನ್ನಡ ಚಿತ್ರರಂಗದ ಪಾಲಿಗೆ ಇತ್ತೀಚಿನ ವರ್ಷಗಳಲ್ಲಿ ಒಂದು ಹಬ್ಬವು ಅತ್ಯಂತ ವಿಶೇಷವಾಗಿಬಿಟ್ಟಿದೆ. ನೋಡೋಣ ಬನ್ನಿ.

೨೦೦೪ - ವರಮಹಾಲಕ್ಷ್ಮಿ ಹಬ್ಬ - ಬಿಡುಗಡೆಯಾದ ಚಿತ್ರ ಆಪ್ತಮಿತ್ರ.
ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ಚಿತ್ರಗಳಲ್ಲಿ ಒಂದು. ಪ್ರೇಕ್ಷಕನ ನಾಡಿಮಿಡಿತಕ್ಕೆ ಸ್ಪಂದಿಸಿದ ಚಿತ್ರ. ಒಂದು ಸಂಪೂರ್ಣ ವರ್ಷ ಸತತ ಪ್ರದರ್ಶನ ಕಂಡ ದಾಖಲೆಯ ಹೆಗ್ಗಳಿಕೆ ಈ ಚಿತ್ರದ್ದು.
ತನ್ನ ಅದ್ಭುತ ಅಭಿನಯಕ್ಕೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂದೂ ಕಾಯದೆ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದು ಮಾತ್ರ ಸೌಂದರ್ಯ ಮಾಡಿದ ಅನ್ಯಾಯ :(
ರಾರಾ.....ಮತ್ತೊಮ್ಮೆ ಹುಟ್ಟಿ ರಾರಾ! ದುರ್ಗಾಷ್ಟಮಿಯಂದೇ ರಾರಾ, ಪರ್ವಾಲೇದು.

೨೦೦೫ - ವರಮಹಾಲಕ್ಷ್ಮಿ ಹಬ್ಬ - ಜೋಗಿ
ಅರೇ ಜೋಗಿ.....!!
ಜೋಗಿಯ ಜ್ವರಕೆ ಸಿಲುಕದವರಾರು?
ಜೋಗಿಯ ಜಪ ಮಾಡದವರಾರು?
ಹೊಡಿಮಗ ಹೊಡಿಮಗ ಎಂದು ಗುನುಗದವಾರಾರು?

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಎಂದೂ ಕಂಡು ಕೇಳರಿಯದಷ್ಟು ಕುತೂಹಲ, ಆಸಕ್ತಿ, ನಿರೀಕ್ಷೆ ಮೂಡಿಸಿದ ಚಿತ್ರ ಯಾವುದು ಎಂದರೆ, ಸುಲಭವಾದ ಉತ್ತರ: ಜೋಗಿ

ರೌಡಿಸಂ ಮತ್ತು ತಾಯಿಯ ಸೆಂಟಿಮೆಂಟ್ ಎರಡನ್ನೂ ನಾಜೂಕಾಗಿ ಬ್ಲೆಂಡ್ ಮಾಡಿರುವ ಪ್ರೇಂ ನೈಪುಣ್ಯಕ್ಕೆ, ಬೆನ್ನೆಲುಬಾಗಿದ್ದು ಅರುಂಧತಿನಾಗ್ ಮತ್ತು ಶಿವರಾಜಕುಮಾರ್ ಅಮೋಘ ನಟನೆ.


೨೦೦೬- ವರಮಹಾಲಕ್ಷ್ಮಿ ಹಬ್ಬ - ಗಂಡುಗಲಿ ಕುಮಾರರಾಮ
ಒಂದು ವಾರವಾಗಿದೆಯಷ್ಟೆ! ಆದರೆ ಅತ್ಯುತ್ತಮ ಓಪನಿಂಗ್ ದೊರಕಿದೆ. ಬಹಳ ದಿನಗಳಿಂದ ಐತಿಹಾಸಿಕ ಚಿತ್ರಗಳ ಹಸಿವಿನಿಂದ ಬಳಲುತ್ತಿದ್ದ ಪ್ರೇಕ್ಷಕ ಮಹಾಶಯನಿಗೆ ಈ ಚಿತ್ರದ ಮೂಲಕ ರಸದೌತಣ ಉಣಬಡಿಸಿದ್ದಾರೆ ನಿರ್ದೇಶಕ ಭಾರ್ಗವ ಮತ್ತು ತಂಡ. ಚಿತ್ರ ನೋಡಿದ ಪ್ರತಿಯೊಬ್ಬರೂ, ಪತ್ರಿಕೆಗಳು, ಕಿರುತೆರೆ ವಾಹಿನಿಗಳು ಈ ಚಿತ್ರದ ಬಗ್ಗೆ ಪ್ರಮುಖವಾಗಿ ವಿಶ್ಲೇಷಿಸುತ್ತಿರುವುದು ಶಿವರಾಜಕುಮಾರ್ ನಟನೆಯ ಬಗ್ಗೆ. "First day first show" ಜೀ-ಕನ್ನಡ ಕಾರ್ಯಕ್ರಮದಲ್ಲಿ ಸ್ವತಃ ಶಿವರಾಜಕುಮಾರ್ ಅವರೇ ಹೇಳಿದಂತೆ, ಮಗನು ಅಪ್ಪನಂತೆ ಐತಿಹಾಸಿಕ ಪಾತ್ರಕ್ಕೆ ಜೀವತುಂಬಬಲ್ಲನೇ ಎಂಬ ಕುತೂಹಲದಿಂದ ಚಿತ್ರ ನೋಡಲು ಬರುವರೇ ಬಹಳಷ್ಟು ಮಂದಿ. ನಿಜ, ಐತಿಹಾಸಿಕ ಪಾತ್ರಗಳಿಗೆ ಭಾರತದಲ್ಲೇ ಅದ್ವಿತೀಯರೆಂದೆನಿಸಿಕೊಂಡಿರುವ ನಟಸಾರ್ವಭೌಮ ಡಾ.ರಾಜ್‍ಕುಮಾರ್ ಅಭಿನಯಿಸಬೇಕಿದ್ದ ಪಾತ್ರವೊಂದು ಅವರ ಮಗನ ಅಭಿನಯದಲ್ಲಿ ಸಾಕಾರಗೊಂಡಿದೆ ಎಂದರೆ, ಪ್ರೇಕ್ಷಕರು ಖಂಡಿತಾ ಅವರ ಮೆಚ್ಚಿನ "ಅಣ್ಣಾವ್ರನ್ನು" ಚಿತ್ರದಲ್ಲಿ ಹುಡುಕಲು ಪ್ರಯತ್ನಿಸುವುದು ಸಹಜ.
ಮೊದಲ ವಾರದ ಮಟ್ಟಿಗೆ ಪ್ರೇಕ್ಷಕರಿಂದ, ಮಾಧ್ಯಮಗಳಿಂದ, ಚಿತ್ರರಂಗದ ಪ್ರಮುಖರಿಂದ ಅಪಾರ ಮೆಚ್ಚುಗೆ ಗಳಿಸಿರುವ ಈ ಚಿತ್ರವು ಯಶಸ್ಸಿನ ಉತ್ತುಂಗವನ್ನೇರಿ, ವರಮಹಾಲಕ್ಷ್ಮಿ ಹಬ್ಬದ ಚಿತ್ರ ಸರಣಿಯ ದಾಖಲೆಯನ್ನು ಮತ್ತಷ್ಟು ಬಲಪಡಿಸಲಿ.

ಸ್ವಾರಸ್ಯ:
ಈ ಮೂರೂ ಮಹತ್ತರ, "ವರಮಹಾಲಕ್ಷ್ಮಿ" ಕೃಪಾಕಟಾಕ್ಷದ ಚಿತ್ರಗಳಿಗೆ ಸಂಗೀತ ನೀಡಿರುವವರು ಗುರುಕಿರಣ್.
ಮೊದಲೆರಡೂ ಚಿತ್ರಗಳ ಸಂಗೀತ ಮತ್ತು ಹಾಡುಗಳು ಅಪಾರವಾದ ಜನಮೆಚ್ಚುಗೆಗೆ ಪಾತ್ರವಾಗಿದ್ದು, ಕುಮಾರರಾಮನೂ ಅದೇ ಹಾದಿಯತ್ತ ಸಾಗುತ್ತಿರುವ ಕುರುಹು ತೋರಿದ್ದಾನೆ. ಈ ಚಿತ್ರಗಳ ಯಶಸ್ಸಿಗೆ ಗುರುಕಿರಣ್ ಅವರ ಸಂಗೀತದ ಕೊಡುಗೆಯು ಅಪಾರವಾದದ್ದು. ಮುಂದಿನ ವರ್ಷದ ಬ್ಲಾಕ್‍ಬಸ್ಟರ್ ವರಮಹಾಲಕ್ಷ್ಮಿ ಹಬ್ಬದ ಚಿತ್ರಕ್ಕೂ ಗುರುಕಿರಣ್ ಸಂಗೀತವೇ? ಕಾದು ನೋಡಿ :)

ನಿಮಗೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ, ಹಾರ್ದಿಕ ಶುಭಾಶಯಗಳು.
Link

Thursday, August 03, 2006

 

ಇಂಚರ - ಕನ್ನಡ ಅಂತರ್ಜಾಲ ರೇಡಿಯೊ

ಮುನ್ನುಡಿ:
ಉದಯ ಟಿವಿ ನೋಡುವಾಗ ಬೇಜಾರಾದಾಗ, ಈಟೀವಿ ಕನ್ನಡ; ಈಟಿವಿ ಕನ್ನಡ ಬೇಜಾರಾದಾಗ ಉದಯ ಟಿವಿ.
ಹೀಗೆ ಚಾನೆಲ್ ಬದಲಾಯಿಸುವುದು ನಮಗೆಲ್ಲರಿಗೂ ತಿಳಿದೇ ಇದೆ. ಇದೇ ಕಾರಣಕ್ಕೆ, ಟಿವಿ ನೋಡೋದಕ್ಕೆ ಕುಳಿತುಕೊಳ್ಳುವಾಗಲೇ ರಿಮೋಟ್ ಕಂಟ್ರೋಲ್ ಹಿಡಿದು ನಂತರ ಜಾಗ ಹಿಡಿಯುತ್ತೇವೆ. :)
ಇದು ದೂರದರ್ಶನದ ಮಾತಾಯಿತು. ಅಂತರ್ಜಾಲ ನಿವಾಸಿಗಳಿಗೆ?
'ಕನ್ನಡ ಕಸ್ತೂರಿ' ನಾವು ನೀವೆಲ್ಲರೂ ಕೇಳಿ, ಮೆಚ್ಚಿಕೊಂಡಿರುವ ಅಂತರ್ಜಾಲ ಕನ್ನಡ ರೇಡಿಯೊ. ಕನ್ನಡಆಡಿಯೋ.ಕಾಂ ಕೊಡುಗೆಯಾಗಿರುವ ಈ ವಾಹಿನಿಯು, ಅಂತರ್ಜಾಲದಲ್ಲಿನ ಪ್ರಪ್ರಥಮ ಕನ್ನಡ ರೇಡಿಯೊ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

http://www.kannadaaudio.net ಈ ಅಂತರ್ಜಾಲ ಕನ್ನಡವಾಹಿನಿಯ ಅಧಿಕೃತ ತಾಣ.

ಇಂದು ನನ್ನ ಕಿವಿಮುಟ್ಟಿದ ಹೊಸ ವಾಹಿನಿಯೆಂದರೆ, ಇಂಚರ!
ಹೆಸರೇ ಇಷ್ಟು ಇಂಪಾಗಿದೆ, ಇನ್ನು ಹಾಡುಗಳು ಹೇಗಿರಬಹುದೆಂದು ಕಾತುರದಿಂದ ಕೇಳಿದ ನನಗೆ, ಆಶಾಭಂಗವಾಗಲಿಲ್ಲ.
ಹಳೆಯ ಸುಮಧುರ ಗೀತೆಗಳು, ಇತ್ತೀಚಿನ ಗೀತೆಗಳು, ಎಲ್ಲವನ್ನೂ ಹದವಾಗಿ ಮಿಶ್ರಣ ಮಾಡಿದ ಹೆಸರಿಗೆ ತಕ್ಕಂತಹ ಪ್ಲೇಲಿಸ್ಟ್ ಇತ್ತು.
ಈ ರೇಡಿಯೋವನ್ನು ಅಂತರ್ಜಾಲದಲ್ಲಿನ ಕೇಳುಗರಿಗೆ ಕಾಣಿಕೆಯಿತ್ತಿರುವರು ಕನ್ನಡಟೊರೆಂಟ್ಸ್ ಸಮುದಾಯ.

ಕಿವಿಗಿಂಪಾದ ಇಂಚರವನ್ನು ಆಲಿಸಬಹುದಾದ ಲಿಂಕ್:
http://www.kannadatorrents.com:8000/listen.pls


ಇಂಚರವನ್ನು ನಮ್ಮೆಲ್ಲರಿಗರ್ಪಿಸಿರುವ ಕನ್ನಡಟೊರೆಂಟ್ಸ್ ನಿರ್ವಾಹಕ ಮಂಡಳಿಗೆ ಧನ್ಯವಾದಗಳು, ಹಾಗೂ ಈ ವಾಹಿನಿಯನ್ನು ಯಶಸ್ವಿಯಾಗಿ ಪ್ರಾರಂಭಿಸಿದಕ್ಕೆ ಹಾರ್ದಿಕ ಅಭಿನಂದನೆಗಳು.

ಅದೂ ೨೪/೭ ಮತ್ತಿದೂ ೨೪/೭. ಆದರೆ ಎರಡೂ ಸೇರಿ, ೪೮/೭ ಮಾಡಲು ಸಾಧ್ಯವಿಲ್ಲ. ದಿನಕ್ಕೆ ೨೪ ಗಂಟೆಗಳು ಮಾತ್ರ. :)

ಕಿವಿಗಳೆರಡಿದ್ದರೂ ಸಂಗೀತವನ್ನಾಸ್ವಾಧಿಸಬಹುದಾದ ಮನಸ್ಸು (ಮನ!?) ಒಂದೇ!


ಮುಗಿಸುವ ಮುನ್ನ:

ಕನ್ನಡ ಕಸ್ತೂರಿಯ ಕಂಪು
ಇಂಚರದ ಇಂಪು
ಕನ್ನಡಿಗರ ಹೃದಯಕೆರೆಯಲಿ ತಂಪು!~ ಮನ
Link
This page is powered by Blogger. Isn't yours?