ಮನದ ಮಾತು

Tuesday, June 20, 2006

 

ಕರ್ಮಯೋಗಿ (ಕಥೆಯ ಭಾಗ ೨ - ಮನ)


'ಕರ್ಮಯೋಗಿ' ಕಥೆಯ ಪೂರ್ವಾರ್ಧ ಓದಿದಿರಲ್ಲವೇ? ಇಲ್ಲವಾದಲ್ಲಿ ಮೊದಲ ಭಾಗ ಓದಿ ನಂತರ ಇಲ್ಲಿಗೆ ಬನ್ನಿ :)
ಮೊದಲ ಭಾಗದಲ್ಲಿ ತಿಳಿಸಿದಂತೆ, ಅದನ್ನು ಬರೆದು ಮುಂದಿನ ಭಾಗವನ್ನು ಓದುಗರಿಗೆ ಬರೆಯಲು ಬಿಟ್ಟರು ತವಿಶ್ರೀಯವರು.
ಅಂದು ಆಗಸ್ಟ್ ೬, ೨೦೦೫. ಆಗಷ್ಟೆ ಕಥೆಯ ಅರ್ಧಭಾಗ ಓದಿ ಮುಗಿಸಿದ್ದೆ. ಏಕೋ, ಏನೋ, ಎಲ್ಲಿಂದಲೋ ಬಂದ ಉತ್ಸಾಹ ಮುಂದಿನ ಭಾಗವನ್ನು ಬರೆಯಲು ಪ್ರೇರೇಪಿಸಿತು.
ಶನಿವಾರ ರಾತ್ರಿ ೮ ಗಂಟೆಗೆ ಬರೆಯಲು ಪ್ರಾರಂಭಿಸಿಯೇ ಬಿಟ್ಟೆ. ಮನಸ್ಸಿಗೆ ಹೊಳೆದದ್ದನ್ನು ಹಾಗೆ ಹಾಗೆಯೇ ಬರೆಯಲು ಸಾಧ್ಯವಾದಷ್ಟೂ ಪ್ರಯತ್ನಿಸಿದೆ.ಮುಗಿಸಿದಾಗ ಭಾನುವಾರ ಬೆಳಗಿನ ಜಾವ ೨ ಆಗಿತ್ತು. ಅಷ್ಟು ಸುದೀರ್ಘವಾದ ಬರವಣಿಗೆ ನನ್ನಿಂದ ಹೊರಬಂದದ್ದು ಅದೇ ಮೊದಲು. ಇದಿಷ್ಟು ಪೀಠಿಕೆ.
ಮುಂದೆ ಓದಿ...ಕರ್ಮಯೋಗಿ ಭಾಗ ೨.


ಕರ್ಮಯೋಗಿ ಭಾಗ ೨
ಯಾರೆಷ್ಟೇ ಹೇಳಿದರೂ ಮಾರುತಿ ತನ್ನ ಪಟ್ಟು ಬಿಡಲಿಲ್ಲ. ತಾನು ಇಷ್ಟು ಓದಿದ್ದೇ ಸಾಕು...ತನ್ನ ಮೇಲೆ ಈಗ ಸಾಕಷ್ಟು ಜವಾಬ್ದಾರಿಗಳಿವೆ. ಅವುಗಳನ್ನು ನಿಭಾಯಿಸುವ ಕಡೆ ಗಮನಿಸಬೇಕು. ತಂದೆ ಸಂಪೂರ್ಣವಾಗಿ ಚೇತರಿಸಿಕೊಳ್ಳಬೇಕು. ತಮ್ಮಂದಿರ ಖಾಯಿಲೆಗಳೆಲ್ಲವೂ ವಾಸಿಯಾಗಬೇಕು, ಬಹು ತ್ರಾಸದಿಂದ ಸಂಸಾರದ ರಥವನೆಳೆದೂ ಎಳೆದೂ ಬಳಲಿ ಬೆಂಡಾಗಿರುವ ಮಮತೆಯ ಮೂರ್ತಿಯಾದ ತಾಯಿಯು ಇನ್ನು ಮುಂದೆಯಾದರೂ ನೆಮ್ಮದಿಯ ಬಾಳು ಬಾಳಬೇಕು, ತಮ್ಮಂದಿರು ಯಾವುದೇ ಚಿಂತೆಯಿಲ್ಲದೇ ಓದಿನ ಕಡೆ ಗಮನ ಹರಿಸುವಂತಾಗಬೇಕು...ಇನ್ನೂ ಎಷ್ಟೆಷ್ಟೊ ಕನಸುಗಳು ಬಂದುಹೊಗಹತ್ತಿದವು...ಮಾರುತಿಯ ನಿರ್ಮಲ ಮನದೊಳಗೆ. ಸರ್ಕಾರವೇನೋ ನನ್ನ ಮುಂದಿನ ಓದಿನ ಸಂಪೂರ್ಣ ವೆಚ್ಚ ಭರಿಸುತ್ತದೆ..ಸರಿ..ಸಂತೋಷ..ಆದರೆ ಮನೆಮಂದಿಯನ್ನೆಲ್ಲಾ ನೋಡಿಕೊಳ್ಳುತ್ತದೆಯೆ? ನಮ್ಮ ಸಂಸಾರದ ಕಷ್ಟಗಳನ್ನೆಲ್ಲಾ ಸರ್ಕಾರದ ಬಳಿ ತೋಡಿಕೊಳ್ಳಾಲಾಗುತ್ತದೆಯೇ? ಖಂಡಿತಾ ಇಲ್ಲಾ. ದುಡಿಯಬೇಕು...ಸಂಸಾರವನ್ನು ಸಾಕಿ ಸಲಹಬೇಕು...ಇದೊಂದೇ ಮಾರುತಿಯ ಮನದಲ್ಲಿ ಇದ್ದ ಆಕಾಂಕ್ಷೆ.

ಮನೆಯವರೆಲ್ಲರಿಗೂ ಇದನ್ನು ಸರಿಯಾಗಿಯೇ ವಿವರಿಸಿದ...ಆದರೆ ಇವನ ಮಾತು ಕೇಳುವವರಾರು? ಇವನಷ್ಟೇ ಪ್ರೀತಿ ಅವರೆಲ್ಲರಿಗೂ ಇವನ ಮೇಲಿದೆ. "ನಮ್ಮ ಕಷ್ಟಗಳು ಇದ್ದದ್ದೇ. ಇವುಗಳು ನಿನ್ನ ಓದಿಗೆ ಮುಳ್ಳಾಗಬಾರದು. ಭಕ್ತ ಕುಂಬಾರನ ಬಳಿಗೆ ಸಾಕ್ಷಾತ್ ವಿಠಲನೇ ಬಂದು ಉಪಚರಿಸಿದ ಹಾಗೆ ನಮ್ಮ ಭಟರು ಉಪಚರಿಸುತ್ತಿದ್ದಾರೆ. ಶ್ರೀನಾಥ ಸಂಸಾರದ ಭಾರವನ್ನು ಹೊರಲು ಸಿದ್ಧನಿದ್ದಾನೆ...ನೀನು ಸಂಸಾರದ ಬಗ್ಗೆ, ತಂದೆಯ ಆರೋಗ್ಯದ ಬಗ್ಗೆ, ತಮ್ಮಂದಿರ ಓದಿನ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ವಿದ್ಯೆ ಎಂಬುದು ಎಲ್ಲರಿಗೂ ಒಲಿದು ಬರುವುದಿಲ್ಲ. ಸರಸ್ವತಿ ತಾಯಿಯು ನಿನಗೆ ಒಲಿದಿದ್ದಾಳೆ, ಆ ಮಹಾತಾಯಿಯನ್ನು ದೂರ ತಳ್ಳಬೇಡ. ಕಷ್ಟ ಪಟ್ಟು ಓದಿ ಮೊದಲನೇ ರ್‍ಯಾಂಕ್ ಬಂದಿದ್ದೀಯ. ನಿನ್ನ ಜ್ಞಾನಾರ್ಜನೆ ಇಲ್ಲಿಗೆ ನಿಲ್ಲುವುದು ಬೇಡ. ನೀನು ಜ್ಞಾನದ ಹಸಿವಿನಲ್ಲಿ, ಎಷ್ಟೋ ಸಲ ಹೊಟ್ಟೆಯ ಹಸಿವನ್ನು ಮರೆತಿದ್ದೀಯೆ ಎಂಬುದನ್ನ ನಿನ್ನ ತಾಯಿಯಾಗಿ ನಾನು ತುಂಬಾ ಚೆನ್ನಾಗಿ ಅರಿತಿದ್ದೇನೆ. ನೀನು ಓದನ್ನು ಮುಂದುವರೆಸಲೇ ಬೇಕು. ಇದು ನಿನ್ನ ತಾಯಿಯ ಆಶೀರ್ವಾದ ಮಾತ್ರವಲ್ಲ, ಅಜ್ಞೆಯೆಂದು ತಿಳಿ" ಎಂದು ಭಾಗಿರಥಮ್ಮ ತನ್ನ ಮನದಿಂಗಿತವನ್ನ ಮಾರುತಿ ಬಳಿ ಅಂಗಲಾಚಿಕೊಂಡಳು.

ನಮ್ಮ ಮಾರುತಿ ಅಡ್ಡಕತ್ತರಿಯಲ್ಲಿ ಸಿಕ್ಕ ಅಡಕೆಯಂತಾದ. "ಅಯ್ಯೋ ವಿಧಿಯೇ ಇದೆಂಥ ಧರ್ಮಸಂಕಟ? ನಾನೀಗ ದುಡಿಯಬೇಕೆ? ಅಥವಾ ಓದು ಮುಂದುವರೆಸಬೇಕೆ? ನಾನ್ಯಾಕಾದರೂ ರ್‍ಯಾಂಕ್ ಬಂದೆನೋ?" ಎಂದು ಅವನ ಮನಸ್ಸಿನಲ್ಲಿ ತುಮುಲ ತಳಮಳಗಳು ಸಾಗರದಲೆಗಳಂತೆ ಒಂದಾದ ಮೇಲೊಂದರಂತೆ ಉಕ್ಕತೊಡಗಿದವು. ದಿಕ್ಕೇತೋಚದವನಾಗಿ ಸೂರನ್ನು ದಿಟ್ಟಿಸತೊಡಗಿದ್ದಾಗ ಯಾರೋ ತನ್ನ ಕೈ ಬೆರಳನ್ನೆಳದಂತಾಯ್ತು. ಎಳೆದದ್ದು ಎಲ್ಲರಿಗಿಂತ ಚಿಕ್ಕ ತಮ್ಮನಾದ ಕಿಶೋರನು. ಆತ್ಮೀಯತೆಯಿಂದ ಅವನ ತಲೆ ನೇವರಿಸಿದ ಮಾರುತಿ. ಕಿಶೋರ ತನ್ನ ಪುಟ್ಟ ದನಿಯಲ್ಲಿ ಅಣ್ಣನ ಬಳಿ ಉಸುರಿದ..."ಅಣ್ಣಾ...ಅಣ್ಣಾ...ನೀನು ಓದ್ಬೇಕಣ್ಣಾ...ನಂಬಗ್ಗೆ ಚಿಂತಿಸ್ಬೇಡಣ್ಣಾ...ಅಲ್ನೋಡಣ್ಣಾ ಅಮ್ಮನ್ನಾ...ಅವಳನ್ನ ನೋಯಿಸ್ಬೇಡಣ್ಣಾ". ಮಾರುತಿಗೆ ಪ್ರೀತಿ ಉಕ್ಕಿ ಬಂತು. ಕಿಶೊರನನ್ನ ಬಾಚಿ ತಬ್ಬಿಕೊಂಡ. ಆನಂದಭಾಷ್ಪವೋ? ಅಥವಾ ದುಃಖದ ಕಡಲಿನ ಕಟ್ಟೆ ಒಡೆಯಿತೋ? ಒಟ್ಟಿನಲ್ಲಿ ಕಣ್ಣೀರು ಸುರಿಯತೊಡಗಿತು. ಪ್ರೀತಿಯ ತಮ್ಮನ ಅಪ್ಪುಗೆ ಬಲಪಡಿಸುತ್ತ, ತನ್ನ ರೋದನೆ ಮುಂದುವರೆಸಿದ.


ಸ್ವಲ್ಪ ಹೊತ್ತಿನ ನಂತರ ಎಲ್ಲವೂ ನಿಶ್ಯಬ್ಧ. ಆದರೆ ಎಲ್ಲರ ಮನಸ್ಸಿನಲ್ಲಿ ನೂರೆಂಟು ಯೋಚನಾಲಹರಿಗಳು. ಈ ಯೋಚನೆಗಳಿಗೆ ಅಡ್ಡಿಬಂತಂದೆ ಹೊರಗಡೆ ಹೆಜ್ಜೆಗಳ ಸಪ್ಪಳವಾಯಿತು.

ಬಾಗಿಲಲ್ಲೇ ಕುಳಿತಿದ್ದ ಲೋಹಿತ (ಆರನೆ ಮಗ, ಅಂದರೆ ಕಿಶೋರನಿಗೆ ಮಾತ್ರ ಅಣ್ಣ ), ಹೊರಗಡೆ ಇಣುಕಿದ. ಕಣ್ಣಗಲಿಸಿ ನೋಡಿದ..ಕಣ್ಣು ಮತ್ತೂ ಅಗಲಿಸಿ ಕೂಗಿಕೊಂಡ "ದೊಡ್ಡಣ್ಣಾ ಬಂದಾ....ದೊಡ್ಡಣ್ಣಾ ಬಂದಾ....". ಓಡಿ ಹೊಗಿ ಹಿರಿಯಣ್ಣನ ಕೈ ಹಿಡಿದು ಕೊಂಡ. ಮನೆಬಿಟ್ಟು ಹೋಗಿದ್ದ ಹಿರಿಯ ಮಗ ಶಂಕರ, ಮಾರುತಿಯ ಬಗ್ಗೆ ದಿನಪತ್ರಿಕೆಯಲ್ಲಿ ರ್‍ಯಾಂಕ್ ಸುದ್ದಿಯನ್ನು ಓದಿ ಮರಳಿ ಗೂಡಿಗೆ ಬಂದಿದ್ದ. ಬಂದವನೇ ಮಾರುತಿಯನ್ನು ಬಾಚಿ ತಬ್ಬಿದ. ಮಾರುತಿಯ ಹಣೆಗೆ ಮುತ್ತಿಟ್ಟ. ಕಣ್ಣೀರಿಟ್ಟ. ತಾಯ್ತಂದೆಯರಿಗೆ ನಮಸ್ಕರಿಸಿದ. ಅವನ ಹಿಂದೆಯೆ ಅವನ ಹೆಂಡತಿ ಕಮಲಳೂ ನಮಸ್ಕರಿಸಿದಳು. ವಿಶ್ವನಾಥರಾಯರಿಗೂ, ಭಾಗಿರಥಮ್ಮನವರಿಗೂ ಕ್ಷಣಕಾಲ ನೂರೆಂಟು ಪ್ರಶ್ನೆಗಳು ಮನದಲ್ಲಿ ಹಾದುಹೋದರೂ, ನಮಸ್ಕರಿಸಿದ ಸೊಸೆಯನ್ನು ಮನೆಗೆ ಬಂದ ಮಹಾಲಕ್ಷ್ಮಿಯೆಂದು ಭಾವಿಸಿ ಮನಸಾರೆ ಆಶೀರ್ವದಿಸಿದರು.

ಶಂಕರನು ತಾನು ತಂದಿದ್ದ ದ್ರಾಕ್ಷಿ, ಸೇಬುಗಳನ್ನು ಪ್ರೀತಿಯ ತಮ್ಮಂದಿರಿಗೆ ಕೊಟ್ಟು, ಅಪ್ಪನ ಪಕ್ಕದಲ್ಲಿ ಬಂದು ಕುಳಿತನು. ಮೂಸಂಬಿಯ ಸಿಪ್ಪೆ ಸುಲಿಯುತ್ತಾ ತನ್ನ ಕತೆಯನ್ನು ವಿವರವಾಗಿ ಹೇಳಿದ. ಹೇಳದೆ ಕೇಳದೆ ಮನೆ ಬಿಟ್ಟು ಹೋದದ್ದಕ್ಕೆ ಎಲ್ಲರಲ್ಲೂ ಕ್ಷಮೆ ಕೇಳಿದ. ದೊಡ್ಡಮಗನಾಗಿ ಬೇರೆಯವರಿಗಿಂತ ತನ್ನ ಮೇಲೆ ಜವಬ್ದಾರಿ ಹೆಚ್ಚೆಂದು ತಿಳಿದೇ, ಯಾವುದಾದರು ಕೆಲಸ ಮಾಡಿ ಮತ್ತೆ ಮನೆಗೆ ಮರಳಬೇಕೆಂದೇ ಮನೆ ಬಿಟ್ಟೆನೆ ಹೊರತು, ನಿಮ್ಮಿಂದ ಶಾಶ್ವತವಾಗಿ ದೂರಹೋಗಬೇಕೆಂದಲ್ಲಾ ಎಂದು ಸೂಕ್ಷ್ಮವಾಗಿ ತಿಳಿಹೇಳಿದನು. ತಾನು ಬೆಂಗಳೂರಿನ ಬಸ್ ಹತ್ತಿದ್ದೂ, ಬೆಂಗಳೂರಿನಲ್ಲಿ ಕೆಲಸಕ್ಕಾಗಿ ಪಟ್ಟ ಪಾಡು, ಕೊನೆಗೆ ಅಪ್ಪನ ಮೇಸ್ತ್ರಿ ಕೆಲಸ ಸ್ವಲ್ಪ ಗೊತ್ತಿದ್ದರಿಂದ ಹೇಗೊ ಕಾಲ ತಳ್ಳುತ್ತಿದುದ್ದು, ತನ್ನನ್ನು ನೋಡಿಕೊಳ್ಳುತ್ತಿದ್ದ ಮೇಸ್ತ್ರಿ ರಾಮಪ್ಪ ಇದ್ದಕ್ಕಿದ್ದಂತೆ ಕಣ್ಮುಚ್ಚಿದ್ದು, ಆತನ ಮಗಳಾದ ಕಮಲಳಿಗೆ ಅಪ್ಪನ ನಂತರ ಯಾರೂ ನೆರವಾಗದಿದ್ದದ್ದೂ, ಕೊನೆಗೆ ಯಾರಿಗೂ ತಿಳಿಸದಂತೆ ಮದುವೆಯಾಗಬೇಕಾದಂತ ಪರಿಸ್ಥಿತಿ ಎದುರಾದದ್ದೂ ಇವೆಲ್ಲವನ್ನೂ ಇದ್ದದ್ದು ಇದ್ದಂತೆಯೆ ವಿವರಿಸಿದ. ಮೊದಲು ಕೊಂಚ ಕೋಪಗೊಂಡಿದ್ದ, ಶ್ರೀನಾಥ ಅಣ್ಣನ ಈ ವಿವರಗಳಿಂದ ಈಗ ಮೆದುವಾಗಿದ್ದ. ಇಷ್ಟು ಹೇಳಿ ಮುಗಿಸುವಷ್ಟರಲ್ಲಿಯೇ ಕಮಲಳು ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದಳು. ಕಸವನ್ನೆಲ್ಲಾ ಮೂಲೆಯಲ್ಲಿ ಗುಡ್ಡೆ ಮಾಡಿ ಬಾಚುವಾಗ, ಪುಟಾಣಿ ಕಿಶೋರ ಓಡಿಹೋಗಿ ಕಮಲಳ ಕುತ್ತಿಗೆಗೆ ಹಿಂದಿನಿಂದ ಹೋಗಿ ಎರಡು ಕೈಗಳನ್ನು ಸುತ್ತಿಹಾಕಿಕೊಂಡು, "ನಿಮ್ಮನ್ನ ಏನಂತ ಕರೀಲಿ?" ಎಂದು ಮುಗ್ಧತೆಯ ಭಾವದಿಂದ ಕೇಳಿದ. ಕಮಲಳ ಮುಖವು ಕಮಲದಂತೆ ಅರಳಿ, ಹಾಗೆಯೇ ಅವನ ಕಡೆ ತಿರುಗಿ, "ಅತ್ತಿಗೆ ಅಂತಾ ಕರಿ ಕಂದಾ" ಎಂದು ನೋಡಿ ಮುಗುಳ್ನಕ್ಕಳು.


ಕೇವಲ ಕೆಲವು ನಿಮಿಷಗಳಲ್ಲೆ ಮನೆಮಂದಿಯ ಮನ ಗೆದ್ದಿದ್ದಳು ಕಮಲ, ಅಡುಗೆ ಮನೆಯ ಸ್ವಚ್ಛಮಾಡಿ, ಎಲ್ಲರಿಗೂ ಅಡುಗೆ ಮಾಡತೊಡಗಿದ್ದಳು.


ಇತ್ತ, ಭಾಗಿರಥಮ್ಮ, ಹಿರಿಯಮಗ ಶಂಕರನ ಬಳಿ, ಅವಳ ಮುಂದಿದ್ದ ಆಸೆಯನ್ನು ಬಿಚ್ಚಿಟ್ಟಳು. "ನಾವೆಲ್ಲಾ ಹೇಳಿದ್ದಾಯ್ತು...ಈಗ ನೀನಾದ್ರು ಮಾರುತಿಗೆ ಹೇಳು ಮುಂದಕ್ಕೆ ಓದಪ್ಪ ಅಂತಾ...ಓದದೇ ಇಲ್ಲಾ ಅಂತ ಕುಂತವ್ನೆ" ಎಂದಳು. ಆ ಭಗವಂತ ಶಂಕರನನ್ನು ಮನೆಗೆ ವಾಪಸಾಗುವಂತೆ ಮಾಡಿರುವುದೇ ಅದಕ್ಕಲ್ಲವೇ?


ಶಂಕರ ಮಾರುತಿಯ ಕೈ ಹಿಡಿದು ಮನೆಯಿಂದ ಹೊರಬಂದ. ಅವರಿಬ್ಬರನ್ನು ಶ್ರೀನಾಥನೂ ಹಿಂಬಾಲಿಸಿದ. ಸ್ವಲ್ಪ ದೂರ ಹೋದಮೇಲೆ, ಶ್ರೀನಾಥನು ಮನೆಯಲ್ಲಿ ನಡೆಯುತ್ತಿದ್ದ ಚರ್ಚೆಯನ್ನು ಚಾಚೂ ತಪ್ಪದೆ ಶಂಕರನಿಗೆ ವಿವರಿಸಿದ. ಶಂಕರ ಒಂದು ದೀರ್ಘ ನಿಟ್ಟುಸಿರು ಬಿಟ್ಟು ಹೇಳಿದ. "ಆ ದೇವರು ದೊಡ್ಡವನು. ನಾನಿಲ್ಲಿಗೆ ಸರಿಯಾದ ಸಮಯಕ್ಕೇ ಬರುವಂತೆ ಮಾಡಿದ್ದಾನೆ. ನೋಡು ಮಾರುತಿ, ನಿನ್ನ ಮನಸ್ಸಿನಲ್ಲಿರುವ ಪ್ರತಿಯೊಂದು ಆಸೆ, ಕನಸು, ಭಾವನೆಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಇವೆಲ್ಲವೂ ನನ್ನಲ್ಲಿಯೂ ಇತ್ತು...ಈಗಲೂ ಇವೆ. ನಮ್ಮಿಬ್ಬರಲ್ಲಿ ಮಾತ್ರವಲ್ಲ, ಶ್ರೀನಾಥನ ಬಳಿಯೂ ಇವೆ. ನಮ್ಮೆಲ್ಲರ ಆಸೆ ಒಂದೆ, ನಮ್ಮ ಮನೆ ಜೇನುಗೂಡಿನಂತಿರಬೇಕು. ನಾವೆಲ್ಲಾ ಜೇನುಗಳಾಗಿ ಜೊತೆಯಾಗಿರಬೇಕು. ಆಗಾಗುವದಕ್ಕೆ, ಒಂದೇ ಪರಿಹಾರ. ಅದುವೇ ಒಬ್ಬರಿಗೊಬ್ಬರು ನೆರವಾಗುವುದು".
ಮಾರುತಿ ಶಂಕರನ ಮಾತುಗಳನ್ನು ತದೇಕಚಿತ್ತದಿಂದ ಕೇಳುತಿದ್ದ.
ಶಂಕರ ಮುಂದುವರೆಸಿದ, "ನಮ್ಮ ಸಂಸಾರ ಈಗ ಸಾಕಷ್ಟು ಸುಧಾರಿಸಿದೆ. ಮೊದಮೊದಲು, ಅಪ್ಪನ ಮೇಲೇ ಪೂರ್ತಿ ಜವಾಬ್ದಾರಿಯಿತ್ತು. ಆದರೆ ಈಗ ಹಾಗಲ್ಲ. ನೀನು, ಶ್ರೀನಾಥ ಸೇರಿಕೊಂಡು ಸಾಕಷ್ಟು ಉತ್ತಮಗೊಳಿಸಿದ್ದೀರಿ. ನಾನು ಮನೆ ಬಿಟ್ಟು ಹೋದಾಗಿನಿಂದ ಇಲ್ಲಿಯವರೆಗೂ ಜವಾಬ್ದಾರಿಗಳನ್ನು ಉತ್ತಮವಾಗಿ ನಿಭಾಯಿಸಿದ್ದೀರಿ. ತಮ್ಮಂದಿರನ್ನ ಚೆನ್ನಾಗಿ ಪೋಷಿಸಿದ್ದೀರಿ. ನಿಮಗೆ ನಾನೆಷ್ಟು ಕೃತಜ್ಞತೆಗಳನ್ನರ್ಪಿಸದರೂ ಸಾಲದು."
ಶಂಕರನ ಕಣ್ಣು ಒದ್ದೆಯಾಗಿತ್ತು...ಆದರೂ ಮುಂದುವರೆಸಿದ, "ಈಗ, ನಿಮ್ಮ ಜವಾಬ್ದಾರಿಯನ್ನು ಹಂಚಿಕೊಳ್ಳಲು ನಾನು ಎಲ್ಲ ರೀತಿಯಿಂದಲೂ ಸನ್ನದ್ಧನಾಗಿದ್ದೇನೆ. ಸಂಸಾರವನ್ನು ತಕ್ಕ ಮಟ್ಟಿಗೆ ನೋಡಿಕೊಳ್ಳುವ ಚೈತನ್ಯವಿರುವಷ್ಟು ದುಡಿಯುತ್ತಿದ್ದೇನೆ. ನಮ್ಮೆಲ್ಲರನ್ನೂ ಸಾಕಿ ದೊಡ್ದವರನ್ನಾಗಿ ಮಾಡುವಲ್ಲಿಯೇ ತನ್ನ ಜೀವವನ್ನು ತೇಯುತ್ತಿರುವ ಅಮ್ಮನಿಗೆ ಇನ್ಮುಂದೆ ನೆರವಾಗಲು, ಬೆಂಗಾವಲಾಗಲು ಕಮಲಳು ಇಲ್ಲಿಯೇ ಇರುತ್ತಾಳೆ. ನಾನು ಪ್ರತಿ ವಾರಕ್ಕೊಮ್ಮೆ ಬಂದು ಹೋಗುತ್ತಿರುತ್ತೇನೆ. ನೀನು ನನ್ನ ಜೊತೆ ಬೆಂಗಳೂರಿಗೆ ಬಾ. ನನ್ನ ಮನೆ, ಇನ್ಮುಂದೆ ನಿನ್ನ ಮನೆ. ಪಿ.ಯು.ಸಿ ಸೇರಲು ಇನ್ನು ಜಾಸ್ತಿ ದಿನ ಉಳಿದಿಲ್ಲ. ನಿನ್ನ ಓದಿನ ಭಾರವನ್ನು ಸರ್ಕಾರ ಹೊರುತ್ತಿರುವುದು ನಮ್ಮೆಲ್ಲರ ಹೊರೆಯನ್ನು ಸ್ವಲ್ಪವಾದರೂ ಕಡಿಮೆಮಾಡಿದೆ. ಇಲ್ಲಿ ಅಪ್ಪ ಅಮ್ಮ, ತಮ್ಮಂದಿರನ್ನು ನೋಡಿಕೊಳ್ಳಲು ಶ್ರೀನಾಥ, ಭಟರು, ಕಮಲ ಇವರೆಲ್ಲರೂ ಇದ್ದಾರೆ. ಏನಾದರೂ ತುರ್ತು ವಿಷಯವಿದ್ದರೆ, ಶ್ರೀನಾಥ ಭಟರ ಮೂಲಕ ನಮಗೆ ಟೆಲಿಗ್ರಾಮ್ ಕೊಡಲಿ ಅಥವಾ ಬೆಂಗಳೂರಿನ ನಮ್ಮ ಪಕ್ಕದಮನೆಯವರಿಗೆ ಫೋನಾಯಿಸಲಿ. ಏನಂತ್ಯೋ ಶ್ರೀನೀ?"
ಶ್ರೀನಾಥನಿಗೆ ಮಾತೇ ಹೊರಡುತ್ತಿಲ್ಲ..ಮೌನದಿಂದಲೆ ಹೌದೆಂಬಂತೆ ತಲೆಯಲ್ಲಾಡಿಸಿದ.

ಶಂಕರ ಹೇಳುವುದು ಇನ್ನೂ ಮುಗಿದಿರಲಿಲ್ಲ, "ನೋಡು ಮಾರುತಿ, ನಿನ್ನ ಅಣ್ಣನಾಗಿ ನಾನು ನಿನಗಿಂತ ಸ್ವಲ್ಪ ಜಾಸ್ತಿ ಈ ಪ್ರಪಂಚವನ್ನು ಅರ್ಥಮಾಡಿಕೊಂಡಿದ್ದೇನೆ. ಸಾಕಷ್ಟು ನೋವು-ಕಷ್ಟಗಳನ್ನು ಅನುಭವಿಸಿದ್ದೇನೆ. ನೀನು, ಅಪ್ಪ, ಅಮ್ಮ, ಶ್ರೀನೀ ಎಲ್ಲರೂ ನೋವು-ಕಷ್ಟಗಳನ್ನು ಉಂಡವರೇ. ನಮ್ಮ ತಮ್ಮಂದಿರೂ ಆ ನೋವಿನಲ್ಲಿ ತೋಯಬೇಕೆ? ಅವರು ಮುಂದೆ ಓದಿ, ವಿದ್ಯಾವಂತರಾಗಬೇಕಲ್ಲವೇ? ಅವರು ವಿದ್ಯಾವಂತರಾಗಲು ನೀನು ಮಾರ್ಗದರ್ಶಿಯಾಗಬೇಕಲ್ಲವೇ? ಅಣ್ಣಂದಿರಾದ ನಾವೇ ಓದದೇ ತಮ್ಮಂದಿರಿಗೆ ಓದಲು ಹೇಳಿದರೆ ನಮ್ಮ ಮಾತಿಗೆ ಬೆಲೆಕೊಡುತ್ತಾರೆಯೇ? ಮುಂದೆ ಅವರು ಏನು ಓದಬೇಕು, ಎತ್ತ ದಿಕ್ಕಿನಲ್ಲಿ ಸಾಗಬೇಕು ಎಂದು ಅರ್ಥಮಾಡಿಕೊಂಡು ಅವರಿಗೆ ಬುದ್ಧಿಹೇಳಲು ನಮಗೆ ಸಾಕಷ್ಟು ಯೋಗ್ಯತೆ ಇರಬೇಕಲ್ಲವೇ? ನೀನು ಓದಿ ದೊಡ್ಡ ಹುದ್ದೆಯನ್ನೇರಿದರೆ, ನೀನು ನಮಗೆಲ್ಲರಿಗೂ ಆಧಾರಸ್ತಂಭ ಮಾತ್ರವಲ್ಲ, ತಮ್ಮಂದಿರೆಲ್ಲರಿಗೂ ಸ್ಪೂರ್ತಿಯಾಗುವೆಯಲ್ಲವೇ? ನಿನ್ನಂತೆ ತಾನೂ ಓದಿ ಮುಂದೆ ಬರಬೇಕೆಂಬ ಆಸೆ, ಉತ್ಸಾಹ, ಛಲ ಅವರಲ್ಲಿಯೂ ಮೂಡುತ್ತದೆಯಲ್ಲವೇ? ನೀನೇ ಓದುವುದಿಲ್ಲವೆಂದರೆ ಅವರೆಲ್ಲರ ಉತ್ಸಾಹಕ್ಕೆ ತಣ್ಣೀರೆರಚಿದಂತಾಗುವುದಿಲ್ಲವೇ? ನೀನಿಷ್ಟು ದಿನ ಕಷ್ಟಪಟ್ಟು ಓದಿದ್ದು, ರ್‍ಯಾಂಕ್ ಬಂದದ್ದೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುವುದಿಲ್ಲವೇ?" ಕ್ಷಣಕಾಲ ಸುಮ್ಮನಾದ ಶಂಕರ ಮಾರುತಿಯನ್ನು ಗಮನಿಸುತ್ತಾನೆ. ಮಾರುತಿ ಶಂಕರನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಾನೆ, ಕಿವಿಯಲ್ಲಿ ಕಿವಿಯಿಟ್ಟು ಕೇಳುತ್ತಿದ್ದಾನೆ. ತಾನು ಕೇಳುತ್ತಿರುವುದು, ನೋಡುತ್ತಿರುವುದು ವಾಸ್ತವವೋ, ಭ್ರಾಂತಿಯೋ ಎಂದು ಕ್ಷಣಕಾಲ ಗೊಂದಲಕ್ಕೀಡಾಗುತ್ತಾನೆ. ನಿಧಾನವಾಗಿ ಗೊಂದಲದಿಂದ ಚೇತರಿಸಿಕೊಂಡು, "ಶಂಕ್ರಣ್ಣಾ...ನನಗೆ ಏನು ಹೇಳಬೇಕೆಂದೇ ತೋಚುತ್ತಿಲ್ಲ...ಮಾತೇ ಹೊರಡುತ್ತಿಲ್ಲ" ಎಂದಷ್ಟೇ ಹೇಳಿ ನಿಲ್ಲಿಸುತ್ತಾನೆ. ಅವನ ಕಣ್ಣುಗಳಲ್ಲಿ ಪ್ರಜ್ವಲಿಸುತ್ತಿದ್ದ ಕಾಂತಿಯನ್ನು ಬಹುಬೇಗ ಗ್ರಹಿಸಿದ ಶಂಕರ, "ನೀನೇನೂ ಹೇಳಬೇಕಿಲ್ಲ. ಎಲ್ಲವನ್ನೂ ನಾನೇ ಅರ್ಥ ಮಾಡಿಕೊಂಡೆ" ಎಂದು ಸಂತೋಷದಿಂದ ಮಾರುತಿಯ ಭುಜವನ್ನು ತಟ್ಟುತ್ತಾನೆ.

ಕೊನೆಗೇನಾಯಿತು?
ಮೂರನೆಯ ಹಾಗು ಅಂತಿಮ ಭಾಗದಲ್ಲಿ ನಿರೀಕ್ಷಿಸಿ.


Comments:
(ಮನದ)"ಮಾತುಗಳು ಬರದವನು ಬರೆಯುತ ಹೊಸ ಕ-ತೆಯ" - :-)

ನಿಮಗೆ ಬರೆಯಲು ಸ್ಪೂರ್ತಿ ನೀಡಿದ ತವಿಶ್ರೀಯವರು ಇದೇ ರೀತಿ ಇನ್ನಷ್ಟು ಜನರನ್ನು ಬರವಣಿಗೆಯಲ್ಲಿ ತೊಡಗಿಸಲಿ.
 
ಧನ್ಯವಾದಗಳು ತ್ರಿ :-)

ಹೌದು! ಈ ಕಥೆಯನ್ನು ಬರೆಯಲು ಪ್ರೇರೇಪಿಸಿದ ತವಿಶ್ರೀಯವರು ಇದೇ ರೀತಿ ಹಲವಾರು ಜನರಿಗೆ ಸ್ಫೂರ್ತಿದಾತರಾಗಲಿ. ತವಿಶೀಯವರಿಗೆ ಧನ್ಯವಾದಗಳು!

~ ಮನ
 
Post a Comment



<< Home
This page is powered by Blogger. Isn't yours?