ಮನದ ಮಾತು

Monday, July 03, 2006

 

'ನಿರ್ಮಾತೃಗಳು'



ಮುನ್ನುಡಿ:

ಬಹಳ ದಿನಗಳಿಂದ ನೋಡದೇ ಬಾಕಿ ಉಳಿದಿದ್ದ 'ರಣಧೀರ ಕಂಠೀರವ' ಚಲನಚಿತ್ರವನ್ನು ನೋಡುವ ಸೌಭಾಗ್ಯ, ಕಳೆದ ವಾರ ಒದಗಿಬಂತು. ರಣಧೀರ ಕಂಠೀರವ ನರಸರಾಜರ ಜೀವನವನ್ನಾಧರಿಸಿದ ಈ ಐತಿಹಾಸಿಕ ಚಿತ್ರದಲ್ಲಿ, ಕಂಠೀರವನ ಪಾತ್ರ ನಿರ್ವಹಿಸಿರುವುದು ಕನ್ನಡದ ಕಂಠೀರವ ಸಾಕ್ಷಾತ್ ಡಾ.ರಾಜ್‍ಕುಮಾರ್! ಅದೇ ರಾಜ್‍ಕುಮಾರ್, ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನವನ್ನಿತ್ತು, ಕಂಠೀರವ ಸ್ಟೂಡಿಯೋದಲ್ಲಿನ ಮಣ್ಣಿನಲ್ಲಿ ಮಣ್ಣಾಗಿ ಹೋಗಿದ್ದು ವಿಪರ್ಯಾಸವಾದರೂ ಸತ್ಯ!

ಕನ್ನಡ ಚಿತ್ರರಂಗದ ಪಾಲಿಗೆ 'ರಣಧೀರ ಕಂಠೀರವ' ಚಿತ್ರ ವಿಶಿಷ್ಟವಾದುದು. ಕಾರಣ, ಅದನ್ನು ತಯಾರಿಸಿದ ಚಿತ್ರ ನಿರ್ಮಾಣ ಸಂಸ್ಥೆ ಮತ್ತು ಮುಖ್ಯವಾಗಿ ಅದರ 'ನಿರ್ಮಾತೃಗಳು'!



ಸುಮಾರು ೪೬ ವರ್ಷಗಳಷ್ಟು ಹಿಂದಕ್ಕೆ ಕೆಲಕಾಲ ಹೋಗಿ ಬರೋಣ.
ವರ್ಷ ೧೯೫೯-೬೦. ಕನ್ನಡದ ಚಿತ್ರೋದ್ಯಮ ಸಂಪೂರ್ಣವಾಗಿ ಮದರಾಸಿನಲ್ಲಿ(ಈಗಿನ ಚೆನ್ನೈ) ನೆಲೆಯೂರಿದೆ. ಕನ್ನಡದ ಕಲಾವಿದರು, ಸಹಕಲಾವಿದರು, ತಂತ್ರಜ್ಞರು ಸಂಕಷ್ಟದ ಸ್ಥಿತಿಯಲ್ಲಿದ್ದ ಕಾಲ. ಕನ್ನಡ ನಾಡಿನಲ್ಲಿ ಚಿತ್ರಗಳು ನಿರ್ಮಾಣವಾಗದೇ, ಇಲ್ಲಿಯವರಿಗೆ ಹೆಚ್ಚಿನ ಕೆಲಸಗಳು, ಅವಕಾಶಗಳು ಸಿಗುತ್ತಿಲ್ಲ. ಇದಕ್ಕೊಂದು ಪರಿಹಾರ ರೂಪಿಸಲೋಸುಗ ಒಂದು ಚಿಂತಕರ ಚಾವಡಿ ನಿರ್ಮಾಣಗೊಂಡಿತು.
ಚಾವಡಿಯಲ್ಲಿದ್ದ ಪ್ರಮುಖರು: ಜಿ.ವಿ.ಅಯ್ಯರ್, ರಾಜಕುಮಾರ್, ಬಾಲಕೃಷ್ಣ, ಮತ್ತು ನರಸಿಂಹರಾಜು.
ಅಬ್ಬಬ್ಬಾ! ಒಬ್ಬಬ್ಬರೂ ಒಂದೊಂದು ಕಲಾಶಿಖರಗಳು. ಕಲೆಯನ್ನು, ಅದರಲ್ಲಿಯೂ ಅಭಿನಯದ ಕಲೆಯನ್ನು ಅರೆದು ಕುಡಿದವರು.
ಅಭಿನಯದೊಂದಿಗೆ ಸಾಹಿತ್ಯ ರಚನೆಯನ್ನೂ, ನಿರ್ದೇಶನವನ್ನೂ, ಮತ್ತು ಕೊನೆಗೆ ಚಿತ್ರನಿರ್ಮಾಣವನ್ನೂ ಕರಗತವಾಗಿಸಿಕೊಂಡವರು ಜಿ.ವಿ.ಅಯ್ಯರ್ ಅವರು.
ಹಾಸ್ಯ ಎಂದರೆ ನರಸಿಂಹರಾಜು, ನರಸಿಂಹರಾಜು ಎಂದರೆ ಹಾಸ್ಯ ಎನ್ನುವಷ್ಟರ ಮಟ್ಟಿಗೆ ತಮ್ಮ ಛಾಪನ್ನು ಮೂಡಿಸಿದವರು ಹಾಸ್ಯಬ್ರಹ್ಮ ನರಸಿಂಹರಾಜು. ಹುಟ್ಟಿನಿಂದಲೇ ಅಸ್ವಸ್ಥ ಕಿವಿಗಳನ್ನು ಹೊಂದಿದ್ದರೂ, ಕಿವುಡುತನವು ತನ್ನ ಅಭಿನಯ ಸಾಮರ್ಥ್ಯಕ್ಕೆ ಎಂದೂ ಅಡ್ಡಿಬರದಂತೆ ನೋಡಿಕೊಂಡು, ಅಪ್ಪನಾಗಿ, ಅಣ್ಣನಾಗಿ, ಖಳನಟರಾಗಿ, ಹಾಸ್ಯನಟರಾಗಿ ಸುಮಾರು ಐನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಕಲೆಯನ್ನು ಧಾರೆಯೆರೆದು, ಅಭಿಮಾನ್ ಸ್ಟೂಡಿಯೋವನ್ನು ಕಟ್ಟಿ, ಕನ್ನಡ ಚಿತ್ರರಂಗಕ್ಕಾಗಿಯೇ ತನ್ನ ಸರ್ವಸ್ವವನ್ನೂ ತೇಯ್ದವರು, ಕನ್ನಡ ಚಿತ್ರರಂಗದ ಅತ್ಯಂತ ಹಿರಿಯಣ್ಣರಲ್ಲಿ ಒಬ್ಬರಾದ ಕಲಾಭಿಮಾನಿ ಬಾಲಕೃಷ್ಣನವರು.
ಇನ್ನು ರಾಜಕುಮಾರ್ ಬಗ್ಗೆ ನಾನು ಬರೆದು ಹೇಳಬೇಕಾದ್ದು ಏನೇನೂ ಇಲ್ಲ. ಕನ್ನಡ ಭಾಷೆ, ಕನ್ನಡ ನಾಡು ಕಂಡ ಹೆಮ್ಮೆಯ ಸುಪುತ್ರ.

ಇವರೆಲ್ಲರೂ ಸೇರಿ 'ಕನ್ನಡ ಕಲಾವಿದರ ಸಂಘ'ವನ್ನು ಸ್ಥಾಪಿಸಿ, ರಾಜ್ಯಾದ್ಯಂತ ಪ್ರವಾಸ ಮಾಡಿ ಕನ್ನಡ ಚಿತ್ರೋದ್ಯಮ ನೆಲೆ ನಿಲ್ಲಲು, ಕಲಾವಿದರು ಬದುಕಲು ಮಾರ್ಗಗಳನ್ನು ಹುಡುಕಿದರು. ಇದೇ ಸಂಘವು ಚಿತ್ರನಿರ್ಮಾಣ ಸಂಸ್ಥೆಯಾಗಿ 'ರಣಧೀರ ಕಂಠೀರವ' ಚಿತ್ರವನ್ನು ನಿರ್ಮಿಸಿತು.
ಈ ಚಿತ್ರದಲ್ಲಿ, ಆರಂಭದಲ್ಲಿ ಹೆಸರುಗಳನ್ನು ತೋರಿಸುವಾಗ 'ಮನ'ದ ಮನ ಸೆಳೆದದ್ದು: 'ನಿರ್ಮಾತೃಗಳು'.

ಸಾಮಾನ್ಯವಾಗಿ ನಾವು ಚಿತ್ರವನ್ನು ನಿರ್ಮಿಸಿದವರ ಹೆಸರನ್ನು ನೋಡುವುದು "ನಿರ್ಮಾಪಕ(ರು)" ಅಥವಾ "ನಿರ್ಮಾಪಕಿ(ಯರು)" ಎಂದು.
ಆದರೆ ಈ ಚಿತ್ರದ ವೈಶಿಷ್ಟ್ಯವೆಂದರೆ, ಇದರಲ್ಲಿ producers ಹೆಸರುಗಳನ್ನು ತೋರಿಸುವುದು 'ನಿರ್ಮಾತೃಗಳು' ಎಂದು!
'ಮಾತೃ' ಎಂದರೇ 'ತಾಯಿ' ಅಂದರೆ ಜನ್ಮದಾತೆ ಎಂದರ್ಥ. ಇಲ್ಲಿ ಚಲನಚಿತ್ರವೊಂದಕ್ಕೆ ಜನ್ಮವನ್ನಿತ್ತಿರುವ ಈ ಕಲಾಶಿಖರಗಳು, ಅದನ್ನು ಈ ರೀತಿ ಹೇಳಿದ್ದಾರೆ.

ಮುಗಿಸುವ ಮುನ್ನ:
ಸುಖದಲ್ಲಿರುವಾಗ ಎಲ್ಲರೂ ನೆಂಟರೇ
ಕಷ್ಟದಲ್ಲಿ, ದುಃಖದಲ್ಲಿರುವಾಗ ಎಲ್ಲರೂ ದೂರ

ಇದು ನಾವೆಲ್ಲರೂ ಗಮನಿಸಿರಬಹುದಾಂತಹ, ಒಂದು ಕಠೋರ ಸತ್ಯ. ಇದನ್ನು ಸುಳ್ಳೆಂದು ನಿರೂಪಿಸುವ ಘಟನೆಗಳು ಇಲ್ಲದಿಲ್ಲ. ಆ ವಿರಳವಾದ ಸಾಲಿಗೆ ಸೇರುವಂತಹದ್ದು ಈ ನಿರ್ಮಾತೃಗಳು ಮಾಡಿರುವ ಕೆಲಸ. ಕನ್ನಡ ಚಿತ್ರೋದ್ಯಮವು ಬೆಂಗಳೂರಿನ ಗಾಂಧಿನಗರದಲ್ಲಿ ತಳವೂರಲು ಈ ಕೆಲಸ ಬಹಳಷ್ಟು ಸಹಕಾರಿಯಾಯಿತು. ಮದರಾಸಿನ ಮೇಲೆ ಸಂಪೂರ್ಣವಾಗಿ ಅವಲಂಬನೆಯಾಗಿದ್ದ ಚಿತ್ರೋದ್ಯಮವು ತಾಯ್ನಾಡಿನಲ್ಲಿಯೇ ಕೆಲಸ ಮಾಡುವಂತಾಯಿತು.

ಒಗ್ಗರಣೆ: "ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ ನಿಮ್ಮ ರಾಜ್‍ಕುಮಾರ್ ಏನ್ ಮಾಡಿದ್ದಾರೆ?" ಎಂಬ ಪ್ರಶ್ನೆಯಲ್ಲದ ಪ್ರಶ್ನೆ ಕೇಳುವ ಅಜ್ಞಾನಿಗಳಿಗೆ ಈಗಾಗಲೇ ಇರುವ ಉತ್ತರಗಳೊಡನೆ, ಈ ವಿಷಯವನ್ನೂ ಸೇರಿಸಿ ಹೇಳಬಹುದೆಂದುಕೊಂಡಿರುವೆ.

~ ಮನ

Comments:
ಈ ಚಿತ್ರದಿಂದಲೆ, ಕರ್ನಾಟಕದಲ್ಲಿ ಚಿತ್ರನಿರ್ಮಾಣ ಪ್ರಾರಂಭವಾಯಿತು ಎಂದು ತಿಳಿದಿರಲಿಲ್ಲ. ಉತ್ತಮವಾದ ಚಿತ್ರ. ಕಥೆಗೆ ತಕ್ಕನಾದ ಚಿತ್ರಕಥೆ, ಚಿತ್ರಕಥೆಗೆ ತಕ್ಕನಾದಂತ ಪಾತ್ರವರ್ಗ. ಪ್ರತಿಯೊಂದು ಪಾತ್ರದಿಂದಲು ಅದ್ಭುತವಾದ ನಟನೆ. ಜಿ.ವಿ.ಐಯರ್ ಪಳೆಗನ್ನಡಮ್ ಪೇಳುವುದಮ್ ಕೇಲಲು ಮಜ. ಇಲ್ಲಿ ವ್ಯಕ್ತ ಪಡಸಲಿಚ್ಚಿಸುವುದು, ಸಂಭಾಷಣೆಯ ಬಗ್ಗೆ. ಒಬ್ಬಟ್ಟಿನಲ್ಲಿ ಹೂರಣದಂತಿದೆ:)

ರಾಜ್, ಆನೆಯೊಡನೆ ಹೊಡೆದಾಡುವ ದೃಶ್ಯ, ಅಬ್ಬ, ನಿಬ್ಬೆರಗಾದೆನು(ಆನೆ ಪಕ್ಕ ಸುಳಿದಾಡಲು ಹೆದರಿಕೆ ನನಗೆ).
ಇಲ್ಲಿ ಹೇಳಬಯಸುವ ಸಂಗತಿ, ಚಿತ್ರಿಕರಿಸಲು ಎಸ್ಟು ಪ್ರಯಾಸ ಪಟ್ಟಿರಬೇಕು ಎಂಬುದುರ ಬಗ್ಗೆ.

ಇಂತ ಚಿತ್ರವನ್ನು ಇತ್ತ ನಿರ್ಮಾತೃಗಳಿಗೆ ನನ್ನ ವಂದನೆಗಳು, ಹಾಗು, ಇದನ್ನು ಇಲ್ಲಿ ಪ್ರಸ್ತಾಪಿಸುವ ಮನ್ನಸ್ಸು ಮಾಡಿದ ಮನನಿಗೆ ಧನ್ಯವಾದ.

ಭೂತ
 
ಭೂತಕ್ಕೆ ಮತ್ತು ಶ್ರೀ ಹರ್ಷವರ್ಧನ ಅವರಿಗೆ ಧನ್ಯವಾದಗಳು.
ಇದೊಂದು ಅಪರೂಪದ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ.

ಈ ಚಿತ್ರದ ಸಾರಾಂಶವನ್ನೂ, ಇದರಲ್ಲಿನ ರೋಚಕ ಸನ್ನಿವೇಶಗಳನ್ನೂ ಸೇರಿಸಿ ಬರೆಯಬೇಕಿತ್ತು ಎಂದು ಈಗ ಅನ್ನಿಸುತ್ತಿದೆ. ಆದರೆ ಬ್ಲಾಗಿನಲ್ಲಿ ಈಗಾಗಲೇ ಹೇಳಿರುವಂತೆ, ಈ ಬರಹದ ಮುಖ್ಯ ಉದ್ದೇಶ "ನಿರ್ಮಾತೃಗಳ" ಬಗ್ಗೆ, ಕನ್ನಡ ಕಲಾವಿದರ ಸಂಘದ ಹುಟ್ಟಿನ ಬಗ್ಗೆ, ಮಾಹಿತಿ ಹಂಚಿಕೊಳ್ಳುವುದಾಗಿತ್ತು. ಇರಲಿ.

ಆನೆಯೊಡನೆ ಸೆಣಸಾಡುವ ದೃಶ್ಯಾವಳಿ, "ಒಂದು ಹುಲಿಯನ್ನು ಹಿಡಿಯಲು, ಇಪ್ಪತ್ತು ಕುರಿಗಳೇ!!?" ಎಂದು ಅಣ್ಣಾವ್ರು ಆರ್ಭಟಿಸುವ ದೃಶ್ಯ, ಬೆಂಕಿಯುಂಡೆಯಂತಹ ಕಣ್ಣುಗಳಲ್ಲಿನ ನೋಟದ ಕಾವನ್ನು ತಾಳಲಾಗದೇ ಎದುರಾಳಿಯು ಮೂರ್ಛೆ ಹೋಗುವ ದೃಶ್ಯ...ಒಂದೊಂದೂ ಕಣ್ಣಿಗೆ ಹಬ್ಬ!
ಚಿತ್ರಕಥೆಯನ್ನು ಬಹಳ ರಸವತ್ತಾಗಿ ಹೆಣೆದಿರುವ ಜಿ.ವಿ.ಅಯ್ಯರ್ ಅವರಿಗೆ ನನ್ನ ವಿಶೇಷ ಧನ್ಯವಾದಗಳು.
ಹಾಗೆಯೇ, ಈ ಚಿತ್ರದಲ್ಲಿ ತಮಿಳಿನ ಹಲವಾರು ಸಂಭಾಷಣೆಯಿರುವ ಹಲವಾರು ದೃಶ್ಯಗಳಿವೆ. ತಂಜಾವೂರಿಗೆ ಕಂಠೀರವ ನರಸರಾಜರು ಕುಸ್ತಿ/ಮಲ್ಲಯುದ್ಧ/ಗಜಕಾಳಗವಾಡಲು ಹೋದಾಗ ಈ ದೃಶ್ಯಯಗಳು ಬರುತ್ತವೆ. ನಾಯಕಿ ಲೀಲಾವತಿಯ ಪರಿಚಯವಾಗುವುದೂ ಆಗಲೇ.
 
Howdhu prathiyobba kannadiganu hemme padabeekaadha chitraa...Dr Raj avara agaadhavaada bahu, teevindha...thorisuva..avara mukaravindha...meeseyannu bittiruvaa avarannu nodaluuu yaradu kannugalu saaladhu.........
 
ರಣಧೀರ ಕಂಠೀರವ ಸೂಪರ್ ಚಿತ್ರ. ನಾನಂತೂ ಲೆಕ್ಕವಿಲ್ಲದಷ್ಟು ಬಾರಿ ನೋಡಿದ್ದೇನೆ. ಅದರಲ್ಲಿ ಬರುವ ನರಸಿಂಹರಾಜು ಮತ್ತು ಬಾಲಕೃಷ್ಣರ ಹಾಸ್ಯ ಸನ್ನಿವೇಶಗಳು ಬಹಳ ಚೆನ್ನಾಗಿವೆ. ಜಟ್ಟಿ ಕಾಳಗದ ಸನ್ನಿವೇಶದಲ್ಲಿ ಅಣ್ಣಾವ್ರ ಬಾಡಿ ನೋಡ್ಬೇಕು, ಆಹಾ! ಎಂತಹ ಮೈಕಟ್ಟು. ಇಂಥ ಚಿತ್ರಗಳನ್ನು ನೋಡದ ಪರಭಾಷಿಗಳ ಜೀವನ ನಿರರ್ಥಕ ಅಂದ್ರೆ ಅತಿಶಯೋಕ್ತಿಯಲ್ಲ.
 
ಮನ,

'ನಿರ್ಮಾತೃ' ಪದ ಇಲ್ಲಿ 'ಮಾತೃ' ರೂಪದಿಂದ ಬಂದದ್ದಲ್ಲ. ನಿರ್ಮಾತಾ - ನಿರ್ಮಾತೃ ಇವೆರಡೂ ಒಂದೇ ಅರ್ಥಕೊಡುವವು, 'ರಚಿಸಿದವ, ನಿರ್ಮಿಸಿದವ, ತಯಾರಿಸಿದವ...' ಇತ್ಯಾದಿ. 'ಕರ್ತಾ' ಮತ್ತು 'ಕರ್ತೃ' ಇದ್ದಹಾಗೆಯೇ.

'ನಿರ್ಮಾತೃ' ಪದ ಏಕವಚನ. ಅದಕ್ಕೆ ಕನ್ನಡದ ಬಹುವಚನ ಪ್ರ್ಯತ್ಯಯವಾದ 'ಗಳು' ಸೇರಿಸಿ ನಿರ್ಮಾತೃಗಳು ಎಂದರು, ಅಷ್ಟೇ!
 
'ನಿರ್ಮಾತೃ' ಪದದ ಮತ್ತಷ್ಟು ವಿವರಣೆಗೆ ಬಹಳ ಧನ್ಯವಾದಗಳು ಎಸ್.ಜೆ.

ಒಂದು ಹೊಸ ಸಂದೇಹ ಕಾಡುತ್ತಿದೆ. 'ರಚಿಸಿದವರು, ನಿರ್ಮಿಸಿದವರು, ತಯಾರಿಸಿದವರು...' ಇವೆಲ್ಲವೂ ಕೂಡ ಮಾತೃ ಪದಕ್ಕೆ ಸಮಾನಾರ್ಥ ಅಲ್ಲವೇ?
ಮಾತೃ, ತಾಯಿ, ಜನ್ಮ ನೀಡಿದವರು = ರಚಿಸಿದವರು, ನಿರ್ಮಿಸಿದವರು, ತಯಾರಿಸಿದವರು.
ಅಂದರೆ, ಮಾತೆ, ಮಾತೃ, ನಿರ್ಮಾತ, ನಿರ್ಮಾತೃ ಇವೆಲ್ಲವೂ ಒಂದಕ್ಕೊಂದು ಸಮಾನಾರ್ಥಕ ಪದಗಳಿರಬಹುದಾ? "ಸೃಷ್ಟಿಸಿದವರು", "ತಯಾರಿಸಿದವರು" ಎಂಬರ್ಥದಲ್ಲಿ.
 
Post a Comment



<< Home
This page is powered by Blogger. Isn't yours?