ಮನದ ಮಾತು

Friday, July 21, 2006

 

ಆಪರೇಷನ್ ಡೈಮಂಡ್ ರ್ಯಾಕೆಟ್ - ರಾಕೆಟ್ ಅಲ್ಲ

ಮುನ್ನುಡಿ:
ತಪ್ಪು ಮಾಡದವ್ರ್ ಯಾರವ್ರೇ? ತಪ್ಪೇ ಮಾಡದವ್ರ್ ಎಲ್ಲವ್ರೆ?
ಬಹಳ ವರ್ಷಗಳಿಂದ ಸತ್ಯವೆಂದು ನಂಬಿದ್ದ ವಿಷಯವೊಂದು ಇದ್ದಕ್ಕಿದ್ದ ಹಾಗೆ ಮಿಥ್ಯವಾಗುವ ಉದಾಹರಣೆಯೊಂದನ್ನು 'ಹಂಸಗೀತೆಯ ಸಂಗೀತದ ಹಿಂದೆ' ಲೇಖನದಲ್ಲಿ ಬರೆದದ್ದು ಸರಿಯಷ್ಟೆ. ಆ ವರ್ಗಕ್ಕೆ ಸೇರುವ ಮತ್ತೊಂದು ಅಂಶ ಇದೋ ಇಲ್ಲಿದೆ.






ಚಿತ್ರಗಳನ್ನು ಗಮನಿಸಿ. ಇದು ಖಂಡಿತಾ ರ್ಯಾಕೆಟ್ / Racket.
ಕೆಲವು ತಾಣಗಳಲ್ಲಿ ಹಾಕಿರುವಂತೆ ರಾಕೆಟ್ / Rocket ಅಲ್ಲ. ಈ ಚಿತ್ರಗಳನ್ನು ವಿಸಿಡಿ ಇಂದ ಪಡೆದದ್ದು. ಅಧಿಕೃತವಾಗಿ ಚಿತ್ರದ ಹೆಸರು ಏನು ಎಂಬುದಕ್ಕೆ ಇದನ್ನು ಉಪಯೋಗಿಸಬಹುದು.
ಈ ಪದವು ತಪ್ಪಾಗಿ ಹಲವಾರು ಕಡೆ ಪ್ರಯೋಗವಾಗಿದೆ, ಮಾತಾಡವಾಗಲೂ ಹಲವಾರು ಜನ(ಇಲ್ಲಿಯವರೆಗೂ ನಾನು ಕೂಡ :ನಾ) ತಪ್ಪಾಗಿ ಉಪಯೋಗಿಸುತ್ತಿದ್ದಾರೆ.

ಉದಾಹರಣೆಗೆ:
ಚಿತ್ರರಂಗ ಡಾಟ್ ಕಾಂ: http://www.chitraranga.com/moviebase/movieinfo.asp?movieid=588
Spicevienna ಪುಟ: http://www.spicevienna.org/showMovie.php?m=23408
Randomness blog: http://thehappypeople.blogspot.com/2005/12/operation-diamond-rocket.html
Kulki's Kannada Lyrics Page: http://www.cs.toronto.edu/~kulki/kannada/haadu.html

ಮತ್ತು ಮುಖ್ಯವಾಗಿ, ಈ ರೀಡಿಫ್ ಲೇಖನ: http://in.rediff.com/movies/2006/apr/17raj.htm

ಆಂಗ್ಲ ವಿಕಿಪೀಡಿಯದ ಡಾ.ರಾಜ್ ಪುಟದಲ್ಲಿಯೂ ಈ ತಪ್ಪು ['ಅಚಾತುರ್ಯ'ವೆನ್ನಲಾಗದು :)] ನುಸುಳಿತ್ತು.

ಅದೇ ರೀತಿ, ಕನ್ನಡ ವಿಕಿಪೀಡಿಯದಲ್ಲಿ ಇರುವ ಡಾ.ರಾಜ್ ಲೇಖನದಲ್ಲಿ, ಚಿ.ಉದಯಶಂಕರ್ ಲೇಖನಲ್ಲಿ, ಅಷ್ಟೇ ಅಲ್ಲದೇ ಸ್ವತಃ ಆಪರೇಷನ್ ಡೈಮಂಡ್ ರಾಕೆಟ್ ಅನ್ನುವ ಲೇಖನದಲ್ಲೇ ತಪ್ಪುಗಳಾಗಿಬಿಟ್ಟಿದ್ದವು. ಅವೆಲ್ಲವನ್ನೂ ಈಗಷ್ಟೆ ಸರಿಪಡಿಸಿದೆ.

ಇನ್ನೂ ಹಲವಾರು ಅಂತರ್ಜಾಲ ತಾಣಗಳು, ಬ್ಲಾಗ್ ಪುಟಗಳು, ಪುಸ್ತಕಗಳು ಇತ್ಯಾದಿಯಾಗಿ ಜನಮನದಲ್ಲಿ ಇದೊಂದು ತಪ್ಪು ಪದ ನುಸುಳಿಬಿಟ್ಟಿದೆ. ಹಾಗೆಂದು ಎಲ್ಲರೂ ತಪ್ಪಾಗೇ ಬಳಸುತ್ತಿದ್ದಾರೆ ಎಂದರ್ಥವಲ್ಲ. ಸರಿಯಾದ ಪದಪ್ರಯೋಗ ಮಾಡುತ್ತಿರುವವರೂ ಬಹಳಷ್ಟು ಜನರಿದ್ದಾರೆ. ಸರಿಯಾದ ಪ್ರಯೋಗದ ಬಗ್ಗೆ ಒಬ್ಬರಿಂದ ಒಬ್ಬರಿಗೆ ತಿಳಿಯಬೇಕಷ್ಟೆ. ಸ್ವತಃ ನಾನೇ ಚಿಕ್ಕಂದಿನಿಂದ ಇಲ್ಲಿಯವರೆಗೂ ಇದನ್ನು 'ರಾಕೆಟ್' ಎಂದೇ ಅಂದುಕೊಂಡಿದ್ದೆ. ಇದೀಗ ನಿಖರವಾದ ಮಾಹಿತಿಯೊಂದಗೆ, ಸತ್ಯವಾವುದು, ಮಿಥ್ಯವಾವುದು ಎಂದು ತಿಳಿಯಿತು. ಇದು ನಿಮಗೂ ಅನ್ವಯಿಸಿದರೆ, ಈ ಲೇಖನ ಸಾರ್ಥಕ, ಹಾಗೆಯೇ ನಿಮಗೆ ತಿಳಿದವರಿಗೂ ಸರಿಪಡಿಸಿಕೊಳ್ಳಲು ಹೇಳಿ.



ಮುಗಿಸುವ ಮುನ್ನ:
ಈ ಚಿತ್ರದ ಸರಿಯಾದ ಹೆಸರನ್ನು ಮೊದಲ ಬಾರಿಗೆ, ಕನ್ನಡ ಆಡಿಯೋ ಫೋರಮ್ಮಿನಲ್ಲಿ ನನಗೆ ತಿಳಿಸ್ಕೊಟ್ಟ ಭೂತಕ್ಕೆ ನನ್ನ ಧನ್ಯವಾದಗಳು. :)

- ಮನ
Link

Wednesday, July 19, 2006

 

ಜಿನಾಡೇನ್ ಜಿಡಾನ್ ಸಾಹಸ - ವಿವಿಧ ದೃಷ್ಟಿಕೋನಗಳು

ಮುನ್ನುಡಿ:
ಸುಮಾರು ಒಂದು ತಿಂಗಳಕಾಲ ಪ್ರಪಂಚದಾದ್ಯಂತ ಕಾತುರದಿಂದ ನೋಡಿದ, ಅನುಭವಿಸಿದ ಫುಟ್ ಬಾಲ್ ಆಟ ಅಂತಿಮ ಪಂದ್ಯದಲ್ಲಿನ ಕೆಲವು ರೋಚಕ ಕ್ಷಣಗಳೊಂದಿಗೆ 'ಮನ'ಸೆಳೆಯಿತು.
ಅತ್ಯಂತ ರೋಚಕ ದೃಶ್ಯವೊಂದನ್ನು ಅವರವರ ಮೂಗಿನ ನೇರಕ್ಕೆ ಹೇಗೆ ನೋಡುತ್ತಾರೆ ಎಂಬುದಕ್ಕೆ ಅದ್ಭುತವಾತ ಸೃಜನಶೀಲತೆಯಿಂದ ಯಾರೋ ತಯಾರಿಸಿರುವ ಈ ದೃಶ್ಯಾವಳಿಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಈ ದೃಶ್ಯಗಳನ್ನು ತಯಾರಿಸಿದ ವ್ಯಕ್ತಿಗೆ *ಟೋಪಿಗಳು ಕೆಳಗೆ*



ಜಿನಾಡೇನ್ ಜಿಡಾನ್ ಗುಮ್ಮಿದ ದೃಶ್ಯದ ಗಮ್ಮತ್ತು ಈ ಲೇಖನದ ಜೀವಾಳ.
ಇದರ ಬಗ್ಗೆ ಆಗಲೇ ಹಲವಾರು ಕಾರ್ಟೂನ್, ಜೋಕ್, ಬ್ಲಾಗುಗಳು ಬಂದಿವೆ.
ಉದಾ: ಹೆಚ್.ಪಿ.ಎನ್ ಅವರ ಈ ಬ್ಲಾಗು ಬಹಳ ಮಜವಾಗಿದೆ. :)

ಈಗ ದೃಶ್ಯಾವಳಿ ನೋಡೋಣ ಬನ್ನಿ.


ಜರ್ಮನ್ನರ ದೃಷ್ಟಿಕೋನದಲ್ಲಿ....




ಫ್ರೆಂಚರ ದೃಷ್ಟಿಕೋನದಲ್ಲಿ.....




ಇಟಲಿಯನ್ನರ ದೃಷ್ಟಿಕೋನದಲ್ಲಿ.....





ಕಾಶ್ಮೀರದ ಜನತೆಯ ದೃಷ್ಟಿಕೋನದಲ್ಲಿ.....




ಥ್ರಿಲ್ಲರ್ ಮಂಜು ದೃಷ್ಟಿಕೋನದಲ್ಲಿ.....





ಮುಗಿಸುವ ಮುನ್ನ:

ಇದರಲ್ಲಿ ಪೂರ್ವಾಗ್ರಹಗಳೊಂದಿಗೆ ಮೂಗಿನ ನೇರಕ್ಕೆ ನೋಡಿದ ದೃಷ್ಟಿಕೋನಗಳು(POV) ಯಾವು ಯಾವು? ವಸ್ತುನಿಷ್ಠ ದಷ್ಟಿಕೋನ (ನ್ಯೂಟ್ರಲ್ ಪಿಓವಿ) ಯಾವುದು? ನೀವೆ ನಿರ್ಧರಿಸಿ. ಜಿನಾಡೇನ್ ಜಿಡಾನ್ ಗೊಂದು ಹಸನ್ಮುಖದ ವಿದಾಯ. :)

~ ಮನ

Link

Sunday, July 16, 2006

 

Firefox ಬ್ರೌಸರಿನಲ್ಲಿ ಕನ್ನಡ ಬ್ಲಾಗಿನ ಸಮಸ್ಯೆ - ಪರಿಹಾರ

ಮುನ್ನುಡಿ:
Blogspot.com ಡೊಮೈನಿನಲ್ಲಿರುವ ಬಹುತೇಕ ಕನ್ನಡ ಬ್ಲಾಗ್‍ಗಳ ಶೀರ್ಷಿಕೆಗಳು ಮತ್ತು ಅಲ್ಲಿನ ಲೇಖನಗಳ ಶೀರ್ಷಿಕೆಗಳು ಫೈರ್‍ಫಾಕ್ಸ್ ಬ್ರೌಸರಿನಲ್ಲಿ ವಿಕೃತವಾಗಿ ಕಾಣುವುದನ್ನು ಸಿಸ್ಯ ಅವರು ಮನ'ದ ಗಮನಕ್ಕೆ ತಂದರು. ಈ ಸಮಸ್ಯೆಯ ಬಗ್ಗೆ ಒಂದು ನೋಟ ಮತ್ತು ಪರಿಹಾರದ ಪ್ರಯತ್ನ ಈ ಲೇಖನದ ಉದ್ದೇಶ.


ಈ ಚಿತ್ರವನ್ನು ಗಮನಿಸಿ.

ನನ್ನ ಬ್ಲಾಗಿನ ಮುಖ್ಯಪುಟ ಫೈರ್‍ಫಾಕ್ಸ್ ಬ್ರೌಸರಿನಲ್ಲಿ ಹೀಗೆ ಕಾಣುತ್ತಿತ್ತು. ಇದನ್ನು ದಿನವೂ ನೋಡುತ್ತಿದ್ದೆನಾದರೂ, InternetExplorer ನಲ್ಲಿ ಸರಿಯಾಗಿ ಕಾಣುತ್ತಿದ್ದುದರಿಂದ, ಇದು "ನನ್ ಕಂಪ್ಯೂಟರ್‍ನ firefoxನಲ್ಲೇ ಏನೋ ಪ್ರಾಬ್ಲಂ ಇರ್ಬೇಕು" ಎಂದು ಉದಾಸೀನ ಮಾಡಿ ಸುಮ್ಮನಾಗಿದ್ದೆ. ಆದರೆ ಇದು ನನ್ನೊಬ್ಬನ ಬ್ಲಾಗಿನ ಸಮಸ್ಯೆಯಲ್ಲ, ಕನ್ನಡದ ಬಹುತೇಕ ಬ್ಲಾಗುಗಳಿಗೆ ಕಾಡುತ್ತಿರುವ ಫೈರ್‍ಫಾಕ್ಸ್ ಪಿಡುಗು ಎಂದು ನನಗೆ ಮನದಟ್ಟು ಮಾಡಿಕೊಟ್ಟವರು ಫೈರ್‍ಫಾಕ್ಸ್ ಕಟ್ಟಾಭಿಮಾನಿಯಾದ ಸಿಸ್ಯ.

ಈಗ ಈ ಕೆಲವು ಕನ್ನಡ ಬ್ಲಾಗುಗಳನ್ನು ಗಮನಿಸಿ.
ಸುಸಂಕೃತರ ಅವಲೋಕನ: susheelsandeepmurali.blogspot.com

ಭೂತದ ಕಾವ್ಯ ಸುಧೆ: kaavyasudhe.blogspot.com

ಮಂಜೇಗೌಡರ ಸಕಲ ಶರಣಾರ್ಥಿಗಳು: sakala.blogspot.com


ಶ್ರೀಮಾತಾ ಅವರ ಹೀಗೆ ಸುಮ್ನೆ: heegesummne.blogspot.com


ಶಿವಶಂಕರ್ ಅವರ 'ಪಾತರಗಿತ್ತಿ ಪಕ್ಕ': chittey.blogspot.com

ಪಚ್ಚಿ + ಸುಸ್ ಕಾಂಬೋ ಕನ್ನಡಕಸ್ತೂರಿ: kannadakastoori.blogspot.com


ಓಲೆಗರಿ: olegari.blogspot.com


ಮನಸ್ವಿನಿ-ಮನ: manaswini-mana.blogspot.com



ಸಾಕಲ್ಲವೇ ಸಧ್ಯಕ್ಕೆ, ಇಷ್ಟು ಬ್ಲಾಗುಗಳು? ಮೇಲೆ ಹಾಕಿರುವ ಚಿತ್ರಗಳ ಮೂಲಕ, ಈ ಬ್ಲಾಗುಗಳಲ್ಲಿನ ಹೆಸರಿನ display ಸಮಸ್ಯೆಯ ಅರಿವು ನಿಮಗಾಯಿತಲ್ಲವೇ?

ಸಮಸ್ಯೆಗೆ ಕಾರಣ:
ಈ ಸಮಸ್ಯೆಗೆ ಮೂಲಕಾರಣ ಅಕ್ಷರಗಳ ಸ್ಪೇಸಿಂಗ್ ("letter-spacing").
ಸ್ಪೇಸಿಂಗ್ ಅಂದರೆ, ಒಂದು ಅಕ್ಷರಕ್ಕೂ ಮುಂದಿನ ಅಕ್ಷರಕ್ಕೂ ನಡುವೆ ಎಷ್ಟು ಜಾಗಬಿಡಬೇಕು ಎನ್ನುವ ನಿಯಮ ಅಥವಾ ಸೌಲಭ್ಯವೆಂದುಕೊಳ್ಳಿ.
MS Word ತಂತ್ರಾಂಶದಲ್ಲಿ ಟೈಪ್ ಮಾಡಿ ಅನುಭವವಿರುವವರಿಗೆ ಇದು ಹೊಸತೇನಲ್ಲ. left alignment, right alignment, letter spacing ಇತ್ಯಾದಿಯಾಗಿ ವಿಧವಿಧವಾದ ಸೌಲಭ್ಯಗಳು ಸಾಮಾನ್ಯವಾಗಿ ಎಲ್ಲಾ ವರ್ಡ್ ಪ್ರೋಸೆಸಿಂಗ್ ತಂತ್ರಾಂಶಗಳಲ್ಲಿರುತ್ತವೆ.
ಆದರೆ firefoxನಲ್ಲಿ ಮಾತ್ರ, ಕನ್ನಡದ ಅಕ್ಷರಗಳ ಸ್ಪೇಸಿಂಗ್ ನಲ್ಲಿ ಲೋಪವಿದೆ. ಲೋಪವೇನೆಂದರೆ, ಅಕ್ಷರದಲ್ಲಿನ ಒತ್ತು, ದೀರ್ಘ, ತಲೆಕಟ್ಟು, ಕೊಂಬು, ಅರ್ಕಾವತ್ತು ಇವೆಲ್ಲವನ್ನೂ ಪ್ರತ್ಯೇಕ ಅಕ್ಷರಗಳೆಂದು firefox ಭಾವಿಸುತ್ತದೆ. ಹಾಗಾಗಿ, ಒಂದೊಂದನ್ನೂ ಬಿಡಿಬಿಡಿಯಾಗಿ diplay ಮಾಡಲು ಪ್ರಯತ್ನಿಸುತ್ತದೆ. ಕಾಗುಣಿತವಿಲ್ಲದ, ಬಿಡಿ ಅಕ್ಷರಗಳನ್ನು ಮಾತ್ರ ಉಪಯೋಗಿಸಿ ನೋಡಿ. ಆಗ ಈ ಸಮಸ್ಯೆ ಇರುವುದಿಲ್ಲ. ಉದಾಹರಣೆಗೆ, ಮನ, ಜನ, ಸದನ, ಮದನ, ರಚನ, ಪದ, ಅಗಲ, ಅಚಲ ಇತ್ಯಾದಿ ಪದಗಳು.
ಗುಣಿತಾಕ್ಷರಗಳಲ್ಲಿ ಆದರೆ, ಒಂದು ಅಕ್ಷರವು ಒಂದಕ್ಕಿಂತ ಹೆಚ್ಚಿನ glyphನಿಂದ ತಯಾರಾಗುತ್ತದೆ. glyph ಅಂದರೆ ಮೇಲೆ ಹೇಳಿದ ಕೊಂಬು, ದೀರ್ಘ ಇತ್ಯಾದಿ. Firefox ಲೆಟರ್-ಸ್ಪೇಸಿಂಗನಲ್ಲಿನ ದೋಷವೆಂದರೆ, ಒಂದೊಂದು glyph ಅನ್ನೂ ಒಂದೊಂದು ಅಕ್ಷರವೆಂದು ಅದು ಅಪಾರ್ಥ ಮಾಡಿಕೊಳ್ಳುವುದು.
ಬರಹ ಕನ್ನಡ ಫಾಂಟಿನಲ್ಲಿನ ಎಲ್ಲಾ glyph ಗಳ ಪಟ್ಟಿಗಾಗಿ ಇಲ್ಲಿ ನೋಡಬಹುದು: http://www.baraha.com/web_docs/glyph_codes_kan.htm


ಈಗ ಪರಿಹಾರದ ಕಡೆಗೆ ಗಮನ ಹರಿಸೋಣ.
ಲೆಟರ್ ಸ್ಪೇಸಿಂಗ್ ಬಗ್ಗೆ ನಿಮ್ಮ ಬ್ಲಾಗ್ ಟೆಂಪ್ಲೇಟಿನಲ್ಲಿರುವ ಸಾಲನ್ನು ತೆಗೆದು ಹಾಕಿ ಅಥವ ಕಾಮೆಂಟ್ ಮಾಡುವ ಮೂಲಕ ಅನೂರ್ಜಿತಗೊಳಿಸಿ.
ಬ್ಲಾಗಿನ ಹೆಸರಲ್ಲಿ display ಸಮಸ್ಯೆ ಇದ್ದರೆ,
h1 header style definition ನಲ್ಲಿ ಈ ಸಾಲು ಇರುತ್ತದೆ. ಅಷ್ಟನ್ನು ಮಾತ್ರ ತೆಗೆದು ಹಾಕಿ.
letter-spacing:-2px;

ಲೇಖನದ ಹೆಸರಲ್ಲಿ display ಸಮಸ್ಯೆ ಇದ್ದರೆ, ಇದು h2 style defintion ನಲ್ಲಿ ಇರುವ ಸಾಧ್ಯತೆಗಳಿರುತ್ತವೆ. ನಿಮ್ಮ ಟೆಂಪ್ಲೇಟ್ ಕೋಡ್ ನೋಡಿ, ಎಲ್ಲಿದೆ ಎಂದು ತಿಳಿಯಿರಿ.

ಉದಾಹರಣೆಗೆ: ನನ್ನ ಟೆಂಪ್ಲೇಟಿನಲ್ಲಿ ಮೊದಲು ಈ ಸಾಲು ಇತ್ತು.
h1{padding:25px 0px 10px 3%;border-top:double 3px #BF5C00;border-bottom:solid 1px #E89E47;color:#F5DEB3;letter-spacing:-2px;background:#FEA088;font:bold 300% Verdana,Sans-Serif;}

ಅದನ್ನು ಈಗ ಕೆಳಕಂಡ ರೀತಿಯಲ್ಲಿ ಬದಲಾಯಿಸಿದೆ ಅಷ್ಟೆ, letter-spacing ಕೋಡ್ ತೆಗೆಯುವ ಮೂಲಕ. ಸಮಸ್ಯೆ ಬಗೆಹರಿಯಿತು.
h1{padding:25px 0px 10px 3%;border-top:double 3px #BF5C00;border-bottom:solid 1px #E89E47;color:#F5DEB3;background:#FEA088;font:bold 300% Verdana,Sans-Serif;}

ಮುಗಿಸುವ ಮುನ್ನ:

ಈ ಸಮಸ್ಯೆಯು ನಿಮ್ಮ ಬ್ಲಾಗಿನಲ್ಲಿಯೇ ಇದ್ದಲ್ಲಿ, ಮೇಲೆ ತಿಳಿಸಿದ ಪರಿಹಾರವನ್ನು ಉಪಯೋಗಿಸಿ, ಸಮಸ್ಯೆ ಬಗೆಹರಿಸಿಕೊಳ್ಳಿ. ನಿಮಗೆ ತಿಳಿದವರ ಬ್ಲಾಗುಗಳಲ್ಲಿ ಈ ಸಮಸ್ಯೆ ಕಂಡು ಬಂದಲ್ಲಿ ಅವರಿಗೂ ತಿಳಿಸಿ, ಸರಿಪಡಿಸಲು ನೆರವಾಗಿ.
ಈ ಸಮಸ್ಯೆಯ ಅರಿವನ್ನು ಮಾಡಿಕೊಟ್ಟು, ಇದರ ಬಗ್ಗೆ ಬ್ಲಾಗಿಸಬೇಕೆಂದು ಪ್ರೇರೇಪಿಸಿದ ಸಿಸ್ಯ ಅವರಿಗೆ ಧನ್ಯವಾದಗಳು! :)

~ ಮನ

Link

Thursday, July 13, 2006

 

ಅಂತರ್ಜಾಲದಲ್ಲಿ ಕನ್ನಡ ದಿನಪತ್ರಿಕೆಗಳು


ಮುನ್ನುಡಿ:
'ಅಂತರ್ಜಾಲದಲ್ಲಿ ಕನ್ನಡ' ಕಳೆದ ಕೆಲವು ತಿಂಗಳುಗಳಿಂದ ಅತ್ಯಂತ ಕ್ಷಿಪ್ರವಾಗಿ ಬೆಳವಣಿಗೆ ಕಾಣುತ್ತಿರುವುದು ಸಂತಸದ ಸಂಗತಿ. ಕನ್ನಡದ ಅಂತರ್ಜಾಲದ ತಾಣಗಳು, ಚರ್ಚಾವೇದಿಕೆಗಳು, ಕನ್ನಡದಲ್ಲಿಯೇ ಈಮೈಲ್, ಯಾಹೂ/ಗೂಗಲ್ ಮೆಸೆಂಜರ್‍ಗಳಲ್ಲಿ ಕನ್ನಡದಲ್ಲಿಯೇ ಮಾತುಕತೆ, ಮತ್ತು ಇವೆಲ್ಲದಕ್ಕೂ ಮಿಗಿಲಾಗಿ ದಿನೇ ದಿನೇ ಹೆಚ್ಚುತ್ತಿರುವ ಕನ್ನಡ ಬ್ಲಾಗ್‍ಗಳು, ಇತ್ಯಾದಿ ನಿಜಕ್ಕೂ ಒಂದು ಆಶಾದಾಯಕ ಬೆಳವಣಿಗೆ ಕನ್ನಡ/ಕರ್ನಾಟಕ/ಕನ್ನಡಿಗರ ಪಾಲಿಗೆ. ಈ ಸಾಲಿಗೆ ಸೇರಿದ, ಸೇರುತಿರುವ ಇನ್ನೊಂದು ವರ್ಗವೆಂದರೆ, ಮುದ್ರಿತ ಅವತರಿಣಿಕೆಯನ್ನೇ("printed version") ಅಂತರ್ಜಾಲದಲ್ಲೂ ಲಭ್ಯಗೊಳಿಸುತ್ತಿರುವ ದಿನಪತ್ರಿಕೆಗಳು. ಕನ್ನಡದ ಎಲ್ಲಾ ಪ್ರಮುಖ ದಿನಪತ್ರಿಕೆಗಳ ಕಡೆಗೊಮ್ಮೆ ನೋಟವ ಬೀರೋಣ ಬನ್ನಿ.


ಬೆಳ್ಳಂಬೆಳಗ್ಗೆ ಎದ್ದು, ಬಿಸಿಬಿಸಿ ಕಾಫಿ ಕುಡಿಯುತ್ತಾ ದಿನಪತ್ರಿಕೆ ಓದುವುದರಲ್ಲಿನ ಅನುಭವದ ರೋಚಕತೆ, ತನ್ಮಯತೆ, ಬೇರಾವುದೇ ರೀತಿಯಲ್ಲಿ ಓದಿದಾಗ ಇರುವುದಿಲ್ಲ. ಮುದ್ರಣ ಮಾಧ್ಯಮದ ಗಮ್ಮತ್ತಿರುವುದೇ ಅಲ್ಲಿ.
ಅದಿರಲಿ. ಅಂತರ್ಜಾಲವಾಸಿಗಳಿಗೆ, ಮುದ್ರಿತ ದಿನಪತ್ರಿಕೆಗಳ ಸುಳಿವೂ ಇಲ್ಲದಂತಾಗಿತ್ತು. ಅಂತರ್ಜಾಲ ಆವೃತ್ತಿಯಲ್ಲಿ ಲೇಖನಗಳು ಸಿಗುತ್ತಿದ್ದವೆಯೇ ಹೊರತು, ಪತ್ರಿಕೆಯ ಪುಟ ತಿರುವಿಹಾಕಿದ ಅನುಭವವಾಗುತ್ತಿರಲಿಲ್ಲ, ಒಂದು ಪುಟವೂ ಬಿಡದೆ ಓದುವವರಿಗಂತೂ ಏನೇನೂ ಸಿಗುತ್ತಿಲ್ಲವೇನೋ ಎಂಬ ಅನುಭವ. ಆದರೆ, ಈಗ ಹಾಗಿಲ್ಲ.
ಕನ್ನಡದ ಪ್ರಮುಖ ದಿನಪತ್ರಿಕೆಗಳು ಈಗ ಮುದ್ರಿತ ಅವತರಿಣಿಕೆಯನ್ನೇ ಅಂತರ್ಜಾಲದಲ್ಲಿಯೂ ಲಭ್ಯವಾಗಿಸುತ್ತಿವೆ. ಮನೆಯಲ್ಲಿರುವವರು ದಿನಪತ್ರಿಕೆ ಕೈಲಿ ಹಿಡಿದು ಏನೇನು ಓದುತ್ತಾರೋ, ಅವೆಲ್ಲವನ್ನೂ ಈಗ ನಾವು ನೀವೆಲ್ಲರೂ ಓದಬಹುದು.

ಕನ್ನಡ ಪ್ರಭ
ಅಂತರ್ಜಾಲ ಆವೃತ್ತಿ: http://www.kannadaprabha.com
ಮುದ್ರಿತ ಅವತರಿಣಿಕೆಯ ಅಂತರ್ಜಾಲ ತಾಣ: http://www.kannadaprabha.com/pdf




ಪ್ರಜಾವಾಣಿ
ಅಂತರ್ಜಾಲ ಆವೃತ್ತಿ: http://www.prajavani.net
ಮುದ್ರಿತ ಅವತರಿಣಿಕೆಯ ಅಂತರ್ಜಾಲ ತಾಣ: http://www.prajavaniepaper.com




ವಿಜಯ ಕರ್ನಾಟಕ
ಮುದ್ರಿತ ಅವತರಿಣಿಕೆಯ ಅಂತರ್ಜಾಲ ತಾಣ: http://www.vijaykarnatakaepaper.com




ಸಂಯುಕ್ತ ಕರ್ನಾಟಕ
ಮುದ್ರಿತ ಅವತರಿಣಿಕೆಯ ಅಂತರ್ಜಾಲ ತಾಣ: http://www.samyukthakarnataka.com




ಉದಯವಾಣಿ
ಮುದ್ರಿತ ಅವತರಿಣಿಕೆಯ ಅಂತರ್ಜಾಲ ತಾಣ: http://www.pressdisplay.com
ಇದರಲ್ಲಿ, "Lauguages" ಮೆನುವಿನಲ್ಲಿ, ಕನ್ನಡ ಆಯ್ಕೆಮಾಡಿಕೊಳ್ಳಿ. ಆಗ 'ಉದಯವಾಣಿ' ಕಾಣಿಸುತ್ತದೆ.




ಸಂಜೆವಾಣಿ
ಅಂತರ್ಜಾಲ ಆವೃತ್ತಿ: http://www.sanjevani.com
ಮುದ್ರಿತ ಅವತರಿಣಿಕೆಯ ಅಂತರ್ಜಾಲ ತಾಣ: http://www.sanjevani.com/e_paper/e_paper.htm




ಈ ಸಂಜೆ
ಅಂತರ್ಜಾಲ ಆವೃತ್ತಿ: http://www.eesanje.com
ಈ ಪತ್ರಿಕೆಯ ಮುದ್ರಿತ ಅವತರಿಣಿಕೆಯು ಅಂತರ್ಜಾಲದಲ್ಲಿ ಇನ್ನೂ ಲಭ್ಯವಿಲ್ಲವೆಂದು ಕೇಳಿದ್ದೇನೆ. ಆದಷ್ಟು ಶೀಘ್ರದಲ್ಲಿಯೇ ಬರಲಿ ಎಂದು ಹಾರೈಸೋಣ.




ಮುಗಿಸುವ ಮುನ್ನ:
ಮೇಲ್ಕಂಡ ಸಂಪರ್ಕಗಳು ಬದಲಾವಣೆಗೊಳ್ಳುವ ಸಾಧ್ಯತೆಗಳು ಇಲ್ಲದಿಲ್ಲ. ಹಾಗೇನಾದರು ಆಗಿ, ಮೇಲಿನ ಸಂಪರ್ಕಗಳು ಕೆಲಸ ಮಾಡದಿರುವುದು ನಿಮ್ಮ ಗಮನಕ್ಕೆ ಬಂದಲ್ಲಿ ದಯವಿಟ್ಟು ತಿಳಿಸಿ. ಹಾಗೆಯೇ, ಕನ್ನಡದ ಇನ್ನಿತರ ಪ್ರಮುಖ ದಿನಪತ್ರಿಕೆಗಳಾವುದಾದರೂ ಇದ್ದು, ಅದರ ಅಂತರ್ಜಾಲ ಆವೃತ್ತಿಯು ಲಭ್ಯವಿದ್ದಲ್ಲಿ, ತಿಳಿಸಿ.

- ಮನ

Link

Friday, July 07, 2006

 

ಮೋಹಿನಿ....ಮೋಹಿನಿ!!

ಮುನ್ನುಡಿ:
ಸುಮಾರು ಒಂದು ವಾರದಿಂದ ಈ ಮೋಹಿನಿಯು 'ಮನ'ಕಾಡುತ್ತಿದ್ದಾಳೆ. ಬಹುದಿನಗಳ ನಂತರ ಹಂಸಲೇಖ ಅವರ ಸಂಗೀತ, ಸಾಹಿತ್ಯದಲ್ಲಿ ಬಂದಂತಹ ಸುಂದರವಾದ ಹಾಡು. ಇವತ್ತೇನೋ ಈ ಹಾಡು ಟೈಪ್ ಮಾಡಲೇಬೇಕು ಅಂತ ಪ್ರೇರಣೆಯಾಯಿತು. ಈಗ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.


ಚಿತ್ರ: ಮೋಹಿನಿ ೯೮೮೬೭೮೮೮೮೮
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಗಾಯನ: ಅನುರಾಧ ಶ್ರೀರಾಂ

ಮೋಹಿನಿ
ಮೋಹಿನಿ
ಮೋಹಿನಿ
ಮೋಹಿನಿ

ಮೋಹಿನಿ ಮೋಹಿನಿ.......
ಹೃದಯವಾ ನಡೆಸುವಾ ಬೆಚ್ಚನೇ ಗಾಳಿಯೀ ಮೋಹಿನಿ
ಪನಿರಿ ಸರಿಸರಿಸ ಸಗಪ ಮಪಮಪಮ
ಸಂಗೀತ ಹೊಮ್ಮಿಸೋ ಸನ್ಮೋಹಿನಿ
ಮೋಹಿನಿ ಮೋಹಿನಿ
ಮೋಹಿನಿ ಸನ್ಮೋಹಿನಿ

ಮೋಹಿನಿ ಮೋಹಿನಿ
ಹೃದಯವಾ ನಡೆಸುವಾ ಬೆಚ್ಚನೆ ಗಾಳಿಯೀ ಮೋಹಿನಿ
ಪನಿರಿ ಸನಿಸರಿಸ ಸಗಪ ಮಪಮಪಮ
ಸಂಗೀತ ಹೊಮ್ಮಿಸೋ ಸನ್ಮೋಹಿನಿ

ಬೇಸರದ ರಾತ್ರಿಗೆ ನನ್ನನ್ನು ನೆನೆಯಿರಿ
ಸೋತ ನಿಮ್ಮ ಪ್ರೀತಿಯ ಕಥೆಗಳಾ ಹೇಳಿರಿ
ನನ್ನ ಕಥೆ ಹೇಳುವೆ
ನಿಮ್ಮ ವ್ಯಥೆ ಮರೆಸುವೆ
ನೀವೆಂದು ಕಾಣದಂಥ ಹೃದಯಲೋಕ ತೋರುವೆ
ಎಲ್ಲಾ ಭಗ್ನಪ್ರೇಮಿಗಳೆ ಏಳಿ
ನನ್ನ ನೆರಳಿನ ಸಂಗ ಹಾಡಿ
ನೊಂದ ಎಲ್ಲಾ ವಿರಹಿಗಳೇ ಕೇಳಿ
ನನ್ನ ಹೃದಯದ ಹಾಡ ಹಾಡಿ
ಅಲೆಯೋಣ ಎಲ್ಲಾರು ಪ್ರೀತಿಗೆ
ಬನ್ನಿ ಬನ್ನಿ ಅರ್ಧ ಪ್ರಾಣ ತನ್ನೀ.........!

ಮೋಹಿನಿ ಮೋಹಿನಿ
ಹೃದಯವಾ ನಡೆಸುವಾ ಬೆಚ್ಚನೇ ಗಾಳಿಯೀ ಮೋಹಿನಿ
ಪನಿರಿ ಸರಿಸರಿಸ ಸಗಪ ಮಪಮಪಮ
ಸಂಗೀತ ಹೊಮ್ಮಿಸೋ ಸನ್ಮೋಹಿನಿ
ಮೋಹಿನಿ ಮೋಹಿನಿ
ಮೋಹಿನಿ ಸನ್ಮೋಹಿನಿ

ನನ್ನೆದೆ ನನ್ನೆದೆ
ಭಗಭಗ ಉರಿದಿದೇ
ಅದರಲೆ ಹೊತ್ತಿದ
ಬೆಂಕಿಯು ನಿನ್ನದೇ
ಗಾಳಿಗೂ ಬೆಂಕಿಗೂ
ಸಂಗ್ರಾಮ ಸಾಗಿದೆ
ಈ ಬೆಂಕಿ ಆರದಂತು ಜೀವದಾನ ಬೇಕಿದೆ

ಗಾಳಿ ನನಗೆ ಲೋಕಾನೆ ಊರು
ಗಾಳಿ ನನ್ನ ತಡೆಯೋರು ಯಾರು
ನಿನ್ನ ಬೆಂಕಿಯೇ ಬೆಳಕು ನನಗೆ
ನನ್ನ ಪ್ರೀತಿಯೇ ಅಂತ್ಯ ನಿನಗೆ
ಸವಿಯೋಣ ಸೌಂದರ್ಯ ಲಹರಿಯಾ
ತಾಳ ಮೇಳ ಪ್ರಳಯ ಅದರಾ ಆಳ........!

ಮೋಹಿನಿ ಮೋಹಿನಿ
ಹೃದಯವಾ ನಡೆಸುವಾ ಬೆಚ್ಚನೆ ಗಾಳಿಯೀ ಮೋಹಿನಿ
ಪರಿರಿ ಸರಿಸರಿಸ ಸಗಪ ಮಪಮಪಮ
ಸಂಗೀತ ಹೊಮ್ಮಿಸೋ ಸನ್ಮೋಹಿನಿ
ಮೋಹಿನಿ ಮೋಹಿನಿ
ಮೋಹಿನಿ ಸನ್ಮೋಹಿನಿ

ಮುಗಿಸುವ ಮುನ್ನ:
ಹಾಡನ್ನು ಕೇಳ್ತಾ ಕೇಳ್ತಾ ಅದರ ಸಾಹಿತ್ಯ ಟೈಪ್ ಮಾಡೋದು, ನನ್ನ ಹವ್ಯಾಸಗಳಲ್ಲೊಂದು. ಯಾರಿಗಾದರೂ ಯಾವುದಾದರೂ ಹಾಡಿನ ಸಾಹಿತ್ಯ ಬೇಕಿದ್ದರೆ, ದಯವಿಟ್ಟು ತಿಳಿಸಿ.
ಹಾಂ..ಕಡ್ಡಾಯವಾಗಿ ಕನ್ನಡ ಹಾಡುಗಳು ಮಾತ್ರ. :-)

~ ಮನ


Thursday, July 06, 2006

 

ಕನ್ನಡಪ್ರಭ ಲೇಖನಗಳ ಲಿಂಕ್ ಹಾಕುವಾಗ...

ಮುನ್ನುಡಿ:
ಮೊನ್ನೆಯಷ್ಟೆ ವಿಜಯಕರ್ನಾಟಕ ಪತ್ರಿಕೆಯ ಅಂತರ್ಜಾಲ ಆವೃತ್ತಿಯಲ್ಲಿನ 'ಅಚಾತುರ್ಯ'ದ ಬಗ್ಗೆ ಬರೆದದ್ದು ಸರಿಯಷ್ಟೆ. ಅದರ ಬೆನ್ನಲ್ಲೇ ಇನ್ನೊಂದು ಪತ್ರಿಕೆಯ ಅಂತರ್ಜಾಲ ಆವೃತ್ತಿಯ ಬಗ್ಗೆ ಬರೆಯಬೇಕಾಗಿ ಬಂದದ್ದು ಸೋಜಿಗ! ಆದರೆ ಈ ಬಾರಿ, ವಿಷಯ ನೆಮ್ಮದಿಗೆಡಿಸುವಂತದ್ದು ಅಲ್ಲ, ನೆಮ್ಮದಿ ತರುವಂತದ್ದು ಮತ್ತು ಬಹಳಷ್ಟು ಜನರಿಗೆ ಉಪಯುಕ್ತವಾಗುವಂತದ್ದು. ಈ ಲೇಖನದ ಕಾರಣಕರ್ತರು: ವಿಚಿತ್ರಾನ್ನದಾತ ಶ್ರೀವತ್ಸ ಜೋಶಿಯವರು. ಇಲ್ಲಿ ಹೇಳಹೊರಟಿರುವ ತಂತ್ರದ ಕಾಪಿರೈಟ್ ಕೂಡ ಅವರದೇ!


ಅಂತರ್ಜಾಲ ಒಂದು ಬಲುದೊಡ್ಡ ಸಂಸಾರ ಸಾಗರ. ಇಲ್ಲಿ ಬಹುತೇಕ ಎಲ್ಲ ತಾಣಗಳೂ ಇತರ ತಾಣಗಳಿಗೆ ನೆಂಟರು. ಆ ನೆಂಟಸ್ತಿಕೆಯ ಗಂಟು ಹಾಕುವುದು ಒಂದು 'ಹೈಪರ್ ಲಿಂಕ್' (ಅಥವಾ ಲಿಂಕ್, ಸಂಪರ್ಕ, ಕೊಂಡಿ ಇತ್ಯಾದಿ) ಎಂಬ ಮಧ್ಯವರ್ತಿ. ಒಂದು ತಾಣದಿಂದ ಇನ್ನೊಂದಕ್ಕೆ ಸುಲಭವಾಗಿ ನೆಗೆಯುವುದಕ್ಕೆ ಲಿಂಕುಗಳ ಪಾತ್ರ ಮಹತ್ತರವಾದುದು.
ಒಂದು ತಾಣದಲ್ಲಿನ ಲೇಖನವೊಂದರ ಲಿಂಕ್ ಅನ್ನು ನಾವು ಈಮೈಲ್ ಗಳಲ್ಲಿ, ನಮ್ಮದೇ ಆದ ತಾಣಗಳಲ್ಲಿ, ವಿಶ್ವಕೋಶದ ಪುಟಗಳಲ್ಲಿ, ಹೀಗೆ ಎಲ್ಲೆಡೆ ಉಪಯೋಗಿಸುತ್ತೇವೆ. ಆದರೆ ಹಾಗೆ ಉಪಯೋಗಿಸಿದ ಲಿಂಕು, ಕೆಲಸಮಯದ ನಂತರ ಕೆಲಸ ಮಾಡುತ್ತದೆಯೋ ಇಲ್ಲವೇ ಮುರಿದು ಬಿದ್ದಿದೆಯೋ ಎಂಬುದು ನಮ್ಮ ಗಮನಕ್ಕೆ ಬರುವುದು ಅಪರೂಪ, ನಾವು ಚೆಕ್ ಮಾಡುತ್ತಾ ಇರುವುದೂ ಕೂಡ ತ್ರಾಸದ ಕೆಲಸ. ಈ ರೀತಿ, ಕೆಲಸಕ್ಕೆ ಬಾರದ ಕೊಂಡಿಗಳನ್ನು(ಮುರಿದು ಬಿದ್ದ) ಸಾಮಾನ್ಯವಾಗಿ 'ಬ್ರೋಕನ್ ಲಿಂಕ್ಸ್' ಎನ್ನುವರು.

ಕನ್ನಡಪ್ರಭದ ಲೇಖನಗಳ ಕೊಂಡಿಗಳು, ಒಂದು ದಿನವಷ್ಟೇ(ಅಥವಾ ಸ್ವಲ್ಪ ಹೆಚ್ಚು) ಜೀವಂತವಾಗಿರುತ್ತದೆ. ನಂತರ ಅದನ್ನು ಉಪಯೋಗಿಸಿದರೆ, "Please select some other news or categories." ಎಂದು ಬರುತ್ತದೆ. ಅಂದರೆ, ಆ ಲಿಂಕು "ಬ್ರೋಕನ್ ಲಿಂಕ್" ಆಗಿದೆ ಎಂದರ್ಥ.

ಉದಾಹರಣೆಗೆ: ಬೇಡರಕಣ್ಣಪ್ಪ ಚಿತ್ರಕ್ಕೆ ರಾಜಕುಮಾರ್ ಆಯ್ಕೆ ವಿವರಗಳು - ಹೆಚ್.ಎಲ್.ಎನ್.ಸಿಂಹರವರ ಪುತ್ರ ಹೆಚ್.ಎಲ್.ಶೇಷಚಂದ್ರ ಲೇಖನ ಕನ್ನಡಪ್ರಭದಲ್ಲಿ, ಡಾ.ರಾಜ್ ಅಸ್ತಂಗತರಾದ ಮರುದಿನ ಪ್ರಕಟವಾಗಿತ್ತು. ಆ ಲೇಖನದ ಕೊಂಡಿ:

http://www.kannadaprabha.com/NewsItems.asp?ID=KP%2A20060412220146&Title=Dr%2E+Rajkumar+passed+away&lTitle=s%DB%2E+%C1%DBe%E9O%DA%DF%C8%DA%E1%DB%C1%E9+B%AC%84%C4%C7&Topic=0&Dist=0

ಈ ಲೇಖನವು ಕೆಲಸ ಮಾಡುತ್ತಿಲ್ಲ. ಇದನ್ನು ಡಾ.ರಾಜ್‍ಕುಮಾರ್ ವಿಕಿಪೀಡಿಯ ಲೇಖನದಲ್ಲಿ ಉಪಯೋಗಿಸಲಾಗಿತ್ತು. ಈ ಲೇಖನವು ಕೆಲಸ ಮಾಡುತ್ತಿಲ್ಲವಾದ್ದರಿಂದ ಇದರ ಲಿಂಕನ್ನು ತೆಗೆಯಬೇಕಾಗಿತ್ತು. ಆದರೆ ಈಗ ತೆಗೆಯುವ ಗೋಜಿಲ್ಲ! ಅದನ್ನು ಕೊಂಚ ಮಾರ್ಪಾಡು ಮಾಡಿದರೆ ಆಯಿತಷ್ಟೆ!
ಆ ಮಾರ್ಪಾಡುವಿಕೆಯ ಗುಟ್ಟನ್ನು ರಟ್ಟು ಮಾಡಿ ಪುಣ್ಯ ಕಟ್ಟಿಕೊಂಡವರು: ಶ್ರೀವತ್ಸ ಜೋಶಿ

ಮಾಡಬೇಕಾದ್ದು ಇಷ್ಟೇ:
೧. ಲಿಂಕಿನಲ್ಲಿ &Title= ಎಂದು ಇದೆಯಲ್ಲಾ ಅದು ಮತ್ತು ಅಲ್ಲಿಂದ ಮುಂದೆ ಇರುವುದನ್ನೆಲ್ಲಾ ಸಂಪೂರ್ಣವಾಗಿ ತೆಗೆದುಹಾಕಿ.
೨. NewsItems.asp ಅನ್ನುವುದನ್ನು News.asp ಎಂದು ಬದಲಾಯಿಸಿ.
ಬಹುಕಾಲ (ಬಹುಷ: ಚಿರಕಾಲ) ಜೀವಂತವಾಗಿ ಉಳಿಯುವ ಲಿಂಕ್ ಈಗ ನಿಮ್ಮ ಮುಂದೆ ಹಾಜರ್!

ಮೇಲಿನ ಎರಡು ಬದಲಾವಣೆ ಮಾಡಿದ ನಂತರ ದೊರಕಿದ ಕೊಂಡಿ: http://www.kannadaprabha.com/News.asp?ID=KP%2A20060412220146

ಈಗ ನೋಡಿ, ಈ ಸಜೀವ ಕೊಂಡಿ ಸರಿಯಾದ ಲೇಖನಕ್ಕೆ ನಿಮ್ಮನ್ನು ಕೊಂಡೊಯ್ಯುತ್ತದೆ.
ಇನ್ನು ಮುಂದೆ ಕನ್ನಡಪ್ರಭದ ಯಾವುದೇ ಕೊಂಡಿಗಳನ್ನು ನಿಮ್ಮ ತಾಣದಲ್ಲಿ ಹಾಕುವಾಗ, ಅಥವ ಇತರರೊಡನೆ ಹಂಚಿಕೊಳ್ಳುವಾಗ ಅದಕ್ಕೆ ಮಾಡಬೇಕಾದ ಮೇಕಪ್ (ಮೇಲೆ ವಿವರಿಸಿದಂತೆ) ಮಾಡಿ, ನಂತರ ಹಾಕಿ/ಹಂಚಿಕೊಳ್ಳಿ.

ಮುಗಿಸುವ ಮುನ್ನ:
ಈ ಉಪಯುಕ್ತ 'ಮಾಹಿತಿ','ತಂತ್ರ','ಜ್ಞಾನ'ವನ್ನು ನಮ್ಮೊಡನೆ ಹಂಚಿಕೊಂಡ ಶ್ರೀವತ್ಸ ಜೋಶಿಯವರಿಗೆ ಬಹಳ ಧನ್ಯವಾದಗಳು!

~ ಮನ

Link

Wednesday, July 05, 2006

 

F11 ಚಮಕ್ ಚಮಕ್ ಚಮಕ್ ಚಮಕ್

ಮುನ್ನುಡಿ:
Object Oriented Programingನಲ್ಲಿ ಒಂದು ಮುಖ್ಯವಾದ ಆಯಾಮ...."ಓವರ್‍ಲೋಡಿಂಗ್". ಅಂದರೇ ಓಂದೇ ಸೌಲಭ್ಯವನ್ನು ಸಮಯ,ಸಂದರ್ಭಕ್ಕೆ ತಕ್ಕಂತೆ, ವಿಧವಿಧವಾಗಿ ಉಪಯೋಗಿಸುವುದು. ಇಂಥಹದ್ದೊಂದು ಸೌಲಭ್ಯ ಇತ್ತೀಚೆಗೆ 'ಮನ'ಸೆಳೆಯಿತು. ಇದು ಹಲವರಿಗೆ ಈಗಾಗಲೇ ಗೊತ್ತಿರಬಹುದಾದರೂ, ಗೊತ್ತಿಲ್ಲದವರು ಪೇಚಾಡಿದ್ದಂತೂ ಕಣ್ಣಾರೆ ಕಂಡು, ಕಿವಿಯಾರೆ ಕೇಳಿದ್ದೇನೆ :). ಮಿಕ್ಕಿದ್ದು, ಮುಗಿಸುವ ಮುನ್ನ.


ನಾವೆಲ್ಲರೂ ದಿನನಿತ್ಯ ಬಳಸುವ ಒಂದು ವಸ್ತು ಅಂದರೆ ಕಂಪ್ಯೂಟರಿನ ಕೀಬೋರ್ಡು. ಈ ಕೀಬೋರ್ಡಿನ ಕೀಲಿಗಳಲ್ಲಿ ವಿಧವಿಧವಾದ ಶಾರ್ಟ್‍ಕಟ್‍ಗಳು, efficient navigation ತಂತ್ರಗಳು ಅಡಗಿವೆ. ನೆನ್ನೆಯಷ್ಟೆ ನನ್ನ ಸ್ನೇಹಿತರೊಬ್ಬರಿಂದ ಕಲಿತ ವಿಷಯ: Windows Key ಮತ್ತು Pause/Break Key ಎರಡನ್ನೂ ಒಟ್ಟಿಗೆ ಒತ್ತಿದರೆ 'System Properties' ಕಿಟಕಿ ಬರುತ್ತದೆ. System Properties window ಹೆಚ್ಚಾಗಿ ಉಪಯೋಗಿಸುವವರಿಗೆ ಈ ಶಾರ್ಟ್‍ಕಟ್ ಬಲು ಪ್ರಯೋಜನಕಾರಿ.
ನಿಲ್ಲಿ! ಇಲ್ಲಿ ನಾ ಹೇಳಲು ಹೊರಟಿರುವುದು F11 ಕೀಲಿಯ ಚಮತ್ಕಾರದ ಬಗ್ಗೆ.

ನನ್ನ ಗಮನಕ್ಕೆ ಬಂದಿರುವಂತೆ F11 ಕೀಲಿಯು ನಾಲ್ಕು ವಿವಿಧ ಸಂದರ್ಭಗಳಲ್ಲಿ ವಿವಿಧ ರೀತಿ ಕೆಲಸ ಮಾಡುವುದು.

೧. ಬರಹ ಡೈರೆಕ್ಟ್(ಅಥವಾ 'ಬರಹ ಐಎಂಇ') ಚಾಲನೆಯಲ್ಲಿದ್ದರೆ, F11 ಕೀಲಿಯ ಪ್ರಯೋಗ ಆಂಗ್ಲ ಮತ್ತು ಆಂಗ್ಲೇತರ (ಸಾಮಾನ್ಯವಾಗಿ ಕನ್ನಡ) ಭಾಷೆಗಳ ನಡುವೆ ಸ್ವಿಚ್ ಆಗುವಂತೆ ಮಾಡುವುದು.
ಬರಹ ಡೈರೆಕ್ಟ್ ಉಪಯೋಗಿಸಿ ಕನ್ನಡದಲ್ಲಿ ಟೈಪ್ ಮಾಡುವವರಿಗೆ ಇದು ಹೊಸತೇನಲ್ಲ.

ಈಗ ಬರಹ ಡೈರೆಕ್ಟ್ ಕ್ಲೋಸ್ ಮಾಡಿ ಆಯಿತು. ಅಂದರೆ, ಚಾಲನೆಯಲ್ಲಿಲ್ಲದಂತೆ ಮಾಡಿದೆವು ಎಂದಿಟ್ಟುಕೊಳ್ಳೋಣ.
೨. Internet Explorer browser window ಅಥವಾ Firefox browser window ಅಥವಾ Windows Explorer window (Folders explorer), ಇವು ಯಾವುದಾದರೊಂದು ಕಿಟಕಿ ಮೇಲೆ F11 ಕೀ ಒತ್ತಿ.
Full Screen ಕೆಲಸವನ್ನು ಮಾಡುವುದು ಈ F11 ಕೀ. ಮತ್ತೆ ಇನ್ನೊಮ್ಮೆ F11 ಒತ್ತಿದರೆ, ಕಿಟಕಿಗಳು ಮತ್ತೆ ಹಿಂದಿನಂತೆ ಮಾಮೂಲಿ ಸ್ಥಾನಕ್ಕೆ ಬರುವವು.

೩. ಈಗ ಸ್ವಲ್ಪ ಸಂಗೀತ ಕೇಳೋಣವೇ? ಸರಿ Real Player ಶುರುಹಚ್ಚಿದೆವು. ಸಂಗೀತ ಕೇಳಲು ಪ್ರಾರಂಭಿಸಿದೆವು. ಯಾರದೋ ಫೋನ್ ಬಂತು. ಈಗ ಮ್ಯೂಟ್ ಮಾಡಬೇಕು. ಹೇಗೆ? ಹಾಂಹಾಂ...ಮೌಸ್ ಮೊರೆಹೋಗುವ ಅವಶ್ಯಕತೆಯಿಲ್ಲ. F11 ಒತ್ತಿ ಅಷ್ಟೆ! ನಿಮ್ಮ ರಿಯಲ್ ಪ್ಲೇಯರಲ್ಲಿನ ಶಬ್ಧ ನಿಶಬ್ಧವಾಗುತ್ತದೆ. ಶಬ್ಧವು ಮರುಕಳಿಸಲು ಮತ್ತೊಮ್ಮೆ F11 ಒತ್ತಿ. :)

ಸರಿ, ಇವೆಲ್ಲಾ ಆಯಿತು. ಬೇರಾರಿಗೂ ತೊಂದರೆಯಾಗದಂತೆ F11 ಕೀಯನ್ನು ಉಪಯೋಗಿಸಿದೆವು. ಆದರೆ, ಈ ಕೀಲಿಯ ಚಮಕ್ ಇರುವುದೇ(ನನ್ನ ಅಭಿಪ್ರಾಯದಲ್ಲಿ), ಗೂಗಲ್ ಟಾಕ್ ಮೆಸ್ಸೆಂಜರಿನಲ್ಲಿ. ಸ್ನೇಹಿತರ ಜೊತೆ ಚಾಟ್ ಮಾಡುವಾಗ, ಇದ್ದಕ್ಕಿದ್ದ ಹಾಗೆ ಕರೆ ಬರುವುದೂ, ಇದ್ದಕ್ಕಿದ್ದ ಹಾಗೆ ಕರೆ ಹೋಗುವುದು ನಡೆಯಿತು. ಇದೇನಿದು ಆಶ್ಚರ್ಯ ಎಂದುಕೊಂಡಿದ್ದಾಯಿತು. ನಂತರ ತಿಳಿಯಿತು, ಇದು F11 ಮಹಾಶಯನ ಕೆಲಸ ಎಂದು!
ಅಂದರೆ....
೪. ಗೂಗಲ್ ಟಾಕ್ ನಲ್ಲಿ, ಕನ್ನಡ ಟೈಪ್ ಮಾಡಲು F11 ಉಪಯೋಗಿಸಿದಾಗ, ಬರಹ ಡೈರೆಕ್ಟ್ ಚಾಲನೆಯಲ್ಲಿದ್ದರೆ, ಕನ್ನಡ-ಆಂಗ್ಲ ಬದಲಾವಣೆ ಕೆಲಸ ಆಗುತ್ತದೆ. ಬರಹ ಡೈರೆಕ್ಟ್ ಚಾಲನೆಯಲ್ಲಿಲ್ಲದಿದ್ದರೆ, ಗೂಗಲ್ ಟಾಕಿನ ಯಾವ ಕಿಟಕಿಯ ಮೇಲೆ focus ಇರುತ್ತದೆಯೋ ಆ ಕಿಟಕಿಯಿಂದ ಕರೆಯು ಹೋಗುವುದು, ನಿಮ್ಮ ಸ್ನೇಹಿತರಿಗೆ!! ತಿಳಿಯಿತಲ್ಲಾ. ಮುಂದಿನ ಬಾರಿ ಅಕಸ್ಮಾತ್ ನಿಮ್ಮಿಂದ ಅನಿರೀಕ್ಷಿತ ಕರೆ(ಗೂಗಲ್ ಟಾಕ್‍ನಲ್ಲಿ) ಹೋದರೆ ಅಥವಾ ಬಂದರೆ, ಅದಕ್ಕೆ ಕಾರಣ "ಬರಹ ಡೈರೆಕ್ಟ್ ಆನ್ ಆಗಿದೆ" ಎಂದುಕೊಂಡು F11 ಕೀಲಿಯನ್ನು ಒತ್ತಿರುವುದು. :)

ಮುಗಿಸುವ ಮುನ್ನ:
F11 ಕೀಲಿಯ ವಿವಿಧ ಉಪಯೋಗಗಳನ್ನು ಪ್ರಯೋಗ ಮಾಡಿ ನೋಡಿ. ಇಲ್ಲಿ ಬರೆದಿರುವ ನಾಲ್ಕೂ ಉಪಯೋಗಗಳ ಜೊತೆಗೆ, ಬೇರೆ ಬೇರೆ ಅಪ್ಲಿಕೇಷನ್‍ಗಳಲ್ಲಿ ಬೇರೆ ರೀತಿಯ ಉಪಯೋಗ ಖಂಡಿತಾ ಇರಬಹುದು. ಆ ರೀತಿಯ ಉಪಯೋಗಗಳಲ್ಲಿ, ಕುತೂಹಲಕಾರಿಯಾದ ಅಥವ ಗಮನಾರ್ಹವಾದದ್ದೇನಾದರೂ ನಿಮ್ಮ ಅನುಭವಕ್ಕೆ ಬಂದಿದ್ದರೆ, ಅಥವ ಮುಂದೆ ಬಂದಲ್ಲಿ ದಯವಿಟ್ಟು ನನಗೂ ತಿಳಿಸಿ. :)

~ ಮನ


Monday, July 03, 2006

 

'ನಿರ್ಮಾತೃಗಳು'



ಮುನ್ನುಡಿ:

ಬಹಳ ದಿನಗಳಿಂದ ನೋಡದೇ ಬಾಕಿ ಉಳಿದಿದ್ದ 'ರಣಧೀರ ಕಂಠೀರವ' ಚಲನಚಿತ್ರವನ್ನು ನೋಡುವ ಸೌಭಾಗ್ಯ, ಕಳೆದ ವಾರ ಒದಗಿಬಂತು. ರಣಧೀರ ಕಂಠೀರವ ನರಸರಾಜರ ಜೀವನವನ್ನಾಧರಿಸಿದ ಈ ಐತಿಹಾಸಿಕ ಚಿತ್ರದಲ್ಲಿ, ಕಂಠೀರವನ ಪಾತ್ರ ನಿರ್ವಹಿಸಿರುವುದು ಕನ್ನಡದ ಕಂಠೀರವ ಸಾಕ್ಷಾತ್ ಡಾ.ರಾಜ್‍ಕುಮಾರ್! ಅದೇ ರಾಜ್‍ಕುಮಾರ್, ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನವನ್ನಿತ್ತು, ಕಂಠೀರವ ಸ್ಟೂಡಿಯೋದಲ್ಲಿನ ಮಣ್ಣಿನಲ್ಲಿ ಮಣ್ಣಾಗಿ ಹೋಗಿದ್ದು ವಿಪರ್ಯಾಸವಾದರೂ ಸತ್ಯ!

ಕನ್ನಡ ಚಿತ್ರರಂಗದ ಪಾಲಿಗೆ 'ರಣಧೀರ ಕಂಠೀರವ' ಚಿತ್ರ ವಿಶಿಷ್ಟವಾದುದು. ಕಾರಣ, ಅದನ್ನು ತಯಾರಿಸಿದ ಚಿತ್ರ ನಿರ್ಮಾಣ ಸಂಸ್ಥೆ ಮತ್ತು ಮುಖ್ಯವಾಗಿ ಅದರ 'ನಿರ್ಮಾತೃಗಳು'!



ಸುಮಾರು ೪೬ ವರ್ಷಗಳಷ್ಟು ಹಿಂದಕ್ಕೆ ಕೆಲಕಾಲ ಹೋಗಿ ಬರೋಣ.
ವರ್ಷ ೧೯೫೯-೬೦. ಕನ್ನಡದ ಚಿತ್ರೋದ್ಯಮ ಸಂಪೂರ್ಣವಾಗಿ ಮದರಾಸಿನಲ್ಲಿ(ಈಗಿನ ಚೆನ್ನೈ) ನೆಲೆಯೂರಿದೆ. ಕನ್ನಡದ ಕಲಾವಿದರು, ಸಹಕಲಾವಿದರು, ತಂತ್ರಜ್ಞರು ಸಂಕಷ್ಟದ ಸ್ಥಿತಿಯಲ್ಲಿದ್ದ ಕಾಲ. ಕನ್ನಡ ನಾಡಿನಲ್ಲಿ ಚಿತ್ರಗಳು ನಿರ್ಮಾಣವಾಗದೇ, ಇಲ್ಲಿಯವರಿಗೆ ಹೆಚ್ಚಿನ ಕೆಲಸಗಳು, ಅವಕಾಶಗಳು ಸಿಗುತ್ತಿಲ್ಲ. ಇದಕ್ಕೊಂದು ಪರಿಹಾರ ರೂಪಿಸಲೋಸುಗ ಒಂದು ಚಿಂತಕರ ಚಾವಡಿ ನಿರ್ಮಾಣಗೊಂಡಿತು.
ಚಾವಡಿಯಲ್ಲಿದ್ದ ಪ್ರಮುಖರು: ಜಿ.ವಿ.ಅಯ್ಯರ್, ರಾಜಕುಮಾರ್, ಬಾಲಕೃಷ್ಣ, ಮತ್ತು ನರಸಿಂಹರಾಜು.
ಅಬ್ಬಬ್ಬಾ! ಒಬ್ಬಬ್ಬರೂ ಒಂದೊಂದು ಕಲಾಶಿಖರಗಳು. ಕಲೆಯನ್ನು, ಅದರಲ್ಲಿಯೂ ಅಭಿನಯದ ಕಲೆಯನ್ನು ಅರೆದು ಕುಡಿದವರು.
ಅಭಿನಯದೊಂದಿಗೆ ಸಾಹಿತ್ಯ ರಚನೆಯನ್ನೂ, ನಿರ್ದೇಶನವನ್ನೂ, ಮತ್ತು ಕೊನೆಗೆ ಚಿತ್ರನಿರ್ಮಾಣವನ್ನೂ ಕರಗತವಾಗಿಸಿಕೊಂಡವರು ಜಿ.ವಿ.ಅಯ್ಯರ್ ಅವರು.
ಹಾಸ್ಯ ಎಂದರೆ ನರಸಿಂಹರಾಜು, ನರಸಿಂಹರಾಜು ಎಂದರೆ ಹಾಸ್ಯ ಎನ್ನುವಷ್ಟರ ಮಟ್ಟಿಗೆ ತಮ್ಮ ಛಾಪನ್ನು ಮೂಡಿಸಿದವರು ಹಾಸ್ಯಬ್ರಹ್ಮ ನರಸಿಂಹರಾಜು. ಹುಟ್ಟಿನಿಂದಲೇ ಅಸ್ವಸ್ಥ ಕಿವಿಗಳನ್ನು ಹೊಂದಿದ್ದರೂ, ಕಿವುಡುತನವು ತನ್ನ ಅಭಿನಯ ಸಾಮರ್ಥ್ಯಕ್ಕೆ ಎಂದೂ ಅಡ್ಡಿಬರದಂತೆ ನೋಡಿಕೊಂಡು, ಅಪ್ಪನಾಗಿ, ಅಣ್ಣನಾಗಿ, ಖಳನಟರಾಗಿ, ಹಾಸ್ಯನಟರಾಗಿ ಸುಮಾರು ಐನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಕಲೆಯನ್ನು ಧಾರೆಯೆರೆದು, ಅಭಿಮಾನ್ ಸ್ಟೂಡಿಯೋವನ್ನು ಕಟ್ಟಿ, ಕನ್ನಡ ಚಿತ್ರರಂಗಕ್ಕಾಗಿಯೇ ತನ್ನ ಸರ್ವಸ್ವವನ್ನೂ ತೇಯ್ದವರು, ಕನ್ನಡ ಚಿತ್ರರಂಗದ ಅತ್ಯಂತ ಹಿರಿಯಣ್ಣರಲ್ಲಿ ಒಬ್ಬರಾದ ಕಲಾಭಿಮಾನಿ ಬಾಲಕೃಷ್ಣನವರು.
ಇನ್ನು ರಾಜಕುಮಾರ್ ಬಗ್ಗೆ ನಾನು ಬರೆದು ಹೇಳಬೇಕಾದ್ದು ಏನೇನೂ ಇಲ್ಲ. ಕನ್ನಡ ಭಾಷೆ, ಕನ್ನಡ ನಾಡು ಕಂಡ ಹೆಮ್ಮೆಯ ಸುಪುತ್ರ.

ಇವರೆಲ್ಲರೂ ಸೇರಿ 'ಕನ್ನಡ ಕಲಾವಿದರ ಸಂಘ'ವನ್ನು ಸ್ಥಾಪಿಸಿ, ರಾಜ್ಯಾದ್ಯಂತ ಪ್ರವಾಸ ಮಾಡಿ ಕನ್ನಡ ಚಿತ್ರೋದ್ಯಮ ನೆಲೆ ನಿಲ್ಲಲು, ಕಲಾವಿದರು ಬದುಕಲು ಮಾರ್ಗಗಳನ್ನು ಹುಡುಕಿದರು. ಇದೇ ಸಂಘವು ಚಿತ್ರನಿರ್ಮಾಣ ಸಂಸ್ಥೆಯಾಗಿ 'ರಣಧೀರ ಕಂಠೀರವ' ಚಿತ್ರವನ್ನು ನಿರ್ಮಿಸಿತು.
ಈ ಚಿತ್ರದಲ್ಲಿ, ಆರಂಭದಲ್ಲಿ ಹೆಸರುಗಳನ್ನು ತೋರಿಸುವಾಗ 'ಮನ'ದ ಮನ ಸೆಳೆದದ್ದು: 'ನಿರ್ಮಾತೃಗಳು'.

ಸಾಮಾನ್ಯವಾಗಿ ನಾವು ಚಿತ್ರವನ್ನು ನಿರ್ಮಿಸಿದವರ ಹೆಸರನ್ನು ನೋಡುವುದು "ನಿರ್ಮಾಪಕ(ರು)" ಅಥವಾ "ನಿರ್ಮಾಪಕಿ(ಯರು)" ಎಂದು.
ಆದರೆ ಈ ಚಿತ್ರದ ವೈಶಿಷ್ಟ್ಯವೆಂದರೆ, ಇದರಲ್ಲಿ producers ಹೆಸರುಗಳನ್ನು ತೋರಿಸುವುದು 'ನಿರ್ಮಾತೃಗಳು' ಎಂದು!
'ಮಾತೃ' ಎಂದರೇ 'ತಾಯಿ' ಅಂದರೆ ಜನ್ಮದಾತೆ ಎಂದರ್ಥ. ಇಲ್ಲಿ ಚಲನಚಿತ್ರವೊಂದಕ್ಕೆ ಜನ್ಮವನ್ನಿತ್ತಿರುವ ಈ ಕಲಾಶಿಖರಗಳು, ಅದನ್ನು ಈ ರೀತಿ ಹೇಳಿದ್ದಾರೆ.

ಮುಗಿಸುವ ಮುನ್ನ:
ಸುಖದಲ್ಲಿರುವಾಗ ಎಲ್ಲರೂ ನೆಂಟರೇ
ಕಷ್ಟದಲ್ಲಿ, ದುಃಖದಲ್ಲಿರುವಾಗ ಎಲ್ಲರೂ ದೂರ

ಇದು ನಾವೆಲ್ಲರೂ ಗಮನಿಸಿರಬಹುದಾಂತಹ, ಒಂದು ಕಠೋರ ಸತ್ಯ. ಇದನ್ನು ಸುಳ್ಳೆಂದು ನಿರೂಪಿಸುವ ಘಟನೆಗಳು ಇಲ್ಲದಿಲ್ಲ. ಆ ವಿರಳವಾದ ಸಾಲಿಗೆ ಸೇರುವಂತಹದ್ದು ಈ ನಿರ್ಮಾತೃಗಳು ಮಾಡಿರುವ ಕೆಲಸ. ಕನ್ನಡ ಚಿತ್ರೋದ್ಯಮವು ಬೆಂಗಳೂರಿನ ಗಾಂಧಿನಗರದಲ್ಲಿ ತಳವೂರಲು ಈ ಕೆಲಸ ಬಹಳಷ್ಟು ಸಹಕಾರಿಯಾಯಿತು. ಮದರಾಸಿನ ಮೇಲೆ ಸಂಪೂರ್ಣವಾಗಿ ಅವಲಂಬನೆಯಾಗಿದ್ದ ಚಿತ್ರೋದ್ಯಮವು ತಾಯ್ನಾಡಿನಲ್ಲಿಯೇ ಕೆಲಸ ಮಾಡುವಂತಾಯಿತು.

ಒಗ್ಗರಣೆ: "ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ ನಿಮ್ಮ ರಾಜ್‍ಕುಮಾರ್ ಏನ್ ಮಾಡಿದ್ದಾರೆ?" ಎಂಬ ಪ್ರಶ್ನೆಯಲ್ಲದ ಪ್ರಶ್ನೆ ಕೇಳುವ ಅಜ್ಞಾನಿಗಳಿಗೆ ಈಗಾಗಲೇ ಇರುವ ಉತ್ತರಗಳೊಡನೆ, ಈ ವಿಷಯವನ್ನೂ ಸೇರಿಸಿ ಹೇಳಬಹುದೆಂದುಕೊಂಡಿರುವೆ.

~ ಮನ

This page is powered by Blogger. Isn't yours?